ಕಾರಟಗಿ: ಹವಾಮಾನ ವೈಪರೀತ್ಯದ ಪರಿಣಾಮ ಕಳೆದ 10-15 ದಿನಗಳಿಂದ ತಾಲೂಕಿನಾದ್ಯಂತ ಭತ್ತದ ಕಟಾವು ಭರದಿಂದ ಸಾಗಿದೆ. ನಿತ್ಯ ಮೋಡ ಕವಿದ ವಾತಾವರಣ ಆತಂಕ ಸೃಷ್ಟಿಸಿದ್ದರಿಂದ ರೈತರು ತುರುಸಿನಿಂದ ಭತ್ತ ಕಟಾವು ಮಾಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ತಾಲೂಕಿನಲ್ಲಿ ಭತ್ತ ಕಟಾವು ಮಾಡಿದ ನಂತರ ಒಣಗಿಸುವುದು ತಲೆನೋವಾಗಿ ಪರಿಣಮಿಸಿದೆ.
ದಿಢೀರ್ ಮೋಡ ಕವಿಯುವುದು, ಕ್ಷಣದಲ್ಲೇ ತುಂತುರು ಮಳೆ, ದಿಢೀರ್ ಬಿಸಿಲು, ಹೀಗೆ ಆಗಾಗ ವಾತಾವರಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ರೈತರು ಭತ್ತ ಒಣಗಿಸಲು ಹರಸಾಹಸ ಪಡಬೇಕಾಗಿದೆ. ಮೋಡ ಕವಿಯುತ್ತಲೇ ಒಣಗಲು ಹಾಕಿದ್ದ ಭತ್ತವನ್ನು ಒಟ್ಟುಗೂಡಿಸಬೇಕು. ಮತ್ತೆ ವಾತಾವರಣ ಬದಲಾಗುತ್ತಲೇ ಒಣಗಿಸಲು ಹರವು ಬೇಕು.
ಹೀಗೆ ವಾತಾವರಣ ಬದಲಾವಣೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಸೂಕ್ತ ಬಯಲು ಜಾಗೆ ಇಲ್ಲದೇ ರಸ್ತೆ ಇಕ್ಕೆಲಗಳಲ್ಲಿ ಭತ್ತದ ರಾಶಿಗಳನ್ನು ಹಾಕಿ ಒಣಗಿಸಲು ಮುಂದಾಗುತ್ತಿದ್ದಾರೆ. ತಾಲೂಕಿನಲ್ಲಿ ಶೇ. 70ರಷ್ಟು ಭತ್ತದ ಕಟಾವು ಕಾರ್ಯ ಮುಗಿದಿದೆ. ಇನ್ನು ಶೇ. 30ರಷ್ಟು ಮಾತ್ರ ಬಾಕಿ ಉಳಿದಿದ್ದು, ಈ ಬಾರಿ ತಾಲೂಕಿನ ಕೆಲ ಭಾಗದಲ್ಲಿ ಭತ್ತದ ಇಳುವರಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದೆ. ಇನ್ನು ಕೆಲವೆಡೆ ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಟಿತಗೊಂಡಿದೆ ಎಂಬುದು ಕೆಲ ರೈತರ ಅನಿಸಿಕೆಯಾಗಿದೆ.
ಅಲ್ಲದೇ ಮಾರುಕಟ್ಟೆಯಲ್ಲಿ ಭತ್ತಕ್ಕೆ ಉತ್ತಮ ಬೆಲೆ ಇರುವುದರಿಂದ ರೈತರಲ್ಲಿ ಸಮಾದಾನ ತಂದಿದೆ. ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಭತ್ತಕ್ಕೆ 1570ರಿಂದ 1630, ಆರ್‌ಎನ್‌ಆರ್ ಭತ್ತ 1800 ರೂ. ವರೆಗೆ ಇದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಮಧ್ಯವರ್ತಿಗಳು ಬಾಯಿಗೆ ಬಂದಂತೆ ಬೆಲೆ ಕಟ್ಟುತ್ತಾರೆ. ಭತ್ತ ಕಟಾವಿಗೆ ತಾಲೂಕಿನಲ್ಲಿ ಯಂತ್ರಗಳು ಸಾಕಷ್ಟು ಲಭ್ಯವಿರುವುದರಿಂದ ರೈತರಿಗೆ ಈ ಬಾರಿ ಯಾವುದೇ ತೊಂದರೆಯಾಗಲಿಲ್ಲ. ಆದರೆ ಭತ್ತ ಕಟಾವು ಯಂತ್ರದ ಬಾಡಿಗೆ ಬೆಲೆ ಮಾತ್ರ ದುಬಾರಿಯಾಗಿದೆ.
ದುಬಾರಿ ಬೆಲೆಯ ರಸಗೊಬ್ಬರ, ಕ್ರಿಮಿನಾಶಕ ಉಪಯೋಗಿಸಿ ಭತ್ತ ಬೆಳೆಯುವುದು ಬಹಳ ಕಷ್ಟ. ಹೀಗಾಗಿ ರೈತರು ಪ್ರತಿ ಬಾರಿ ಒಂದೊಂದು ಸಮಸ್ಯೆ ಎದುರಾಗಿ ಸಾಲದ ಸುಳಿಯಲ್ಲೇ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಬೇಕು. ಅಂದಾಗ ಮಾತ್ರ ರೈತರು ಚೇತರಿಸಿಕೊಳ್ಳುತ್ತಾರೆ. –
ವೀರಭದ್ರಪ್ಪ ಟಿ. ಹಣವಾಳ ರೈತ