Advertisement

ಅಪಾಯದಂಚಿನಲ್ಲಿ ಸ್ವಾಗತ ಕಮಾನು

03:59 PM Dec 05, 2018 | |

ನರಗುಂದ: ಪಟ್ಟಣಕ್ಕೆ ಬರುವ ಸಾರ್ವಜನಿಕರು, ಪ್ರವಾಸಿಗರನ್ನು ಸ್ವಾಗತಿಸಲು ಪಟ್ಟಣ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಕುವುದು ವಾಡಿಕೆ. ಆದರೆ ಇಲ್ಲಿ ನಿರ್ಮಿಸಿರುವ ಕಮಾನು ಸ್ವಾಗತ ಬದಲು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪುರಸಭೆ ನಿರ್ಮಿಸಿದ ಕಮಾನು ಯಾವುದೇ ಕ್ಷಣದಲ್ಲಿ ಬೀಳುವ ಹಂತದಲ್ಲಿದೆ. ಆದರೂ ಇದರ ತೆರವು ಕಾರ್ಯ ಮಾತ್ರ ನಡೆದಿಲ್ಲ.

Advertisement

ಪಟ್ಟಣದ ಸವದತ್ತಿ ರಾಜ್ಯ ಹೆದ್ದಾರಿಯಿಂದ ದಂಡಾಪುರ ಬಡಾವಣೆ ಪಡುವಗೊಂಡ ಕೆರೆ ಹತ್ತಿರ ಸಂಗೊಳ್ಳಿ ರಾಯಣ್ಣ ವೃತ್ತ ಎದುರಿಗೆ ಅಸ್ತಿ ಪಂಜರದಂತೆ ಸ್ವಾಗತ ಕಮಾನು ಗೋಚರಿಸುತ್ತಿವೆ. ಅವೈಜ್ಞಾನಿಕವಾಗಿ ನಿರ್ಮಿಸಿದ್ದೇ ಅಪಾಯಕ್ಕೆ ಕಾರಣವಾಗಿದೆ. ಕಮಾನಿನ ಮೇಲಿನ ಕಬ್ಬಿಣದ ಗಲ್ಡರ್‌ ತುಕ್ಕು ಹಿಡಿಯುತ್ತಿರುವುದು ಅಪಾಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಮೂರು ಸಿಮೆಂಟ್‌ ಕಂಬಗಳ ಮೇಲೆ ಅರ್ಧ ಚಂದ್ರಾಕಾರದಲ್ಲಿ ಜೋಡಿಸಲಾದ ಕಬ್ಬಿಣದ ಗಲ್ಡರ್‌ನ ನಟ್‌ಗಳು ಯಾವಾಗಲೋ ಬಿಚ್ಚಿದ್ದು, ಯಾವುದೇ ಸಂದರ್ಭದಲ್ಲಿ ಕಬ್ಬಿಣದ ಗಲ್ಡರ್‌ ಹಾರಿ ಬೀಳುತ್ತದೋ ಎಂಬ ಭಯ ಇಲ್ಲಿನ ನಿವಾಸಿಗಳಲ್ಲಿ ತಲೆದೋರಿದೆ.

ಶ್ರೀಗಳ ನಾಮಾಂಕಿತ: ಸಣ್ಣ ದ್ವಾರಕ್ಕೆ ಪಡುವಗೊಂಡ ಕೆರೆಗೆ ಸ್ವಾಗತ ಮತ್ತು ಮುಖ್ಯ ರಸ್ತೆಗಿರುವ ಕಮಾನಿಗೆ ಪುರಸಭೆ ಸ್ವಾಗತ ಎಂದು ಬರೆಯಲಾಗಿತ್ತು. ಕಾಲಕ್ರಮೇಣ ನಾಮಧೇಯ ಅಳಿಸಿ ಹೋಗಿವೆ. ಈ ಕಮಾನಿಗೆ ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದ ಕತೃ ಲಿಂ| ಅಜ್ಜಪ್ಪಜ್ಜೇಂದ್ರ ಸ್ವಾಮಿಗಳು ಮತ್ತು ಎರಡನೇ ಪೀಠಾಧಿ ಪತಿ ಲಿಂ| ಶಿವಯ್ಯ ಜ್ಜೇಂದ್ರ ಸ್ವಾಮಿಗಳ ಹೆಸರು ಹಾಕಲಾಗಿದ್ದು ಸ್ಮರಿಸಬಹುದು. ಒಟ್ಟಾರೆ ದಂಡಾಪುರ ಬಡಾವಣೆಯಲ್ಲಿರುವ ಪಟ್ಟಣ ಪ್ರವೇಶದ ಸ್ವಾಗತ ಕಮಾನು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಗಮನ ಹರಿಸದ ಪುರಸಭೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸ್ವಾಗತ ಕಮಾನು ಅಪಾಯತಂದೊಡ್ಡುವ ಮುನ್ನ ಸರಿಪಡಿಸಬೇಕು ಎಂಬುದು ಸ್ಥಳೀಯರ ಕೋರಿಕೆಯಾಗಿದೆ.

