Advertisement

ಪರಿಹಾರ ಪ್ಯಾಕೇಜ್‌ ಏನು ? ಎತ್ತ ?: ತಿಂಗಳು ಮೂರು ಕಳೆದರೂ ಸಿಕ್ಕಿಲ್ಲ ಪ್ಯಾಕೇಜ್‌ ಮೊತ್ತ!

12:39 AM Aug 22, 2020 | mahesh |

ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯ ಸರಕಾರ ನೇಕಾರರ ಸಹಿತ ಕೆಲವೊಂದು ಉದ್ಯಮಗಳಿಗೆ ಪ್ಯಾಕೇಜ್‌ ಘೋಷಿಸಿತ್ತು. ವಾರದೊಳಗೆ ಪರಿಹಾರ ಪ್ಯಾಕೇಜ್‌ ನೀಡು ವುದಾಗಿ ಮುಖ್ಯಮಂತ್ರಿಗಳು ಘೋಷಿಸಿ 3 ತಿಂಗಳಾದರೂ ಅವಿಭಜಿತ ದ.ಕ.ಜಿಲ್ಲೆಯ ಅರ್ಜಿ ಸಲ್ಲಿಸಿದ 50 ಮಂದಿ ಫ‌ಲಾನು ಭವಿಗಳಿಗೆ ಇನ್ನೂ ಸವಲತ್ತು ಸಿಕ್ಕಿಲ್ಲ.

Advertisement

ಕೊರೊನಾದಿಂದ ಸ್ಥಗಿತಗೊಂಡಿದ್ದ ಆರ್ಥಿಕತೆಗೆ ಚೇತರಿಕೆ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಹೂವು, ಹಣ್ಣು, ತರಕಾರಿ ಬೆಳೆದ ರೈತರು; ನೇಕಾರರು, ಕುಲಕಸುಬು ಆಧರಿತ ಶ್ರಮಿಕರು, ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಉದ್ಯಮ ವಲಯಕ್ಕೆ 1,610 ಕೋ.ರೂ. ಮೊತ್ತದ ಬೃಹತ್‌ ಪರಿಹಾರ ಪ್ಯಾಕೇಜನ್ನು ಘೋಷಿಸಿದ್ದರು.

ರಾಜ್ಯದಲ್ಲಿರುವ ನೇಕಾರರ 109 ಕೋ.ರೂ. ಸಾಲ ಮನ್ನಾ ಹಾಗೂ ಜನವರಿಯಿಂದ ಮಾರ್ಚ್‌ ವರೆಗೆ ಒಂದು ಲಕ್ಷ ರೂ. ಸಾಲ ಮರುಪಾವತಿ ಮಾಡಲಾಗುವುದು. ಪ್ರತೀ ವರ್ಷ ಕೈಮಗ್ಗ ನೇಕಾರರಿಗೆ “ನೇಕಾರ್‌ ಸಮ್ಮಾನ ಯೋಜನೆ’ಯ ಅಡಿ 2 ಸಾವಿರ ರೂ. ಘೋಷಿಸಲಾಗಿತ್ತು.
169 ಮಂದಿ ಫ‌ಲಾನುಭವಿಗಳು ಅವಿಭಜಿತ ದ.ಕ. ಜಿಲ್ಲೆಯಲ್ಲಿ 169 ಮಂದಿ ನೇಕಾರ ಫ‌ಲಾನುಭವಿಗಳಿದ್ದಾರೆ. ಈ ಪೈಕಿ ದ.ಕ.ಜಿಲ್ಲೆಯಿಂದ 104 ಮಂದಿಯಲ್ಲಿ 70 ಮಂದಿ ಅರ್ಜಿ ಸಲ್ಲಿಸಿದ್ದರು. 35 ಮಂದಿ ತಲಾ 2 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 65 ಮಂದಿ ಫ‌ಲಾನುಭವಿಗಳಿದ್ದಾರೆ. 40 ಮಂದಿ ಅರ್ಜಿ ಸಲ್ಲಿಸಿದ್ದು 25 ಮಂದಿ ಸವಲತ್ತು ಪಡೆದುಕೊಂಡಿದ್ದಾರೆ.

