Advertisement

ಅವ್ಯವಸ್ಥೆ ಮಧ್ಯೆ ರಸ್ತೆಯಲ್ಲೇ ವಾರದ ಸಂತೆ

04:17 PM Mar 20, 2018 | Team Udayavani |

ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆಯುವ ವಾರದ ಸಂತೆಗೆ ಸಂಬಂಧಿಸಿದಂತೆ ಟೆಂಡರ್‌ ಪ್ರಕ್ರಿಯೆ ಪದೇಪದೇ ಮುಂದೂಡಲಾಗುತ್ತಿದ್ದು, ವ್ಯಾಪಾರಸ್ಥರು ಅವ್ಯವಸ್ಥೆ ಆಗರವಾದ ರಸ್ತೆ ಮಧ್ಯೆದಲ್ಲಿಯೇ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

Advertisement

ಸಂತೆ ಜಾಗ ಒತ್ತುವರಿ ತೆರುವುಗೊಳಿಸಲು ಪ್ರಾಂತ ರೈತ ಸಂಘಟನೆ 50 ದಿನಗಳ ಕಾಲ ನಿರಂತರ ಹೋರಾಟ ನಡೆಸಿದರೂ ಅಧಿಕಾರಿಗಳು ಮತ್ತು ಗ್ರಾಪಂ ಆಡಳಿತ ಮಂಡಳಿ ನಿರ್ಲಕ್ಷ್ಯವಹಿಸಿದ ಪರಿಣಾಮ ಪ್ರತಿ ವರ್ಷ ಲಕ್ಷಾಂತರ ರೂ. ಆದಾಯ ಕೊಕ್ಕೆ ಬಿದ್ದಿದೆ. ಸರ್ವೆ ನಂ.178ರಲ್ಲಿ 1.25 ಎಕರೆ ನಿವೇಶನ ಇದೆ. ಸುಮಾರು 25 ಗುಂಟೆ ಸಂತೆ ನಿವೇಶನ ಅತಿಕ್ರಮಣಗೊಂಡಿದೆ.

ಟೆಂಡರ್‌ ಪಡೆಯುವವರು ಮೊದಲು ಒತ್ತುವರಿ ಜಾಗ ತೆರುವುಗೊಳಿಸಿ ನಂತರವೇ ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕು ಎಂಬ ಆಗ್ರಹಕ್ಕೆ ಇಲ್ಲಿವರೆಗೆ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಟೆಂಡರ್‌ ವಿಳಂಬದಿಂದ ರಸ್ತೆ ಮಧ್ಯೆ ವಾರದ ಸಂತೆ
ನಡೆಯುತ್ತಿದೆ. ಇದರಿಂದ ವ್ಯಾಪಾರಸ್ಥರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರತಿ ವರ್ಷ 3 ಲಕ್ಷ ರೂ.ಗೆ ಟೆಂಡರ್‌ ನೀಡಲಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಇಂಥ ಪ್ರಕ್ರಿಯೆ ಚುರುಕಾಗಿ ನಡೆಯದೇ ಇರುವ ಕಾರಣ ಗ್ರಾಪಂ ಮೂಲಕವೇ ಮನಬಂದಂತೆ ಕರ ವಸೂಲಿ ಮಾಡಲಾಗುತ್ತಿದೆ. ಆದರೆ ಬಂದ ಹಣ ಎಲ್ಲಿ ಜಮಾ ಆಗುತ್ತಿದೆ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನಾನಾ ಸಂಘಟನೆಗಳು ಗ್ರಾಮದಲ್ಲಿ ಚುರುಕಾಗಿವೆ. ಆದರೆ ಸರಕಾರಿ ಸಂತೆ ನಿವೇಶನ ಒತ್ತುವರಿ ತೆರುವುಗೊಳಿಸಲು ಹೋರಾಟಕ್ಕೆ ಸ್ಪಂದನೆ ಕಾಣದೇ ಮೌನ ಆವರಿಸಿದೆ ಎನ್ನಲಾಗುತ್ತಿದೆ. ಆರೇಳು ತಿಂಗಳಿಗೊಮ್ಮೆ ಗ್ರಾಪಂ
ಅಭಿವೃದ್ಧಿ ಅಧಿಕಾರಿಗಳು ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಾಣಸಿಗುತ್ತಿಲ್ಲ ಎಂದು ದೂರಿದ್ದಾರೆ. ರಸ್ತೆ ಮಧ್ಯೆ ವಾರದ ಸಂತೆ ನಡೆಯುವುದರಿಂದ ಕಲುಷಿತ ವಾತಾವರಣದಿಂದ ತರಕಾರಿ ವ್ಯಾಪಾರ ವಹಿವಾಟಿಗೆ ಪೆಟ್ಟು ಬೀಳುತ್ತಿದೆ ಎಂದು ವ್ಯಾಪಾರಸ್ಥರು ದೂರಿದರು. ಗ್ರಾಪಂನಿಂದ ಸಂತೆ ಕರ ಪಡೆದರು ಅಗತ್ಯ ಮೂಲಸೌಲಭ್ಯ ಒದಗಿಸಲು ನಿರ್ಲಕ್ಷ್ಯ ಧೋರಣೆ
ತಾಳಿದ್ದರಿಂದ ಅವ್ಯವಸ್ಥೆ ಆಗರವಾದ ರಸ್ತೆಯೇ ವ್ಯಾಪಾರಸ್ಥರಿಗೆ ಶಾಪವಾಗಿ ಪರಿಣಮಿಸಿದೆ.

