Advertisement

ವಾರಾಂತ್ಯ, ಸರಣಿ ರಜೆ: ಧಾರ್ಮಿಕ ಕ್ಷೇತ್ರ,ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

01:33 AM May 12, 2024 | Team Udayavani |

ಮಲ್ಪೆ: ಸರಣಿ ರಜೆ ಮತ್ತು ವಾರಾಂತ್ಯದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿದ್ದು, ಮಲ್ಪೆ ಕಡಲ ಕಿನಾರೆಗೆ ಜನಸಾಗರವೇ ಹರಿದು ಬಂದಿದೆ. ಮಲ್ಪೆ ಬೀಚ್‌ ಹಾಗೂ ಸೀವಾಕ್‌ ವೇ ನಲ್ಲಿ ಜನಜಂಗುಳಿ ಉಂಟಾಗಿದ್ದು, ಸಂಜೆಯಾಗುತ್ತಿದ್ದಂತೆ ಮಲ್ಪೆ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

Advertisement

ಶುಕ್ರವಾರದಿಂದ ಸರಣಿ ರಜೆ ಇರುವುದರಿಂದ ಬೆಳಗ್ಗೆಯಿಂದಲೇ ವಾಹನದಟ್ಟಣೆ ಇತ್ತು. ಶನಿವಾರ ಮಧ್ಯಾಹ್ನದಿಂದ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಸುಗುಮ ಸಂಚಾರಕ್ಕೆ ತೊಡಕಾಗಿತ್ತು. ಮಲ್ಪೆ ಮಾರ್ಗ ಕಿರಿದಾಗಿರುವ ಪರಿಣಾಮ ನಿತ್ಯವೂ ಟ್ರಾಫಿಕ್‌ಜಾಮ್‌ ಸಮಸ್ಯೆಯನ್ನು ಎದುರಿಸುತ್ತಿರುವ ಮಲ್ಪೆ ರಸ್ತೆಯಲ್ಲಿ ಇದೀಗ ಪ್ರವಾಸಿ ಹೆಚ್ಚಿನ ಸಂಚಾರದಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ ಮಲ್ಪೆ ಬೀಚ್‌ ಪರಿಸರದಲ್ಲಿ ವಾಹನಗಳ ಪಾರ್ಕಿಂಗ್‌ಗೂ ಸಮಸ್ಯೆ ಉಂಟಾಯಿತು.

ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ ಭಕ್ತ ಸಾಗರ
ಕೊಲ್ಲೂರು: ಎರಡು ದಿನಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಶನಿವಾರವೂ ಭಕ್ತರಿಂದ ದೇಗುಲು ತುಂಬಿತ್ತು. ಆದರೆ ಯಾವುದೇ ರೀತಿಯ ನೂಕು ನುಗ್ಗಲಾಗಲೀ, ಅವಘಡಗಳಾಗಲೀ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.

ಸುಮಾರು 30 ಸಾವಿರಕ್ಕೂ ಮಿಕ್ಕಿ ಭಕ್ತರು:- ನಾನಾ ಭಾಗಗಳಿಂದ ಆಗಮಿಸಿದ್ದರು. ಎಲ್ಲ ವಸತಿ ಗೃಹಗಳು ತುಂಬಿರುವುದರಿಂದ ಅನೇಕರು ವಾಹನದಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವರು ಸನಿಹದ ಅರಣ್ಯ ಪ್ರದೇಶವನ್ನು ದಣಿವಾರಿಸಲು ಬಳಸಿದ್ದರು.

ನೀರಿಗೆ ಬೇಡಿಕೆ: ಬಿಸಿಲ ತಾಪದಿಂದ ಬಳಲಿದ ಅನೇಕ ಮಂದಿ ಬಾಟಲಿ ನೀರಿಗಾಗಿ ಅಂಗಡಿಮುಂಗಟ್ಟುಗಳನ್ನು ಆಶ್ರಯಿಸಿದರು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದ ಕಾರಣದಿಂದ ವಾಹನ ನಿಲುಗಡೆ ವ್ಯವಸ್ಥೆ ಯಲ್ಲೂ ಗೊಂದಲ ಉಂಟಾಯಿತು. ಒಂದಿಷ್ಟು ಸಮಯ ಟ್ರಾಫಿಕ್‌ ಜಾಮ್‌ ಸಹ ಆಯಿತು.

