ಬೆಂಗಳೂರು: ಕಮ್ಮನಹಳ್ಳಿಯ ಬಿಬಿಎಂಪಿ ಉದ್ಯಾನದಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ನಗರದಲ್ಲಿರುವ ಎಲ್ಲ ಉದ್ಯಾನಗಳ ವಸ್ತುಸ್ಥಿತಿ ಅರಿಯಲು ಮುಂದಾಗಿದೆ.
ಪಾಲಿಕೆಯಿಂದ ನಿರ್ವಹಿಸುತ್ತಿರುವ ಉದ್ಯಾನಗಳಲ್ಲಿ ಪದೇ ಪದೆ ಅವಘಡಗಳು ಸಂಭವಿಸಿ ಸಾವು-ನೋವಾಗುವುದು ಆತಂಕ ಸೃಷ್ಟಿಸುವ ವಿಷಯವಾಗಿದ್ದು, ನಗರದಲ್ಲಿರುವ ಎಲ್ಲ ಉದ್ಯಾನಗಳ ಸ್ಥಿತಿಗತಿಗಳ ಕುರಿತಂತೆ ವಿವರವಾದ ವರದಿ ಪಡೆಯಲು ಪಾಲಿಕೆ ನಿರ್ಧರಿಸಿದೆ.
ನಗರದಲ್ಲಿರುವ ಉದ್ಯಾನಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಗಳು, ಉದ್ಯಾನಗಳಲ್ಲಿರುವ ಸೌಲಭ್ಯಗಳು ಹಾಗೂ ಸಮಸ್ಯೆಗಳ ಕುರಿತು ವರದಿ ನೀಡುವಂತೆ ಜಂಟಿ ಆಯುಕ್ತರಿಗೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಆದೇಶಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1250ಕ್ಕೂ ಉದ್ಯಾನಗಳಿದ್ದು, ಬೇಸಿಗೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಆಟವಾಡಲು ಉದ್ಯಾನಗಳಿಗೆ ಬರುತ್ತಾರೆ.
ಹೀಗಾಗಿ ಉದ್ಯಾನಗಳಲ್ಲಿರುವ ಅವ್ಯವಸ್ಥೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಳೆದ ಪಾಲಿಕೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ್ದರು. ಆ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ಉದ್ಯಾನಗಳ ಸಂಪೂರ್ಣ ಮಾಹಿತಿ ನೀಡುವಂತೆ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ಉದ್ಯಾನಗಳಲ್ಲಿ ಮಕ್ಕಳಿಗೆ ಅಪಾಯಕಾರಿಯಾದ ಅಂಶಗಳನ್ನು ಕೂಡಲೇ ತೆರವುಗೊಳಿಸುವ ಮೂಲಕ ಮಕ್ಕಳ ಸ್ನೇಹಿಯಾಗಿಸುವಂತೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಉದ್ಯಾನಗಳಲ್ಲಿ ಹಾಳಾಗಿರುವ ಬೀದಿ ದೀಪಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳು ಶೀಘ್ರದಲ್ಲಿಯೇ ಪಾಲಿಕೆಗೆ ವರದಿ ಸಲ್ಲಿಕೆ ಮಾಡಲಿದ್ದಾರೆ.
ಕಮ್ಮನಹಳ್ಳಿ ಉದ್ಯಾನ ಕಾಮಗಾರಿಯನ್ನು ಬಿಡಿಎಗೆ ವಹಿಸಲಾಗಿತ್ತು. ಆದರೆ, ಗುತ್ತಿಗೆದಾರರು ಅರ್ಧಕ್ಕೆ ಕೆಲಸ ಬಿಟ್ಟುಕೊಂಡಿದ್ದರಿಂದ ಅವಘಡ ನಡೆದಿದೆ. ಹೀಗಾಗಿ ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲ ಉದ್ಯಾನಗಳ ಸ್ಥಿತಿಗತಿಯ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