ಜಾಲಹಳ್ಳಿ ಬೆಳೆಯುತ್ತಿದೆ. ಚರಂಡಿ ಸ್ವತ್ಛತೆಗೆ ಗಮನಹರಿಸದೇ ಇರುವುದರಿಂದ ಸಂಜೆಯಾದರೆ ಸೊಳ್ಳೆ ಕಾಟ ಹೆಚ್ಚಾಗುತ್ತದೆ. ಫಾಗಿಂಗ್‌ ಮಾಡಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾತಗಿದೆ ಎಂದು ಗ್ರಾಮಸ್ಥ ಶಿವರಾಜ ನಾಯಕ ದೂರಿದರು. ರಾಜ್ಯಪಾಲರ ಹೆಸರಲ್ಲಿ ಸಂತೆ ನಿವೇಶನ ಇದೆ. ಗ್ರಾಪಂಗೆ ವರ್ಗಾಯಿಸಲು ಈಗಾಗಲೇ ಸರ್ವೇ ಮಾಡುವಂತೆ ಕೋರಲಾಗಿದೆ. ಜಾಗ ಒತ್ತುವರಿ ಆಗಿದೆ. ಇದರ ಬಗ್ಗೆ ನೋಟಿಸ್‌ ಜಾರಿ ಮಾಡಲಾಗಿದೆ. ವಾರದಲ್ಲಿ ತೆರುವುಗೊಳಿಸಿ ಉದ್ಯೋಗ ಖಾತ್ರಿಯಲ್ಲಿ ತಂತಿ ಬೇಲಿ ಹಾಕಿಸಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುತ್ತದೆ.
ಪತ್ತಪ್ಪ ರಾಠೊಡ,ಪಿಡಿಒ

Advertisement

ಸಂತೆ ಜಾಗ ಒತ್ತುವರಿ ಕುರಿತು 50 ದಿನಗಳ ಕಾಲ ನಿರಂತರ ಹೋರಾಟ ನಡೆಸಲಾಗಿದೆ. ಇಂದೋ ನಾಳೆ ತೆರುವುಗೊಳಿಸುವ ಅಧಿ ಕಾರಿಗಳ ಭರವಸೆ ಹುಸಿಯಾಗಿದೆ. ಗ್ರಾಪಂ ಆಡಳಿತ ಮಂಡಳಿ ಇದ್ದೂ ಇಲ್ಲದಂತಾಗಿದೆ. ಹಾಗಾಗಿ ಗ್ರಾಮದ ಅಭಿವೃದ್ಧಿಗೆ ಗ್ರಹಣ ಹಿಡಿದೆ.
 ನರಸಣ್ಣ ನಾಯಕ, ರೈತ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next