 15 ವರ್ಷಗಳ ಹಿಂದೆ ನಿರ್ಮಾಣ
ಸುಮಾರು 15 ವರ್ಷಗಳ ಹಿಂದೆ ಈ ಸ್ವಾಗತ ಕಮಾನು ಪುರಸಭೆ ನಿರ್ಮಿಸಿದೆ. ಪಕ್ಕದಲ್ಲೇ ಐತಿಹಾಸಿಕ ಪಡುವಗೊಂಡ ಕೆರೆಯಿರುವ ಕಾರಣ ನಿವಾಸಿಗಳ ಕೋರಿಕೆಯಂತೆ ಎರಡು ಭಾಗವಾಗಿ ಒಂದು ಮುಖ್ಯರಸ್ತೆ, ಅದಕ್ಕೆ ಜೋಡಿಸಿ ಮತ್ತೊಂದು  ಕೆರೆಗೆ ಸ್ವಾಗತ ಕಮಾನು ಹಾಕಲಾಗಿದೆ. ರಸ್ತೆಗಿರುವ ಕಮಾನು 22 ಅಡಿ ಮತ್ತು ಕೆರೆಗಿರುವ ಕಮಾನು 15 ಅಡಿ ಅಗಲವಿದೆ. ಎರಡೂ ಕಮಾನು ಅತಿಹೆಚ್ಚು 25 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಮೂರು ಸಿಮೆಂಟ್‌ ಕಂಬಗಳ ಮೇಲೆ ಹಾಕಿದ ಗಲ್ಡರ್‌ ಕಂಬಗಳಿಗೆ ಸರಿಯಾದ ಜೋಡಣೆಯಾಗಿಲ್ಲ ಮತ್ತು ಅದಕ್ಕೆ ಹಾಕಿದ ನಟ್‌ ಬೋಲ್ಟ್‌ಗಳು ಕಳಚಿರುವುದೇ ಕಮಾನು ಅಪಾಯಕಾರಿಯಾಗಿ ಪರಿವರ್ತನೆಗೊಂಡಿದೆ. ಯಾವ ಕ್ಷಣದಲ್ಲಾದರೂ ಮೇಲಿರುವ ಗಲ್ಡರ್‌ ಕಿತ್ತು ಬೀಳಬಹುದು ಎಂಬುದು ಆತಂಕ ಸಾರ್ವಜನಿಕರಲ್ಲಿದೆ.

ಗಲ್ಡರ್‌ ಕೆಳಗಿಳಿಸಿ ಮರು ನಿರ್ಮಾಣ 
ಬಹಳ ಎತ್ತರವಿದ್ದರಿಂದ ಕ್ರೇನ್‌ ಮೂಲಕ ಗಲ್ಡರ್‌ಗಳನ್ನು ಕೆಳಗಿಳಿಸಬೇಕಿದೆ. ಶೀಘ್ರದಲ್ಲಿ ಗಲ್ಡರ್‌ಗಳನ್ನು ಕೆಳಗಿಳಿಸಿ ಕಮಾನು ಮರು ನಿರ್ಮಾಣ ಮಾಡುವ ಚಿಂತನೆ ನಡೆಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ಆತಂಕ ಎದುರಾಗದಂತೆ ನಿರ್ಮಿಸಲಾಗುವುದು.
. ಬಿ.ಎ. ನದಾಫ್‌, ಪುರಸಭೆ ಕಿರಿಯ ಅಭಿಯಂತರ 

Advertisement

ಸಿದ್ಧಲಿಂಗಯ್ಯ ಮಣ್ಣೂರಮಠ 

Advertisement

Udayavani is now on Telegram. Click here to join our channel and stay updated with the latest news.

Next