Advertisement

ಇಂದಿನಿಂದ ವೀಕೆಂಡ್‌ ವಿತ್‌ ರಮೇಶ್‌

04:52 PM Apr 21, 2019 | Lakshmi GovindaRaju |

ನಟ ರಮೇಶ್‌ ಅರವಿಂದ್‌ ಮತ್ತೆ ಕಿರುತೆರೆ ಪ್ರೇಕ್ಷಕರ ಮುಂದೆ ಆಗಮಿಸುತ್ತಿದ್ದಾರೆ. ಎಂದಿನಂತೆ ಅವರು “ವೀಕೆಂಡ್‌’ನಲ್ಲೇ ಸಿಗಲಿದ್ದಾರೆ ಎಂಬುದು ವಿಶೇಷ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಕಳೆದ ಮೂರು ಸೀಸನ್‌ನಲ್ಲೂ ಯಶಸ್ವಿಯಾಗಿ ನಡೆಸಿಕೊಟ್ಟ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದ ಮೂಲಕ ರಮೇಶ್‌ ಪುನಃ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

“ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌-4′ ಇಂದಿನಿಂದ (ಏ. 20) ಶುರುವಾಗುತ್ತಿದೆ. ಪ್ರತಿ ಶನಿವಾರ ಹಾಗು ಭಾನುವಾರ ರಾತ್ರಿ 9.30 ಕ್ಕೆ ರಮೇಶ್‌ ಅವರು ಸಾಧಕರೊಂದಿಗೆ ಆಗಮಿಸಿ, ಅವರ ಅಪರೂಪದ ಸಾಧನೆಗಳನ್ನು ತಿಳಿಸಿಕೊಡಲಿದ್ದಾರೆ.

ಎರಡುವರೆ ವರ್ಷಗಳ ಬಳಿಕ ಹೊಸತನದೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಬರುತ್ತಿರುವ ರಮೇಶ್‌ ಅರವಿಂದ್‌, ಹಿಂದಿನ ಮೂರು ಸೀಸನ್‌ಗಳಲ್ಲಿ ಸಾಧಕರ ಸೀಟಿನಲ್ಲಿ ಕುಳಿತಿದ್ದವರ ಸಾಧನೆಯ ಹಾದಿಯನ್ನು ಜನರ ಮುಂದೆ ಇಟ್ಟಿರುವುದಷ್ಟೇ ಅಲ್ಲ, ಅವರ ಭಾವನೆ ಮತ್ತು ಭಾವುಕತೆಯನ್ನು ಹೊರಹಾಕುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು.

ಈ ಕಾರ್ಯಕ್ರಮದಲ್ಲಿ ಸಾಧಕರು ತಮ್ಮ ಬಾಲ್ಯದಲ್ಲಿ ಅನುಭವಿಸಿದ ನೋವು-ನಲಿವು, ಅವಮಾನ, ಕಲಿತ ಪಾಠ, ಕಳೆದುಕೊಂಡ ಸಂಬಂಧ, ಗಳಿಸಿಕೊಂಡ ಗೆಳೆತನ, ದುಃಖ ಹಾಗು ಖುಷಿನ ಕ್ಷಣಗಳು ಹೀಗೆ ಇನ್ನೂ ಅನೇಕ ಅಪರೂಪದ ವಿಷಯಗಳನ್ನು ನೋಡುಗರ ಮುಂದಿಟ್ಟ ಕೀರ್ತಿ “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮಕ್ಕೆ ಸಲ್ಲುತ್ತದೆ.

ಈ ಕಾರ್ಯಕ್ರಮ ನೋಡುವ ಪ್ರೇಕ್ಷಕರಿಗೆ ಸ್ಫೂರ್ತಿಯೂ ಹೌದು. ತಮ್ಮ ಪ್ರೀತಿಯ ನಟ, ನಟಿ ತಮ್ಮ ರಂಗದಲ್ಲಿ ಹೇಗೆಲ್ಲಾ ಸಾಧನೆ ಮಾಡಿದರು. ಏನೆಲ್ಲಾ ಸಮಸ್ಯೆ ಎದುರಿಸಿದರು ಇತ್ಯಾದಿ ವಿಷಯಗಳು ಕಾರ್ಯಕ್ರಮದ ಹೈಲೈಟ್‌. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಮುಖ್ಯ ಆಕರ್ಷಣೆಯಾಗಿದೆ.

