ಮಂಗಳೂರು: ನಗರದಲ್ಲಿ ಅಪ್ಪಟ ವೀಗನ್ ಶೈಲಿಯಲ್ಲಿ ಮದುವೆಯೊಂದು ಇತ್ತೀಚೆಗೆ ನಡೆದಿದೆ.
ಕೇರಳದ ಕೊಲ್ಲಂನ ದಾಮೋದರ ಹೆಗ್ಡೆ ಮತ್ತು ಮಂಗಳೂರಿನ ಮಧುರಾ ಶೆಣೈ ಅವರು ಫೆ. 21ರಂದು ಈ ರೀತಿಯ ಮದುವೆಯಾಗಿದ್ದಾರೆ.
“ವೀಗನ್’ ಎಂದರೆ ಶುದ್ಧ ಸಸ್ಯಾಹಾರದ ಜೀವನ ಪದ್ಧತಿ. ಪ್ರಾಣಿ ಜನ್ಯ ವಸ್ತುಗಳಾದ ಹಾಲು ಮತ್ತು ಹಾಲಿನ ಉತ್ಪನ್ನಗಳು, ಜೇನು ತುಪ್ಪ, ರೇಷ್ಮೆ, ಪ್ರಾಣಿ ಚರ್ಮ, ಕೂದಲು, ತುಪ್ಪಳ ಬಳಸಿದ ವಸ್ತುಗಳನ್ನು ಇಲ್ಲಿ ಬಳಸುವುದಿಲ್ಲ. ಚಿನ್ನಾಭರಣಗಳಿಗೆ ನೈಸರ್ಗಿಕ ಮುತ್ತು, ಹವಳಗಳ ಬಳಕೆಯೂ ಇರುವುದಿಲ್ಲ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆವರ್ಸೆಯಲ್ಲಿ ಫೆ. 21ರಂದು ಮದುವೆ ಹಾಗೂ ಮಂಗಳೂರಿನಲ್ಲಿ ಫೆ. 22ರಂದು ಆರತಕ್ಷತೆ ಜರಗಿದ್ದು, ಊಟ ತಿಂಡಿಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಆಗಿಲ್ಲ. ಧಾರೆ ಎರೆಯಲು ಹಾಲಿನ ಬದಲು ಎಳನೀರು ಬಳಸಲಾಗಿತ್ತು.
ವೀಗನ್ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಮಧುರಾ ಅವರು ಕಳೆದ 2 ವರ್ಷಗಳಿಂದ ಹಾಗೂ ದಾಮೋದರ್ 6 ತಿಂಗಳಿನಿಂದ ಸಿದ್ಧತೆ ಮಾಡಿಕೊಂಡಿದ್ದರು. ಈ ಮೂಲಕ ದುಂದು ವೆಚ್ಚಕ್ಕೂ ಕಡಿವಾಣ ಹಾಕಿದರು.