Advertisement

ಧರ್ಮಸ್ಥಳ ಕ್ಷೇತ್ರದಲ್ಲಿ ಯಾತ್ರಿಕರ ದಂಡು
ಬೆಳ್ತಂಗಡಿ: ಮೂರು ದಿನ ಸರಕಾರಿ ರಜೆಯಾದ್ದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಶುಕ್ರವಾರ, ಶನಿವಾರ, ರವಿವಾರ ಸಹಿತ ಸೋಮವಾರ ಶಿವನ ವಿಶೇಷ ದಿನವಾಗಿದ್ದರಿಂದ ನಾಡಿನೆಲ್ಲೆಡೆಯಿಂದ ಭಕ್ತರು, ಪ್ರವಾಸಿಗರು ಮಂಜುನಾಥ ಸ್ವಾಮಿ ದರ್ಶನಕ್ಕೆ ಬರುತ್ತಿದ್ದು, ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದರು.

ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತ ಭಕ್ತರು, ರಾತ್ರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ದೇವರ ದರ್ಶನ ಪಡೆದು ವಿಶೇಷ ಸೇವೆ ಸಲ್ಲಿಸಿ, ಅನ್ನಪ್ರಸಾದ ಸ್ವೀಕರಿಸಿದರು.ಬಿಸಿಲಿನ ಬೇಗೆಗೆ ಕ್ಷೇತ್ರದ ಮುಂಭಾಗ ಭಕ್ತರಿಗೆ ನೆರಳನ್ನು ಆಶ್ರಯಿಸುವ ಸಲುವಾಗಿ ನಡೆದಾಡುವ ಸ್ಥಳದಲ್ಲಿ ಗ್ರೀನ್‌ ನೆಟ್‌ ಅಳವಡಿಸಿರುವುದು ಕಂಡು ಬಂದಿತು.

ಸುಬ್ರಹ್ಮಣ್ಯಕ್ಕೂ ಅಧಿಕ ಸಂಖ್ಯೆಯ ಭಕ್ತರ ಆಗಮನ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದರು.ಶುಕ್ರವಾರದಿಂದಲೇ ಭಕ್ತರು ಅಪಾರ ಸಂಖ್ಯೆಯಲ್ಲಿ ಬರತೊಡಗಿದ್ದರು. ಶನಿವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ರವಿವಾರ ಇನ್ನೂ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಕುಕ್ಕೆ ಕ್ಷೇತ್ರದ ಪೇಟೆ, ದೇವಳದಲ್ಲಿ ಭಕ್ತರ ದಟ್ಟಣೆ ಕಂಡುಬಂದಿದೆ.

ಹೆಚ್ಚಿನ ಸೇವೆಗಳನ್ನು ಭಕ್ತರು ನೆರವೇರಿಸಿದ್ದಾರೆ.ಕುಕ್ಕೆಗೆ ಶನಿವಾರ 15 ಸಾವಿಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ ಎಂದು ಅಂದಾಜಿಸಲಾಗಿದ್ದು, 4 ಸಾವಿರಕ್ಕೂ ಅಧಿಕ ವಿವಿಧ ಸೇವೆಗಳನ್ನು ನೆರವೇರಿಸಲಾಗಿದೆ. ಅಧಿಕ ಭಕ್ತರ ಆಗಮನ ಆಗಿದ್ದರೂ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ದೇವಸ್ಥಾನದ ವತಿಯಿಂದ ಪೂರಕ ವ್ಯವಸ್ಥೆ ಕಲ್ಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next