ಕಲಬುರಗಿ: ನಿಸ್ಸಂದೇಹವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಸೇನೆಯ ಅತಿ ಹೆಚ್ಚು ಶಾಸಕರು ಬಂದು ಬಿಜೆಪಿ ಯೊಂದಿಗೆ ಮಾತುಕತೆ ನಡೆಸಿದಾಗ ಸುಮ್ಮನೆ ಕುಳಿತುಕೊಳ್ಳಲು ನಾವೇನು ಸನ್ಯಾಸಿಗಳಲ್ಲ. ಶಿವಸೇನೆಯ ಜೊತೆ ನಮ್ಮದು ಇಪ್ಪತ್ತೈದು ವರ್ಷಗಳ ಹಳೆಯ ಸಂಬಂಧ. ನಾವು ಅನೇಕ ಚುನಾವಣೆಗಳನ್ನು ಒಟ್ಟಿಗೆ ಎದುರಿಸಿದ್ದೇವೆ. ಆದರೆ, ಈಚೆಗೆ ಕಾಂಗ್ರೆಸ್ ಎನ್ ಸಿಪಿ, ಶಿವಸೇನೆ ಮೂರು ಸೇರಿಕೊಂಡು ಮಹಾರಾಷ್ಟ್ರದಲ್ಲಿ ಅನೈತಿಕ ಸರ್ಕಾರ ರಚನೆ ಮಾಡಿದ್ದೆವು. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಾರಾಷ್ಟ್ರದ ಅಭಿವೃದ್ಧಿ ಸಂಪೂರ್ಣ ಕುಸಿದು ಹೋಗಿತ್ತು. ಆಂತರಿಕ ಕಚ್ಚಾಟದಲ್ಲಿ ರಾಜ್ಯದ ಹಿತ ಕಡೆಗಣಿಸಲ್ಪಟ್ಟಿತ್ತು ಎಂದು ಹೇಳಿದರು.
ಮೂರೂ ಪಕ್ಷಗಳು ಸೇರಿ ಮೂರಾಬಟ್ಟೆ ಮಾಡಿದಂತಾಗಿದ್ದು, ಒಬ್ಬರ ಕಡೆ ಬ್ರೇಕ್, ಒಬ್ಬರ ಕಡೆ ಸ್ಟೇರಿಂಗ್, ಇನ್ನೊಬ್ಬರ ಕಡೆ ಎಕ್ಸಲೇಟರ್ ಇಟ್ಟುಕೊಂಡಾಗ ಇಂಥವೇ ಸಂದರ್ಭಗಳು ಎದುರಾಗುತ್ತವೆ. ಗಾಡಿ ಓಡಲೂ ಆಗದೆ ನಿಲ್ಲಲೂ ಆಗದೆ ಅತಂತ್ರ ಸ್ಥಿತಿ ಎದುರಾದಾಗ, ಶಿವಸೇನೆಯ ಹೆಚ್ಚು ಶಾಸಕರು ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದು ಕೂಡಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು.
ಇದನ್ನೂ ಓದಿ:ಶಿವಸೇನೆ ಮುಗಿಸಲು ಎನ್ ಸಿಪಿ ಮತ್ತು ಕಾಂಗ್ರೆಸ್ ಪ್ರಯತ್ನಿಸುತ್ತಿದೆ : ಸಂಜಯ್ ಪಾಟೀಲ್
ಕಾಂಗ್ರೆಸ್ ಸೇರಿದಂತೆ ಇತರರ ಆರೋಪದಲ್ಲಿ ಹುರುಳಿಲ್ಲ. ಶಿವಸೇನೆ ಶಾಸಕರು ಚಿಕ್ಕ ಮಕ್ಕಳಲ್ಲ. ನಾವೇನು ಅವರನ್ನು ಕಿಡ್ನಾಪ್ ಮಾಡಿಲ್ಲ. ಆಪರೇಷನ್ ಮಾಡಿ ಎಲ್ಲಾದರೂ ಒಯ್ದು ಕದ್ದು ಮುಚ್ಚಿಟ್ಟಿಲ್ಲ. ಎಲ್ಲವೂ ರಾಜ್ಯದ ಜನತೆಯ ಮುಂದೆ ಖುಲ್ಲಂ ಖುಲ್ಲಾ ನಡೆಯುತ್ತಿದೆ ಈ ಎಲ್ಲ ಬೆಳವಣಿಗೆಯನ್ನು ರಾಜ್ಯದ ಜನರೂ ಕೂಡ ಗಮನಿಸುತ್ತಿದ್ದಾರೆ. ಹೀಗಾಗಿ ನಮ್ಮನ್ನು ಅಧಿಕಾರದಿಂದ ದೂರ ಉಳಿಯುವಂತೆ ಮಾಡಲು ಸಾಧ್ಯವಿಲ್ಲ ಎಂದರು.