Advertisement

ವೀಕೆಂಡ್‌ ಟ್ರಿಪ್‌ ಹೋಗುವವರ ಡಮ್ಕಿ  ಢಮಾರ್‌

10:45 AM Mar 31, 2017 | |

ಹೆಚ್ಚು ಮಾತಾಡುವುದಿಲ್ಲ ಅಂತಲೇ ಬಂದಿದ್ದರಂತೆ ನಿರ್ದೇಶಕ ಪ್ರದೀಪ್‌ ವರ್ಮ. ಆದರೆ, ವೇದಿಕೆ ಮೇಲಿದ್ದ ಗಣ್ಯರು, ಎದುರಿಗಿದ್ದ ಸಭಿಕರನ್ನು ನೋಡಿ ಅವರಿಗೆ ಅದೇನನ್ನಿಸಿತೋ ಗೊತ್ತಿಲ್ಲ. ಮಾತಾಡುತ್ತಲೇ ಹೋದರು. ಮಾತು ಎನ್ನುವುದಕ್ಕಿಂತ ಧನ್ಯವಾದ ಸಮರ್ಪಣೆಯೇ ಮುಖ್ಯವಾಗಿತ್ತು ಎಂದರೆ ತಪ್ಪಿಲ್ಲ. ಅದಕ್ಕಾಗಿಯೇ ಮೊಬೈಲ್‌ನಲ್ಲೇ ಅವರು ಯಾರ್ಯಾರ ಹೆಸರನ್ನು ಹೇಳಬೇಕು ಎಂದು ಬರೆದುಕೊಂಡು ಬಂದ್ದಿದರು. ಒಬ್ಬೊಬ್ಬರ ಹೆಸರನ್ನು ಹೇಳಿ, ಅವರೆಲ್ಲರಿಗೆ ಧನ್ಯವಾದ ಸಮರ್ಪಿಸಿದರು ಪ್ರದೀಪ್‌ ..

Advertisement

“ಡಮ್ಕಿ ಢಮಾರ್‌’ ಎನ್ನುವ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದು. ಈ ಚಿತ್ರದ ಮೂಲಕ ಪ್ರದೀಪ್‌ ಹೀರೋ ಆಗುತ್ತಿದ್ದಾರೆ. ಇದುವರೆಗೂ ಹಲವು ಚಿತ್ರಗಳಿಗೆ ಆಡಿಯೋ ಇಂಜಿನಿಯರ್‌ ಆಗಿ ಕೆಲಸ ಮಾಡಿದ್ದ ಪ್ರದೀಪ್‌, ಈಗ “ಡಮ್ಕಿ ಢಮಾರ್‌’
ಚಿತ್ರದ ಮೂಲಕ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಸಹ ಅವರೇ. ಈ ಚಿತ್ರವನ್ನು ಅವರ ತಂದೆ ಸದ್ಗುಣಮೂರ್ತಿ ನಿರ್ಮಿಸುತ್ತಿದ್ದಾರೆ. ಸದ್ಗುಣಮೂರ್ತಿ ಸಹ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಆಡಿಯೋ
ಎಂಜಿನಿಯರ್‌ ಆಗಿ ಗುರುತಿಸಿಕೊಳ್ಳುವುದರ ಜೊತೆಗೆ, ಹಲವು ಚಿತ್ರಗಳಿಗೆ ಕೆಲಸ ಮಾಡಿದವರು. ಅವರ ಮೇಲಿನ ಸ್ನೇಹಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಬಂದಿದ್ದರು.

ಜೊತೆಗೆ ರಾಜ್‌ ಬಹದ್ದೂರ್‌, ಮನೋಮೂರ್ತಿ, ಎಚ್‌. ವಾಸು ಮುಂತಾದವರು ಸಹ ಇದ್ದರು. ಧನ್ಯವಾದಗಳನ್ನು ಸಮರ್ಪಿಸುವುದರ ಜೊತೆಗೆ ಪ್ರದೀಪ್‌, ಈ ಚಿತ್ರದ ಬಗ್ಗೆ ಸ್ವಲ್ಪ ಮಾಹಿತಿ ನೀಡಿದರು. “ಸಾಫ್ಟ್ವೇರ್‌ ಯುವಕ-ಯುವತಿಯರು ವಾರಾಂತ್ಯದಲ್ಲಿ ಟ್ರಿಪ್‌ಗೆ ಹೋಗುತ್ತಾರೆ. ಹಾಗೆ ಹೋಗುವ ಸಂದರ್ಭದಲ್ಲಿ ಕೆಲವು ಘಟನೆಗಳಾಗುತ್ತವೆ. ಅವರು ಏನೇನು ಸಮಸ್ಯೆಗಳನ್ನು ಎದುರಿಸುತ್ತಾರೆ
ಮತ್ತು ಅವರು ಅದೆಲ್ಲದರಿಂದ ಹೇಗೆ ಹೊರಗೆ ಬರುತ್ತಾರೆ ಎನ್ನುವುದೇ ಚಿತ್ರದ ಕಥೆ’ ಎಂದು ಹೇಳಿದರು ಪ್ರದೀಪ್‌. ಮಾತು ಮುಗಿಸುವ
ಮುನ್ನ ಇಡೀ ಸಿನಿಮಾ ಬಹಳ ಕುತೂಹಲವಾಗಿ ನೋಡಿಸಿಕೊಂಡು ಹೋಗುತ್ತದೆ ಎಂದು ಸಹ ಹೇಳಿದರು.

ಸಾ.ರಾ. ಗೋವಿಂದು ಅವರು ಸದ್ಗುಣಮೂರ್ತಿಯವರೊಂದಿಗಿನ ಗೆಳೆತನದ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲ, ಚಾಮುಂಡೇಶ್ವರಿ
ಸ್ಟುಡಿಯೋದಿಂದ ಅದೆಷ್ಟು ಸಂಗೀತಗಾರರು ಬದುಕುಕಟ್ಟಿಕೊಂಡಿದ್ದಾರೆ ಎನ್ನುವುದುರ ಜೊತೆಗೆ, ಪ್ರದೀಪ್‌ ಅವರು ನಾಯಕನಾಗಿ ಬೆಳೆಯಲಿ ಎಂದು ಹಾರೈಸಿದರು. ಸಂಗೀತ ನಿರ್ದೇಶಕ ಮನೋಮೂರ್ತಿ ಸಹ ಪ್ರದೀಪ್‌ಗೆ ಹಾರೈಸುವುದರ ಮೂಲಕ ಸಮಾರಂಭ
ಮುಗಿಯಿತು.

Advertisement

Udayavani is now on Telegram. Click here to join our channel and stay updated with the latest news.

Next