Advertisement

ಕಾಯ್ದೆ ರದ್ದು ಮಾಡಿಸುವೆವು: ನಮ್ಮ ಗೆಲುವು ಶತಃಸಿದ್ಧ: ಪ್ರತಿಭಟನಕಾರ ರೈತರ ಶಪಥ

11:58 PM Dec 15, 2020 | mahesh |

ಹೊಸದಿಲ್ಲಿ: ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮೆಲ್ಲ ಭಾಷಣಗಳಲ್ಲೂ ಕೃಷಿ ಕಾಯ್ದೆಗಳನ್ನು ಸಮರ್ಥಿಸಿ­ಕೊಳ್ಳುತ್ತಿದ್ದರೆ, ಇತ್ತ ಪ್ರತಿಭಟನನಿರತ ರೈತರು ಮಾತ್ರ ಕಾಯ್ದೆ ವಾಪಸ್‌ ಪಡೆಯುವವರೆಗೂ ಹಿಂದೆ ಸರಿಯಲ್ಲ ಎಂದು ಪಟ್ಟು ಮುಂದುವರಿಸಿದ್ದಾರೆ. ಮಂಗಳವಾರ ತಮ್ಮ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸಿರುವ ಅನ್ನದಾತರು, “ನಮ್ಮ ಹೋರಾಟ ನಿರ್ಣಾಯಕ ಹಂತ ತಲುಪಿದ್ದು, ಇದರಲ್ಲಿ ನಮ್ಮ ಗೆಲುವು ಶತಃಸಿದ್ಧ. ಸರಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದಿಲ್ಲ ಎಂದು ಎಷ್ಟೇ ಹೇಳಲಿ; ಅದನ್ನು ವಾಪಸ್‌ ಪಡೆಯುವಂತೆ ನಾವು ಮಾಡಿಯೇ ಮಾಡುತ್ತೇವೆ’ ಎಂದು ಸವಾಲು ಹಾಕುವ ರೀತಿ ಮಾತನಾಡಿದ್ದಾರೆ.

Advertisement

ಅಲ್ಲದೆ, ಬುಧವಾರ ದಿಲ್ಲಿ ಮತ್ತು ನೋಯ್ಡಾಗೆ ಸಂಪರ್ಕ ಕಲ್ಪಿಸುವ ಚಿಲ್ಲಾ ಗಡಿಯನ್ನು ಸಂಪೂರ್ಣವಾಗಿ ಬ್ಲಾಕ್‌ ಮಾಡುವುದಾಗಿಯೂ ಘೋಷಿಸಿದ್ದಾರೆ. ಸಿಂಘು ಗಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೈತ ನಾಯಕ ಜಗಜೀತ್‌ ದಲ್ಲೇವಾಲ್‌, “ಕೃಷಿ ಕಾಯ್ದೆ ವಾಪಸ್‌ ಪಡೆಯು ವುದಿಲ್ಲ ಎಂದು ಸರಕಾರ ಹೇಳುತ್ತಿದೆ. ಆದರೆ, ನೀವು ಕಾಯ್ದೆ ವಾಪಸ್‌ ಪಡೆಯುವಂತೆ ನಾವು ಮಾಡುತ್ತೇವೆ. ನಾವು ಮಾತುಕತೆಯಿಂದ ದೂರ ಓಡುತ್ತಿಲ್ಲ. ಆದರೆ, ಸರಕಾರ ನಮ್ಮ ಬೇಡಿಕೆಗಳಿಗೆ ಬೆಲೆ ಕೊಡಬೇಕು’ ಎಂದಿದ್ದಾರೆ.

