ರಾಮನಗರ: ಮೇಕೆದಾಟು ಪಾದಯಾತ್ರೆಯನ್ನು ತಡೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಕಾಂಗ್ರೆಸ್ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಮೇಕೆದಾಟು ಪಾದಯಾತ್ರೆ ವಿಚಾರದಲ್ಲಿ ಹೈಕೋರ್ಟ್ ಛೀಮಾರಿ ಹಾಕಿದ ಬೆನ್ನಲ್ಲೇ ರಾಜ್ಯ ಸರ್ಕಾರ ಯಾತ್ರೆಗೆ ನಿರ್ಬಂಧ ಹೇರಿದೆ. ಈ ಸಂಬಂಧ ಬುಧವಾರ ರಾತ್ರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಪಾದಯಾತ್ರೆಯಲ್ಲಿ ವಾಹನ ಸಂಚಾರ ಹಾಗೂ ಜನರು ಪಾಲ್ಗೊಳ್ಳುವುದನ್ನು ತತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಇಂದು ರಾಮನಗರ ಜಿಲ್ಲಾ ಕೇಂದ್ರದಿಂದ ಪಾದಯಾತ್ರೆ ಆರಂಭವಾಗಬೇಕಿದೆ. ರಾಮನಗರ ಜಿಲ್ಲಾಧಿಕಾರಿಯವರು ಪಾದಯಾತ್ರೆ ಮಾಡದಂತೆ ನೋಟಿಸ್ ಕಳುಹಿಸಿದ್ದು, ಕನಕಪುರದ ಡಿ ಕೆ ಶಿವಕುಮಾರ ನಿವಾಸಕ್ಕೆ ಬುಧವಾರ ತಡರಾತ್ರಿ ಅಂಟಿಸಲಾಗಿದೆ. ಆದರೆ ಈ ನೋಟಿಸನ್ನು ಹರಿದುಹಾಕಲಾಗಿದೆ ಎಂದು ವರದಿಯಾಗಿದೆ.
ಪಾದಯಾತ್ರೆ ಮುಂದುವರಿಯಲಿದೆ: ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ ಕೆ ಸುರೇಶ್, “ಯೋಜನೆಯಂತೆ ಪಾದಯಾತ್ರೆ ಮುಂದುವರಿಯಲಿದೆ. ಯಾವ ಕಾರಣಕ್ಕೂ ಪಾದಯಾತ್ರೆ ಸ್ಥಗಿತ ಮಾಡುವುದಿಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ:ಇನ್ನೂ ಪಾದಯಾತ್ರೆ ತಡೆಯದಿದ್ದರೆ ನಮ್ಮ ಸರ್ಕಾರ ದುರ್ಬಲವೆಂದು ಭಾವಿಸಬೇಕಾಗುತ್ತದೆ: ಯೋಗೇಶ್ವರ
ರಾಮನಗರದಲ್ಲಿ ಭಾರೀ ಪೊಲೀಸ್ ಬಿಗು ಬಂದೋಬಸ್ತ್ ಮಾಡಲಾಗಿದೆ. ಬುಧವಾರ ಸಂಜೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಅನ್ಯ ಜಿಲ್ಲೆಗಳಿಂದ ಬರುವ ವಾಹನಗಳನ್ನು ತಡೆಯಲಾಗಿದೆ ಎಂದು ವರದಿ ತಿಳಿಸಿದೆ.