ಬೆಂಗಳೂರು : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಬಗ್ಗೆ ಸರಕಾರದ ಹಂತದಲ್ಲಿ ಮಹತ್ವದ ಚರ್ಚೆ ನಡೆಯುತ್ತಿದ್ದು, ಶುಕ್ರವಾರ ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹೊಟೇಲ್ ಸಂಘ, ಬಾರ್ ಆಂಡ್ ರೆಸ್ಟೋರೆಂಟ್, ನಾನಾ ವರ್ತಕ ಸಂಘಟನೆಗಳ ಜತೆಗೆ ಆಡಳಿತಾರೂಢ ಬಿಜೆಪಿಯಿಂದಲೇ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ತೆರವು ಮಾಡಬೇಕೆಂದು ಆಗ್ರಹ ವ್ಯಕ್ತವಾಗಿದೆ. ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೈಟ್ ಕರ್ಫ್ಯೂ ಬೇಡ ಎಂದು ಪ್ರತಿಪಾದಿಸಿದ್ದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾರಾಂತ್ಯಕರ್ಫ್ಯೂ ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿರುವ ಬಿಬಿಎಂಪಿ ಕಮಿಷನರ್ ಗೌರವ ಗುಪ್ತಾ, ಕರ್ಫ್ಯೂ ಸಡಿಲಿಕೆ ಸುಳಿವು ನೀಡಿದ್ದಾರೆ. ಒಂದು ವಾರಗಳ ಕಾಲ ನಿಯಮ ಪಾಲನೆ ಮಾಡುವುದು ಅನಿವಾರ್ಯ. ಈಗಿರುವ ನಿಯಮಗಳು ಇನ್ನು ಒಂದು ವಾರಗಳ ಕಾಲ ಮುಂದುವರಿಯಬಹುದು ಎಂದು ಹೇಳಿದ್ದಾರೆ.
ನೈಟ್ ಕರ್ಪ್ಯೂ ಹಾಗೂ ವೀಕೆಂಡ್ ಕರ್ಫ್ಯೂ ತೆರವು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರವೂ ಹೊಟೇಲ್ ಮಾಲೀಕರ ಸಂಘ ಸರಕಾರಕ್ಕೆ ಮತ್ತೆ ಮನವಿ ಸಲ್ಲಿಸಿದೆ. ವೀಕೆಂಡ್ ವಿನಾಯಿತಿ ಸಿಗುವ ಸಾಧ್ಯತೆ ಇದೆ ಎಂದು ಹೊಟೇಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಮವಾರ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರಾಂತ್ಯದ ಕರ್ಫ್ಯೂ ಸೇರಿದಂತೆ ನಿಯಮ ಸಡಿಲಿಕೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಮಾಸಾಂತ್ಯದ ವೇಳೆಗೆ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಲೇ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದರಿಂದ ಸರಕಾರ ಎಚ್ಚರಿಕೆ ಹೆಜ್ಜೆ ಹಾಕಲು ತೀರ್ಮಾನಿಸಿದೆ.