Advertisement

ಸ್ವಾಗತ ಕಮಾನು; ಗುತ್ತಿಗೆ ಹಂಚಿಕೆಯೇ ಸವಾಲು!

03:33 PM Apr 24, 2022 | Team Udayavani |

ಮಸ್ಕಿ: ಮಸ್ಕಿ ಸರಹದ್ದು ಎಂಟ್ರಿಯಾಗುವ ಪ್ರಯಾಣಿಕರನ್ನು ಸ್ವಾಗತಿಸಲು ಪ್ರತ್ಯೇಕ ಎರಡು ಕಡೆ ಸ್ವಾಗತ ಕಮಾನು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಆದರೆ ಕಮಾನು ನಿರ್ಮಾಣಕ್ಕೆ ಎರಡು ರಾಜಕೀಯ ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಆರಂಭವಾದ ಕಾಮಗಾರಿ ಈಗ ಅರ್ಧಕ್ಕೆ ಸ್ಥಗಿತವಾಗಿದೆ.

Advertisement

ಕವಿತಾಳ-ಮಸ್ಕಿ, ಮುದುಗಲ್‌-ಮಸ್ಕಿ ಮಾರ್ಗದ ಎರಡು ರಸ್ತೆಗಳಲ್ಲಿ ಸ್ವಾಗತ ಕಮಾನು ನಿರ್ಮಾಣಕ್ಕೆ ಈಗ ಅನುದಾನ ಬಿಡುಗಡೆಯಾಗಿದೆ. ಮಸ್ಕಿ ಪುರಸಭೆ ವ್ಯಾಪ್ತಿಯ ಎಸ್‌ಎಫ್‌ಸಿ ವಿಶೇಷ ನಿಧಿಯಡಿ ಎರಡು ಕಮಾನುಗಳ ನಿರ್ಮಾಣಕ್ಕೆ ಪ್ರತ್ಯೇಕ 10 ಲಕ್ಷ ರೂ.ಗಳಂತೆ 20 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕಾಮಗಾರಿ ನಿರ್ವಹಣೆಗೆ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಏಜೆನ್ಸಿಗೆ ವಹಿಸಲಾಗಿದೆ. ಆದರೆ ಗುತ್ತಿಗೆ ವಹಿಸಿಕೊಂಡ ಏಜೆನ್ಸಿಯಿಂದ ಕಾಮಗಾರಿ ಉಪಗುತ್ತಿಗೆ ಪಡೆಯಲು ಕಾಂಗ್ರೆಸ್‌-ಬಿಜೆಪಿ ಎರಡು ಪಕ್ಷದ ಮುಖಂಡರ ನಡುವೆ ಪೈಪೋಟಿ ನಡೆದಿದೆ.

ಕಳೆದ ಆರು ತಿಂಗಳಿಂದಲೂ ಗುತ್ತಿಗೆ ಪಡೆಯಲು ರಾಜಕೀಯ ಗುದ್ದಾಟ ನಡೆದಿತ್ತು. ಇದರ ಫಲವಾಗಿಯೇ ಹಲವು ದಿನಗಳಿಂದ ಕಾಮಗಾರಿ ಆರಂಭಿಸದೇ ಮುಂದೂಡಲಾಗಿತ್ತು. ಆದರೆ ಈಗ ಕಾಮಗಾರಿ ಆರಂಭಿಸಲಾಗಿದ್ದು, ಗುತ್ತಿಗೆ ಜಗಳ ತಾರಕಕ್ಕೇರಿದೆ.