20ರಂದು ಶ್ರದ್ಧಾಂಜಲಿ: ಇದೇ ವೇಳೆ, ನವೆಂಬರ್‌ ಅಂತ್ಯದಲ್ಲಿ ಪ್ರತಿಭಟನೆ ಆರಂಭವಾದಾಗಿನಿಂದಲೂ ದಿನಕ್ಕೆ ಸರಾಸರಿ ಒಬ್ಬರಂತೆ ಪ್ರತಿಭಟನಕಾರ ರೈತ ಅಸುನೀಗು­ತ್ತಿದ್ದಾರೆ. ಮೃತ ಅನ್ನದಾತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಡಿ.20ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ದೇಶಾದ್ಯಂತ ಎಲ್ಲ ಗ್ರಾಮಗಳು ಹಾಗೂ ತೆಹ್ಸಿಲ್‌ಗ‌ಳನ್ನು ಶ್ರದ್ಧಾಂಜಲಿ ದಿನವನ್ನು ಆಚರಿಸಲಿದ್ದೇವೆ ಎಂದೂ ರೈತ ಸಂಘಟನೆಗಳು ಹೇಳಿವೆ. ಇದೇ ವೇಳೆ, ಉತ್ತರಪ್ರದೇಶದ ಮುಜಾಫ‌³ರ್‌ನಗರದ “ಖಾಪ್‌’ ಪಂಚಾಯತ್‌ಗಳು ಕೂಡ ರೈತರಿಗೆ ಬೆಂಬಲ ಸೂಚಿಸಿ, ಡಿ.17ರಂದು ದಿಲ್ಲಿ ಗಡಿಗೆ ತೆರಳುತ್ತಿರುವುದಾಗಿ ಘೋಷಿಸಿವೆ.

ಟ್ರಾಯ್‌ಗೆ ಜಿಯೋ ದೂರು
ಹೊಸ ಕೃಷಿ ಕಾಯ್ದೆಗಳಿಂದ ರಿಲಯನ್ಸ್‌ ಕಂಪೆನಿಗೆ ಹೆಚ್ಚು ಲಾಭ ಎಂದು ಅಪಪ್ರಚಾರ ನಡೆಸಲಾಗುತ್ತಿದ್ದು, ಇದರಿಂದಾಗಿ ನಮ್ಮ ಅನೇಕ ಗ್ರಾಹಕರು “ಪೋರ್ಟಬಿಲಿಟಿ’ಗೆ ಕೋರಿಕೆ ಸಲ್ಲಿಸುತ್ತಿದ್ದಾರೆ ಎಂದು ರಿಲಯನ್ಸ್‌ ಜಿಯೋ ಆರೋಪಿಸಿದೆ. ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್‌ ಕಂಪೆನಿಗಳೇ ಈ ರೀತಿಯ ಅಪಪ್ರಚಾರ ನಡೆಸುತ್ತಿದೆ ಎಂದು ಹೇಳಿರುವ ರಿಲಯನ್ಸ್‌ ಜಿಯೋ ಈ ಕುರಿತು ಟ್ರಾಯ್‌(ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ)ಗೆ ದೂರು ಸಲ್ಲಿಸಿದೆ. ಆದರೆ, ವೊಡಾಫೋನ್‌ ಮತ್ತು ಏರ್‌ಟೆಲ್‌ ಕಂಪೆನಿಗಳು ಈ ಆರೋಪವನ್ನು ನಿರಾಕರಿಸಿದ್ದು, “ಇದು ಆಧಾರರಹಿತ ಆರೋಪವಾಗಿದ್ದು, ನಾವು ನೈತಿಕತೆಯಿಂದ ಬ್ಯುಸಿನೆಸ್‌ ಮಾಡುವವರು’ ಎಂದು ಹೇಳಿವೆ.

ನನ್ನನ್ನು ಇಂದು ಭೇಟಿಯಾದ ರೈತರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದು, ಈ ಕಾಯ್ದೆಗಳು ಹಾಗೂ ಸರಕಾರ ದ ಜತೆ ನಾವಿರುವುದಾಗಿ ತಿಳಿಸಿ ದ್ದಾರೆ. ಕೆಲವು ರೈತರು ನಮ್ಮ ದಾರಿ ತಪ್ಪಿಸುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

Advertisement

ಕೃಷಿ ಕಾಯ್ದೆ ವಿಚಾರದಲ್ಲಿ ಬಿಜೆಪಿ ತನ್ನ ಅಹಂ­ ಕಾರ­ವನ್ನು ಬದಿಗಿರಿಸಲಿ. ಪಂಜಾಬ್‌ನಲ್ಲಿ ಸಿಕ್ಖರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುತ್ತಿರುವ ಬಿಜೆಪಿಯೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್‌. ಏಕತೆಯನ್ನು ನುಚ್ಚುನೂರು ಮಾಡಿದ ಪಕ್ಷವದು.
ಸುಖ್‌ಬೀರ್‌ ಸಿಂಗ್‌ ಬಾದಲ್‌, ಅಕಾಲಿದಳದ ಮುಖ್ಯಸ್ಥ

ಪ್ರತಿಭಟನೆಯಿಂದ ದಿನಕ್ಕೆ 3,500 ಕೋಟಿ ರೂ. ನಷ್ಟ!

