ಹೊಸದಿಲ್ಲಿ: ಮುಂದಿನ ವರ್ಷ ಆರಂಭವಾಗಲಿರುವ ಮಹಿಳಾ ಐಪಿಎಲ್‌ನಲ್ಲಿ ತಂಡವೊಂದನ್ನು ಖರೀದಿಸುವ ಕೊಡುಗೆ ನೀಡಿದರೆ ನಾವು ಬಹಳಷ್ಟು ಆಸಕ್ತಿ ವಹಿಸಲಿದ್ದೇವೆ ಎಂದು ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕ ನೆಸ್ ವಾಡಿಯ ಹೇಳಿದ್ದಾರೆ.
ಐದರಿಂದ ಆರು ತಂಡಗಳನ್ನು ಒಳಗೊಂಡ ಮಹಿಳಾ ಐಪಿಎಲ್ ಕೂಟ ಆರಂಭಿಸಲು ಕಳೆದ ವಾರ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಾಲಿ ಫ್ರಾಂಚೈಸಿಗಳಿಗೆ ಮಹಿಳಾ ಐಪಿಎಲ್‌ನ ಭಾಗವಾಗಿರಲು ಮೊದಲ ಆದ್ಯತೆ ನೀಡಲು ಕೂಡ ಸಭೆ ಒಪ್ಪಿಗೆ ಸೂಚಿಸಿದೆ.
“ಮಹಿಳಾ ಐಪಿಎಲ್ ಆರಂಭಕ್ಕೆ ನಾವು ಬಹಳಷ್ಟು ಉತ್ಸುಕರಾಗಿದ್ದೇವೆ. ಮಹಿಳೆಯರಿಗೆ ಐಪಿಎಲ್ ದೀರ್ಘ ಕಾಲದಿಂದ ಚರ್ಚೆಯಲ್ಲಿದೆ. ಒಂದು ವೇಳೆ ಇಂದು ಆಯೋಜನೆಗೊಂಡರೆ ವಿಶೇಷವೆಂದೇ ಹೇಳಬಹುದು. ಕಳೆದ ಕೆಲವು ವರ್ಷಗಳಿಂದ ಮಹಿಳಾ ಕ್ರಿಕೆಟ್ ನಿಜಯವಾಗಿಯೂ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ’ ನೆಸ್ ವಾಡಿಯ ಹೇಳಿದರು.
ಸದ್ಯ ಮಹಿಳಾ ವಿಶ್ವಕಪ್ ಕ್ರಿಕೆಟ್ ಸಾಗುತ್ತಿದೆ. ಈ ಕೂಟಕ್ಕೆ ಎಲ್ಲೆಡೆ ಆಸಕ್ತಿ ಕಂಡು ಬರುತ್ತಿದೆ. ಸೆಮಿಫೈನಲಿಗೇರುವ ದಾರಿಯಲ್ಲಿ ನಮ್ಮ ತಂಡ ಸೋತಿರುವುದು ಬಹಳಷ್ಟು ಆಘಾತ ಉಂಟುಮಾಡಿದೆ ಎಂದರು.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ವೆಸ್ಟ್ ಇಂಡೀಸ್
ಮಹಿತಾ ತಂಡವನ್ನು ಖರೀದಿಸುವ ನಿಟ್ಟಿನಲ್ಲಿ ಮೂಲ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದ ವಾಡಿಯ, “ಇದರ ನಿರ್ಧಾರವನ್ನು ಬಿಸಿಸಿಐ ಮಾಡಲಿದೆ. ಒಂದು ವೇಳೆ ನಮಗೆ ತಂಡ ಖರೀದಿಸಲು ಹೇಳಿದರೆ ನಾವು ಆಸಕ್ತಿ ವಹಿಸಲಿದ್ದೇವೆ’ ಎಂದವರು ಸ್ಪಷ್ಟಪಡಿಸಿದರು.