Advertisement
ಮನೆ, ಜಮೀನು ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿದ್ದ ಯುವತಿ ಭಾನುವಾರ ಹಸೆಮಣೆ ಏರುವಾಗ ಇಡೀ ಶಿಬಿರವೇ ಸಂತಸಗೊಂಡಿತು. ಸೇವಾ ಭಾರತಿ ಮತ್ತು ಮಡಿಕೇರಿ ಲಯನ್ಸ್ ಕ್ಲಬ್ ನೆರವಿನೊಂದಿಗೆ ಮಕ್ಕಂದೂರು ನಿವಾಸಿ ಬೇಬಿಯವರ ಮಗಳು ಆರ್. ಮಂಜುಳಾ ಹಾಗೂ ಕೇರಳದ ಕಣ್ಣೂರಿನ ರಜೀಶ್ ಎಂಬುವರನ್ನು ವರಿಸಿದರು.
Related Articles
Advertisement
ಮದುವೆಗಾಗಿ ದೇವಸ್ಥಾನ ಮತ್ತು ನಿರಾಶ್ರಿತರ ಶಿಬಿರದ ಮುಂಭಾಗವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಕೇರಳದ ಕಣ್ಣೂರಿನ ರಜೀಶ್ ಭಾನುವಾರ ಬೆಳಗ್ಗೆಯೇ ಕುಟುಂಬ ಸಮೇತರಾಗಿ ಮಡಿಕೇರಿಗೆ ಬಂದಿದ್ದರು. ವಧು ಮತ್ತು ವರನಿಗೆ ಶಿಬಿರದಲ್ಲೇ ಮದುವೆ ಅಲಂಕಾರ ಮಾಡಲಾಗಿತ್ತು. ವಧುವಿಗೆ ಶನಿವಾರ ರಾತ್ರಿ ಶಿಬಿರದ ಸದಸ್ಯರೇ ಸುಂದರವಾಗಿ ಮೆಹಂದಿ ಹಚ್ಚಿದ್ದರು.
ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶಿಬಿರದಿಂದ ಕಾಲ್ನಡಿಗೆಯಲ್ಲಿ ಹೊರಟ ಮದುವೆ ದಿಬ್ಬಣ, 10.30 ಸುಮಾರಿಗೆ ದೇವಸ್ಥಾನ ತಲುಪಿತ್ತು. ಓಂಕಾರೇಶ್ವರ ದೇವಸ್ಥಾನದಲ್ಲಿ ರಜೀಶ್, ಮಂಜುಳಾ ಅವರಿಗೆ ಮಂಗಳ ಸೂತ್ರ ಕಟ್ಟಿದರು.
ಅಲ್ಲಿಂದ ದಿಬ್ಬಣ ನೇರವಾಗಿ ಓಂಕಾರ ಸದನದ ನಿರಾಶ್ರಿತರ ಶಿಬಿರಕ್ಕೆ ಹೊರಟಿತು. ಮದುವೆ ನಿಮಿತ್ತ ನಿರಾಶ್ರಿತರಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ವಧು ವರನ ಕುಟುಂಬದ ಜತೆ ಕಣ್ಣೂರಿಗೆ ಹೊರಟರು.
ನಿರಂತರ ಸುರಿದ ಭಾರಿ ಮಳೆಗೆ ಬೇಬಿಯರ ಮನೆ ಕೊಚ್ಚಿಹೋಗಿ ಇಡೀ ಕುಟುಂಬ ನಿರಾಶ್ರಿತರ ಶಿಬಿರ ಸೇರಿದೆ. ಯಾವುದೇ ಕಾರಣಕ್ಕೂ ಶುಭಕಾರ್ಯ ನಿಲ್ಲಬಾರದು ಎಂಬ ಉದ್ದೇಶದಿಂದ ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್‌ವತಿಯಿಂದ ಪೂರ್ವ ನಿಗದಿಯಾದ ದಿನಾಂಕದಂದೇ(ಆ.26) ಮದುವೆ ನಡೆಸಲು ನಿರ್ಧರಿಸಿ, ಶಾಸ್ತ್ರೋತ್ತರವಾಗಿ ಮದುವೆ ನಡೆಸಿದ್ದೇವೆ.– ಕೆ.ಕೆ.ದಾಮೋದರ, ಲಯನ್ಸ್ ಕ್ಲಬ್ ಅಧ್ಯಕ್ಷ ಮಳೆಗೆ ಮನೆ ಕಳೆದುಕೊಂಡಿದ್ದರಿಂದ ಮದುವೆ ನಡೆಯುತ್ತದೆ ಎಂದುಕೊಂಡಿರಲಿಲ್ಲ. ಎಲ್ಲವನ್ನು ಕೆಳೆದುಕೊಂಡಿರುವ ನಮಗೆ ಈ ಸಂಸ್ಥೆಗಳು ಸಹಕಾರ ನೀಡಿವೆ. ನೋವಿನಲ್ಲೂ ಸಂತೋಷವಾಗುತ್ತಿದೆ.
– ಮಂಜುಳಾ, ವಧು ಮದುವೆಗಾಗಿ ಎರಡು ಲಕ್ಷ ರೂ. ಸಾಲ ಮಾಡಿದ್ದೇವೆ. ಒಡವೆಯನ್ನು ಮಾಡಿಸಿದ್ದೆವು. ಮಳೆಗೆ ಮನೆ ನಾಶವಾಗಿದ್ದರಿಂದ ಮದುವೆ ಕೂಡಿಟ್ಟ ಹಣವೂ ಸಿಕ್ಕಿಲ್ಲ. ಭಾವನ ಕಡೆಯುವರಿಗೆ ವಿಷಯ ಮನವರಿಕೆ ಮಾಡಿಕೊಟ್ಟಿದ್ದರಿಂದ ಯಾವುದೇ ಆಕ್ಷೇಪ ಇಲ್ಲದೆ ಮದುವೆಗೆ ಒಪ್ಪಿಕೊಂಡಿದ್ದಾರೆ.
– ಆರ್.ಅಣ್ಣಪ್ಪ, ವಧು ಸಹೋದರ.
ಚಿತ್ರ: ಎಚ್.ಫಕ್ರುದ್ದೀನ್
– ರಾಜು ಖಾರ್ವಿ ಕೊಡೇರಿ