ರೈತರ ಪ್ರತಿಭಟನೆಯಿಂದಾಗಿ ಪಂಜಾಬ್‌, ಹರಿಯಾಣ ಹಾಗೂ ಹಿಮಾಚಲಪ್ರದೇಶ ಆರ್ಥಿಕತೆಗೆ ದಿನಕ್ಕೆ ಸರಾಸರಿ 3000-3500 ಕೋಟಿ ರೂ.ಗಳಷ್ಟು ನಷ್ಟ ಉಂಟಾಗುತ್ತಿದೆ ಎಂದು ಕೈಗಾರಿಕಾ ಸಂಸ್ಥೆ ಅಸ್ಸೋಚಾಮ್‌ ಹೇಳಿದೆ. ಪ್ರತಿಭಟನೆಯು ರಾಜ್ಯಗಳ ಅಂತರ್‌ ಸಂಪರ್ಕಿತ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪಂಜಾಬ್‌, ಹರಿಯಾಣ, ರಾಜಸ್ಥಾನ, ದಿಲ್ಲಿ-ಎನ್‌ಸಿಆರ್‌ಗೆ ಸರಕುಗಳ ಸಾಗಣೆಗೆ ರಸ್ತೆ ತಡೆಯಿಂದಾಗಿ ಹೆಚ್ಚಿನ ಸಮಯ ತಗಲುತ್ತಿದೆ. ದಾಸ್ತಾನು ಕೇಂದ್ರಗಳಿಗೆ ಬೇರೆ ಪ್ರದೇಶಗಳನ್ನು ತಲುಪಲು ಹಿಂದಿಗಿಂತ ಶೇ.50ರಷ್ಟು ಹೆಚ್ಚು ಸಮಯ ಬೇಕಾಗುತ್ತಿದೆ. ಒಟ್ಟಾರೆ ಪೂರೈಕೆ ಸರಪಳಿ ಮೇಲೆ ಅಡ್ಡಪರಿಣಾಮ, ವಾಹನಗಳ ಸಂಚಾರಕ್ಕೆ ಅಡ್ಡಿ, ಕಾರ್ಮಿಕರ ಕೊರತೆ ಮತ್ತಿತರ ಕಾರಣಗಳಿಂದ ಭಾರೀ ನಷ್ಟ ಉಂಟಾಗುತ್ತಿದೆ ಎಂದು ವರದಿ ಹೇಳಿದೆ. ಇದೇ ವೇಳೆ, ಪ್ರತಿಭಟನೆಯಿಂದಾಗಿ ಸುಮಾರು 2400 ಕೋಟಿ ರೂ.ಗಳಷ್ಟು ನಷ್ಟ ಆಗಿದೆ ಎಂದು ಉತ್ತರ ರೈಲ್ವೇ ಹೇಳಿದೆ.

ಪರಿಸ್ಥಿತಿ ಗಂಭೀರ: ಪೊಲೀಸರು
ದಿಲ್ಲಿ ಗಡಿಯಲ್ಲಿ ಈಗಾಗಲೇ ಬರೋಬ್ಬರಿ 60 ಸಾವಿರ ರೈತರು ಜಮಾವಣೆಗೊಂಡಿದ್ದು, ದಿನಕಳೆದಂತೆ ಇನ್ನಷ್ಟು ಮಂದಿ ಭಾಗಿಯಾಗು­ತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದು, ಹೀಗೇ ಮುಂದುವರಿದರೆ ನಿಯಂತ್ರಣ ಕಷ್ಟವಾಗಲಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ. ಪಂಜಾಬ್‌, ಹರಿಯಾಣ ಮಾತ್ರವಲ್ಲದೆ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ದೇಶದ ಇತರ ಪ್ರದೇಶಗಳಿಂದಲೂ ರೈತರು ಇತ್ತ ಆಗಮಿಸುತ್ತಿದ್ದಾರೆ. ಅಗತ್ಯಬಿದ್ದರೆ ಗಡಿಗಳನ್ನೇ ಮುಚ್ಚಲಾಗುವುದು ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next