ತಾಂತ್ರಿಕ ಸಮಸ್ಯೆಯಿಂದ ವಿಳಂಬ
ಫ‌ಲಾನುಭವಿಗಳಲ್ಲಿ ಬ್ಯಾಂಕ್‌ ಅಕೌಂಟ್‌, ಆಧಾರ್‌ ಕಾರ್ಡ್‌ ಜೋಡಣೆಯಾಗದಿರುವುದು, ಸೂಕ್ತ ದಾಖಲೆಗಳು ಇಲ್ಲದ ಕಾರಣ ಸವಲತ್ತು ಸಿಕ್ಕಿಲ್ಲ. ಉಳಿದಿರುವ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಫ‌ಲಾನುಭವಿಗಳಿಗೂ ಸವಲತ್ತು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ದಾಖಲೆಗಳು ಹಾಗೂ ಇತರ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಎಲ್ಲರಿಗೂ ಸವಲತ್ತು ಸಿಗುವ ಸಾಧ್ಯತೆಗಳಿವೆ.

ನೇಕಾರಿಕೆಯೇ ಬದುಕು
ಹೆಚ್ಚು ಶ್ರಮ ಕಡಿಮೆ ಲಾಭದ ಕೈಮಗ್ಗದ ಕೈಗಾರಿಕೆ ಮಾಡುವ ನುರಿತ ನೇಕಾರರು ಅವಿಭಜಿತ ದ.ಕ.ಜಿಲ್ಲೆಯಲ್ಲಿದ್ದಾರೆ. ಹಲವು ಕೈಗಾರಿಕೆಗಳಲ್ಲಿ ದುಡಿದ ಅನುಭವವಿರುವ ಇವರಿಗೆ ಈಗಿನ ಕಾಲದಲ್ಲಿ ಕೈಮಗ್ಗದಿಂದ ಬರುವ ಆದಾಯದಿಂದ ಜೀವನ ನಡೆಸುವುದು ಅಸಾಧ್ಯ ಎಂಬ ಮಾತುಗಳ ನಡುವೆಯೇ ಕೊರೊನಾ ಮತ್ತಷ್ಟು ಹೊಡೆತ ನೀಡಿತ್ತು. ಇಂತಹವರಿಗೆ ತುಸು ಸಹಕಾರ ನೀಡುವ ಉದ್ದೇಶದಿಂದ ರಾಜ್ಯಸರಕಾರ ವರ್ಷಕ್ಕೆ 2 ಸಾವಿರ ರೂ.ನಂತೆ ಪ್ಯಾಕೇಜ್‌ ಹಣ ಘೋಷಣೆ ಮಾಡಿತ್ತು.

Advertisement

ನೋಂದಣಿ ಮಾಡಿಸಿದವರಿಗೆ ಮಂಜೂರು
ರಾಜ್ಯಸರಕಾರ ನೀಡಿರುವ ಪ್ಯಾಕೇಜ್‌ ಪೆಹಚಾನ್‌ ಕಾರ್ಡ್‌ ನಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಒಂದನೇ ಹಂತದಲ್ಲಿ ಮಂಜೂರುಗೊಂಡಿದೆ. ನೋಂದಣಿ ಹಾಕಿಸದವರೂ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಇವರಿಗೂ ಪರಿಹಾರ ಸಿಗುತ್ತದೆ ಎಂದು ಇಲಾಖೆಯವರು ತಿಳಿಸಿದ್ದಾರೆ. ಈ ಪ್ರಕ್ರಿಯೆ ಎರಡನೇ ಹಂತದಲ್ಲಿ ನಡೆಯುವ ಸಾಧ್ಯತೆ ಇದೆ.
-ಮಾಧವ ಶೆಟ್ಟಿಗಾರ್‌, ತಾಳಿಪಾಡಿ

ಸೂಕ್ತ ದಾಖಲೆ ಅಗತ್ಯ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಫ‌ಲಾನುಭವಿಗಳ ಸಂಖ್ಯೆ ಕಡಿಮೆಯಿದೆ. ಸೂಕ್ತ ದಾಖಲೆಗಳನ್ನು ನೀಡಿದವರಿಗೆ ಪರಿಹಾರ ಮೊತ್ತ ಈಗಾಗಲೇ ಸಿಕ್ಕಿದೆ. ಕೆಲವೊಬ್ಬರಿಗೆ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಜೋಡಣೆ ಆಗದ ಕಾರಣದಿಂದಾಗಿ ಸಮಸ್ಯೆ ಉಂಟಾಗಿದೆ. ಅಂತಹವರ ದಾಖಲೆಗಳನ್ನು ಸರಿಪಡಿಸಿಕೊಂಡು ಪರಿಹಾರ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು.
-ಶಿವಶಂಕರ, ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವುಳಿ ಇಲಾಖೆ, ದ.ಕ. ಉಡುಪಿ ಪ್ರಭಾರ

ಪುನೀತ್‌ ಸಸಿಹಿತ್ಲು

Advertisement

Udayavani is now on Telegram. Click here to join our channel and stay updated with the latest news.

Next