ಬೀಳಗಿ: ಮೂಲ ಸೌಕರ್ಯ ಒದಗಿಸದೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಕೈಮಗ್ಗ ನೇಕಾರರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಸಲ್ಲದು. ನೂಲು ಇಲ್ಲದೆ, ಯೋಗ್ಯ ಮಜೂರಿ ಇಲ್ಲದೆ ನೇಕಾರರ ಬದುಕು ಬೀದಿಪಾಲಾಗಿದೆ. ಕೂಡಲೇ ನಿಗಮದವರು ನೇಕಾರರ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ತಾಲೂಕಿನ ಕೈಮಗ್ಗ ನೇಕಾರ ಸಂಘಟನೆಯವರು ಕೆಎಚ್‌ಡಿಸಿ ಕಚೇರಿ ಎದುರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ (ಕೆಎಚ್‌ಡಿಸಿ) ಕಚೇರಿ ಎದುರು ಕೈಮಗ್ಗ ನೇಕಾರರ ಸಂಘಟನೆಯಲ್ಲಿ ನೂರಾರು ಜನ ಪ್ರತಿಭಟಿಸುವ ಮೂಲಕ, ರಾಜ್ಯ ಸರ್ಕಾರ ಹಾಗೂ ಕೈಮಗ್ಗ ನಿಗಮದ ಎಂಡಿ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಕೈಮಗ್ಗ ನೇಕಾರರ ಸಂಘದ ಮುಖಂಡ ದೇವೇಂದ್ರ ಕೋಟಿ ಮಾತನಾಡಿ, ನಮ್ಮ ಬದುಕಿಗೆ ನೇಯ್ಗೆ ಕಾಯಕವೇ ಆಧಾರ. ಆದರೆ, ನಿಗಮದವರು ಕಳೆದ ನಾಲ್ಕು ತಿಂಗಳಿಂದ ನೇಕಾರರಿಗೆ ನೂಲು ಒದಗಿಸುತ್ತಿಲ್ಲ. ಆರು ತಿಂಗಳಿಂದ ಸೂಟಿಂಗ್-ಕಾಟನ್ ಮಗ್ಗಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಅಳಲು ತೋಡಿಕೊಂಡರು.
ನೇಕಾರರಿಗೆ ಇನ್‌ಸೆಂಟಿವ್ ಕೊಡುವುದನ್ನು ನಿಲ್ಲಿಸಿದ್ದಾರೆ. ಪ್ರಸಕ್ತ ಕಾಲಕ್ಕನುಗುಣವಾಗಿ ಮಜೂರಿ ಏರಿಕೆಯಾಗಿಲ್ಲ. ಕಳೆದ ಆರು ತಿಂಗಳಿಂದ ನೇಕಾರರ ಮಕ್ಕಳಿಗೆ ಸಿಗುವ ಸ್ಕಾಲರ್‌ಶಿಪ್ ತಡೆಹಿಡಿಯಲಾಗಿದೆ. ಕಳೆದ ಮೂರು ತಿಂಗಳಿಂದ ಮಗ್ಗಗಳು ಬಂದ್ ಆಗಿವೆ. ಮಗ್ಗಗಳು ಬಂದ್ ಆದಾಗಿನಿಂದ ನೇಕಾರರಿಗೆ ವೇತನವೇ ನೀಡಿಲ್ಲ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರ, ನಿಗಮ ಎಚ್ಚೆತ್ತು ನೇಕಾರರ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಹಿಂಪಡೆಯುವುದಿಲ್ಲವೆಂದು ಎಚ್ಚರಿಸಿದರು.
ತಾಲೂಕು ನೇಕಾರ ಸಮುದಾಯ ಒಕ್ಕೂಟದ ಮುಖಂಡರಾದ ಶರಣು ಅಗ್ನಿ, ಸಂತೋಷ ಜಂಬಗಿ, ಶೇಖರ ಗೊಳಸಂಗಿ, ಕಾಶೀನಾಥ ಸೋಮನಕಟ್ಟಿ, ಪಾಂಡು ಸೋಮನಕಟ್ಟಿ ಧರಣಿಗೆ ಬೆಂಬಲ ಸೂಚಿಸಿ ಮಾತನಾಡಿ, ಹಸಿವಿನ ನೋವು, ಹಸಿದಿದ್ದವರಿಗೆ ಮಾತ್ರ ಗೊತ್ತು. ನಿಗಮದ ಎಂಡಿಗೆ ಮಾನವೀಯತೆಯಿಲ್ಲ. ಜನಸಮುದಾಯಕ್ಕೆ ಬಟ್ಟೆ ಒದಗಿಸಿ ಮಾನ ಮುಚ್ಚುವ ನೇಕಾರರ ಬದುಕೇ ಇಂದು ಬೆತ್ತಲಾಗಿದೆ ಎಂದು ಅಸಮಾಧಾನ ಹೊರಹಾಕಿದರು. ನಿಗಮದ ಎಂಡಿ ತೆಗೆದು ಹಾಕುವ ಮೂಲಕ ತಕ್ಷಣ ನೇಕಾರರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಶಿವಲಿಂಗಪ್ಪ ಬಾದರದಿನ್ನಿ, ಗಂಗಪ್ಪ ಬಾಡಗಿ, ಶೇಖಪ್ಪ ಕುಂದರಗಿ, ಭಾಗವ್ವ ಮಾದರ, ಇಂದ್ರವ್ವ ಚಲವಾದಿ, ಶಂಕ್ರಪ್ಪ ಕೊಣ್ಣೂರ, ನಾಗಪ್ಪ ಬಾಡಗಿ, ಶಿವಪ್ಪ ಬಾಳಿಗಿಡದ, ಸುರೇಶ ಕೊಪ್ಪಳ, ಮಲ್ಲವ್ವ ಸಿಂಹಾಸನ, ಗೀತಾ ಚಲವಾದಿ, ಮಂಜುಳಾ ಮಾದರ, ಚಂದ್ರಕಲಾ ಚಲವಾದಿ, ಶಂಕ್ರಪ್ಪ ಜಾಡಗೌಡರ ಇತರರು ಇದ್ದರು.