ಪ್ರತಾಪಗೌಡ ಪಾಟೀಲ್‌ ಶಾಸಕರಿದ್ದ ಅವಧಿಯಲ್ಲಿ ಸ್ವಾಗತ ಕಮಾನುಗಳಿಗೆ ಅನುದಾನ ಬಿಡುಗಡೆಯಾಗಿದೆ ಎನ್ನುವ ಕಾರಣಕ್ಕೆ ಬಿಜೆಪಿಯ ಕೆಲ ಮುಖಂಡರು ಗುತ್ತಿಗೆ ಕೆಲಸ ಮಾಡಲು ಪಟ್ಟು ಹಿಡಿದಿದ್ದಾರೆ. ಕೆಆರ್‌ಐಡಿಎಲ್‌ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಈಗಾಗಲೇ ಎರಡು ಕಡೆಗಳಲ್ಲೂ ಕೆಲಸ ಆರಂಭಿಸಿದ್ದಾರೆ. ಹಾಲಿ ಶಾಸಕ ಆರ್‌.ಬಸನಗೌಡ ತುರುವಿಹಾಳ ಇದ್ದು, ಶಾಸಕರ ಒಪ್ಪಿಗೆ ಇಲ್ಲದೇ ಕಾಮಗಾರಿ ಹೇಗೆ ಆರಂಭಿಸಲಾಗಿದೆ? ಎನ್ನುವ ಪ್ರಶ್ನೆ ಕಾಂಗ್ರೆಸ್‌ ಕಾರ್ಯಕರ್ತರದ್ದಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರಿಗೆ ಗುತ್ತಿಗೆ ನೀಡಬೇಕು. ಆದರೆ ಬಿಜೆಪಿಗರಿಗೆ ಈ ಕೆಲಸ ನೀಡಲಾಗಿದೆ ಎನ್ನುವ ಅಪಸ್ವರ ಹಿನ್ನೆಲೆಯಲ್ಲಿ ಹಾಲಿ ಶಾಸಕ ಆರ್‌. ಬಸನಗೌಡ ತುರುವಿಹಾಳ ಕೆಆರ್‌ಐಡಿಎಲ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಇ ಧನಂಜಯ್‌ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, ಕೂಡಲೇ ಕೆಲಸ ಸ್ಥಗಿತಗೊಳಿಸಿ, ಮತ್ತೂಂದು ಜಾಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಾಮಗಾರಿ ನಿರ್ವಹಿಸಲು ಮಾಕೌìಟ್‌ ಮಾಡಿ ಕೊಟ್ಟು ಕೆಲಸ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಶಾಸಕರ ಸೂಚನೆ ಬಳಿಕವೂ ಬಿಜೆಪಿ ಕಾರ್ಯಕರ್ತರು ತಾವು ಆರಂಭಿಸಿದ ಕೆಲಸವನ್ನು ಅರ್ಧಕ್ಕೆ ಬಿಡಲ್ಲ. ನಾವು ಕೆಲಸ ಮಾಡಿಯೇ ತಿರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

Advertisement

ಅಡಕತ್ತರಿಯಲ್ಲಿ ಅಧಿಕಾರಿಗಳು: ಸ್ವಾಗತ ಕಮಾನು ನಿರ್ಮಾಣ ಕಾಮಗಾರಿಗಾಗಿ ಎರಡು ಪಕ್ಷಗಳ ನಡುವೆ ನಡೆದ ಕದನದ ಫಲವಾಗಿ ಕೆಆರ್‌ಐಡಿಎಲ್‌ ಹಾಗೂ ಪುರಸಭೆ ಅಧಿಕಾರಿಗಳು ಅಡಕತ್ತರಿಗೆ ಸಿಲುಕಿದ್ದಾರೆ. ಪುರಸಭೆ ಅನುದಾನವಾಗಿದ್ದು, ಕೆಆರ್‌ಐಡಿಎಲ್‌ ಗೆ ಗುತ್ತಿಗೆ ವಹಿಸಿದ್ದೇವೆ. ಗುತ್ತಿಗೆ ಹಂಚಿಕೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಆದರೆ ಇತ್ತ ಕೆಆರ್‌ಐಡಿಎಲ್‌ ಅಧಿಕಾರಿಗಳು ಮಾತ್ರ ಎರಡು ಕಡೆ ಹಾಲಿ ಶಾಸಕ ಬಸನಗೌಡ ತುರುವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಒತ್ತಡಕ್ಕೆ ನಲುಗಿ ಹೋಗಿದ್ದು, ಆರಂಭವಾದ ಕಾಮಗಾರಿ ಸ್ಥಿತಿ ಏನಾಗಲಿದೆಯೋ? ಕಾದು ನೋಡಬೇಕಿದೆ.

ಪುರಸಭೆಯ ಎಸ್‌ಎಫ್‌ಸಿ ಅನುದಾನದಲ್ಲಿ ತಲಾ 10 ಲಕ್ಷ ರೂ. ನಂತೆ ಎರಡು ಕಮಾನು ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ಕೆಆರ್‌ಐಡಿಎಲ್‌ ಏಜೆನ್ಸಿಗೆ ಗುತ್ತಿಗೆ ನೀಡಿದ್ದೇವೆ. ಉಪಗುತ್ತಿಗೆ ವಿಚಾರ ನನಗೆ ಗೊತ್ತಿಲ್ಲ. ಹನುಮಂತಮ್ಮ ನಾಯಕ, ಮುಖ್ಯಾಧಿಕಾರಿ ಪುರಸಭೆ, ಮಸ್ಕಿ.

-ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next