Advertisement

ಕಾರಣ, ವಿಭಿನ್ನವಾಗಿರುವ ಪ್ರೋಮೋ ಎಂಬುದು. ಪ್ರೋಮೋಗಾಗಿಯೇ ಮಂದಾಲಪಟ್ಟಿಯ ತುದಿಯ ಮೇಲೊಂದು ಸೆಟ್‌ ನಿರ್ಮಿಸಿ, ಅಲ್ಲಿ ಪ್ರೋಮೋ ಚಿತ್ರೀಕರಿಸಿರುವುದು ವಿಶೇಷ. ಅದಕ್ಕಾಗಿ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ರಮೇಶ್‌ ಅರವಿಂದ್‌ ಅವರಿಗೆ ಈ ಕಾರ್ಯಕ್ರಮ ಅಂದರೆ ತುಂಬಾನೇ ಪ್ರೀತಿ.

“ಅದೊಂದು ಒಳ್ಳೆಯ ವೇದಿಕೆ ಎನ್ನುವ ಅವರು, ಇದುವರೆಗೆ ಸಾಧಕರ ವಿಷಯಗಳನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ. ಈ ಸೀಸನ್‌ 4ರ ಕಾರ್ಯಕ್ರಮ ಹಿಂದಿನ ಕಾರ್ಯಕ್ರಮಗಳಿಗಿಂತಲೂ ಅದ್ಭುತವಾಗಿರಲಿದೆ ಎಂಬುದು ಅವರ ಮಾತು.

ಈ ಸೀಸನ್‌ನಲ್ಲೂ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಯಾರೆಲ್ಲಾ ಇರುತ್ತಾರೆ ಎಂಬುದನ್ನು “ವೀಕೆಂಡ್‌ ವಿಥ್‌ ರಮೇಶ್‌’ ಕಾರ್ಯಕ್ರಮದಲ್ಲೇ ನೋಡಬೇಕು ಎನ್ನುತ್ತಾರೆ ರಮೇಶ್‌ ಅರವಿಂದ್‌.

ಇನ್ನು, ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು, “ಪ್ರತಿ ಸೀಜನ್‌ನಂತೆ ಈ ಸೀಜನ್‌ನಲ್ಲೂ ವಿಶೇಷ ಸಾಧಕರನ್ನು ಸಾಧಕರ ಸೀಟಿನ ಮೇಲೆ ಕೂರಿಸಲಿದ್ದೇವೆ. ಸಾಧಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ಅವರ ಸಾಧನೆಯ ಹಾದಿ ಪ್ರೇಕ್ಷಕರಿಗೆ ಒಂದು ರೀತಿ ಸ್ಪೂರ್ತಿ ನೀಡಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ.

ಕಳೆದ ಮೂರು ಸೀಸನ್‌ಗೆ ಕೊಟ್ಟ ಪ್ರೀತಿ ಈ ಸೀಸನ್‌ಗೂ ನೀಡಿ. ಇನ್ನು ನಾಲ್ಕನೆ ಸೀಸನ್‌ ಮುಗಿದ ನಂತರ ನಾಲ್ಕು ಸೀಸನ್‌ನಲ್ಲಿ ಸಾಧಕರ ಸೀಟಿನ ಮೇಲೆ ಆಸೀನರಾಗಿದ್ದ ಅತಿಥಿಗಳನ್ನು ಕರೆಸಿ ಮತ್ತೂಂದು ಅದ್ಭುತ ಕಾರ್ಯಕ್ರಮ ಮಾಡಿ ನಾಲ್ಕು ಸೀಸನ್‌ ಸಿ.ಡಿ ಹಾಗೂ ವೀಕೆಂಡ್‌ ವಿಥ್‌ ರಮೇಶ್‌ ಪುಸ್ತಕ ಬಿಡುಗಡೆ ಮಾಡಲಿದ್ದೇವೆ’ ಎಂದು ವಿವರ ಕೊಟ್ಟರು ರಾಘವೇಂದ್ರ ಹುಣಸೂರು.

Advertisement

Udayavani is now on Telegram. Click here to join our channel and stay updated with the latest news.

Next