Advertisement

ರಾಮನಗರಕ್ಕೆ ಕಸ ತಂದರೆ ಲಾರಿಗಳಿಗೆ ಬೆಂಕಿ ಹಾಕುತ್ತೇವೆ: ಡಿಸಿಎಂಗೆ ಜೆಡಿಎಸ್ ಎಚ್ಚರಿಕೆ

12:02 PM Oct 16, 2023 | Team Udayavani |

ರಾಮನಗರ: ಬೆಂಗಳೂರಿನ ಕಸವನ್ನು ರಾಮನಗರಕ್ಕೆ ತಂದರೆ ಲಾರಿಗಳನ್ನು ಸುಟ್ಟು ಹಾಕುತ್ತೇವೆ. ನಮ್ಮ ಜಿಲ್ಲೆಯನ್ನು ಕಸದ ನಗರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಸವಾಲು ಹಾಕಿದ್ದಾರೆ.

Advertisement

ರಾಮನಗರ ತಾಲ್ಲೂಕಿನ ಹರೀಸಂದ್ರ ಗ್ರಾಪಂ‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಬೆಂಗಳೂರಿನ ಕಸವನ್ನು ತಂದು ಸುರಿದು ನಮ್ಮ ಬದುಕು ನಾಶಮಾಡಲು ಮುಂದಾಗಿದ್ದಾರೆ ಎಂದು ಜೆಡಿಎಸ್ ನೇತೃತ್ವದಲ್ಲಿ ಸ್ಥಳೀಯರು ಡಿಸಿಎಂ‌ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್‌ ಹುಸೇನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಕನಕಪುರ, ಕಸ ಸುರಿಯಲು ರಾಮನಗರ ಬೇಕೆ? ಡಿಸಿಎಂ ಡಿ.ಕೆ.ಶಿವಕುಮಾರ್ ರಾಮನಗರವನ್ನು ಕಸದ ಕೊಂಪೆ‌ಮಾಡುತ್ತಿದ್ದಾರೆ‌. ನನಗೆ ಅಧಿಕಾರ ನೀಡಿ ಎಂದು ಕೇಳಿದ್ದಕ್ಕೆ ಜಿಲ್ಲೆಯ ಜನತೆ ಮೂರು ಶಾಸಕರನ್ನು ಗೆಲ್ಲಿಸಿದರು, ಕಸ‌ ಸುರಿಯುವುದೇ ಇವರು ಮಾಡುತ್ತಿರುವ ಅಭಿವೃದ್ಧಿಯ ಎಂದು ಪ್ರಶ್ನಿಸಿದರು.

ಜನ‌ಜೀವನ ನರಕ: ಹರಿಸಂದ್ರ ವ್ಯಾಪ್ತಿಯಲ್ಲಿ 23 ಎಕರೆ ಭೂಮಿಯನ್ನು ಕಸ‌ವಿಲೇವಾರಿಗೆ ಗುರುತಿಸಲಾಗಿದೆ. ರಾಮನಗರ ಕಸಕ್ಕೆ ಎಂದು ಹೇಳಿ ಬೆಂಗಳೂರಿನ ಕಸ‌ತಂದು ಸುರಿಯುತ್ತಾರೆ. ಇದರಿಂದ ಈ ಭಾಗದ ಜನರ ಬದುಕು ನರಕವಾಗಲಿದೆ. ರೇಷ್ಮೆ, ಬಾಳೆ, ಮಾವು ಮೊದಲಾದ ಬೆಳೆ ನಾಶವಾಗಲಿದೆ. ರಾಮನಗರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಅರ್ಕಾವತಿ ನದಿಯೂ ಮಲಿನಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೂಡಲೆ ಕಸ ವಿಲೇವಾರಿ ಮಾಡಿವುದನ್ನು ನಿಲ್ಲಿಸ ಬೇಕು. ಶಿವಕುಮಾರ್ ಅವರು ಬೇಕಿದ್ದರೆ ಬೆಂಗಳೂರು ಕಸವನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಲಿ ನಮಗೆ ಬೇಡ ಎಂದು ಪ್ರತಿಭಟನಾಕಾರರು ಅಭಿಪ್ರಾಯ ಪಟ್ಟರು.

Advertisement

ಪ್ರತಿಭಟನೆಯಲ್ಲಿ ಜೆಡಿಎಸ್ ರಾಜ್ಯ ವಕ್ತಾರ ನರಸಿಂಹ ಮೂರ್ತಿ, ಮುಖಂಡರಾದ ರಯಡ್ ನಾಗರಾಜು, ಬಿ.ಉಮೆಶ್, ರಾಜಶೇಖರ್, ಮೋಹನ್, ಸುಗ್ಗನಹಳ್ಳಿ ರಾಮಕೃಷ್ಣ, ಮಹದೇವ ಇನ್ನು ಮುಂತಾದವರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next