Advertisement

ಕಲ್ಯಾಣದ ಹಿಂದುಳಿದ ಹಣೆಪಟ್ಟಿ ಅಳಿಸುತ್ತೇವೆ: ಲಕ್ಷ್ಮಣ ಸವದಿ

06:25 PM Apr 13, 2021 | Team Udayavani |

ಬೀದರ: ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣಕ್ಕೆ ಅಂಟಿಕೊಂಡಿರುವ ಹಿಂದುಳಿದ ಹಣೆಪಟ್ಟಿ ಅಳಿಸಿ, ಅಭಿವೃದ್ಧಿಯಲ್ಲಿ ಮುಂಚೂಣಿ ಕ್ಷೇತ್ರವನ್ನಾಗಿಸಲು ಸರ್ಕಾರ ಶ್ರಮಿಸಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದರು. ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಅಭ್ಯರ್ಥಿ ಪರ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ ಕ್ಷೇತ್ರದ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಈವರೆಗೆ ರೈತರ ಪಂಪ್‌ಸೆಟ್ ಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದಿರುವುದು ತಲೆ ತಗ್ಗಿಸುವ ವಿಚಾರ. ಬಿಜೆಪಿ ಅಭ್ಯರ್ಥಿ ಗೆಲ್ಲಿಸುವ ಜತೆಗೆ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಸಮಸ್ಯೆಗಳ ಪಟ್ಟಿ ಮಾಡಲಾಗುವುದು. ಚುನಾವಣೆ ಬಳಿಕ ಐದು ಜನ ಸಚಿವರು ಆಗಬೇಕಿರುವ ಅಭಿವೃದ್ಧಿ ಕೆಲಸ ಮಾಡಿಕೊಡುವ ಸಂಕಲ್ಪ ತೊಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮರಾಠಾ ಸಮಾಜದವರ ಅಭಿವೃದ್ಧಿ ಕುರಿತು ಯಾವುದೇ ಸರ್ಕಾರ ಸಹ ಚಿಂತನೆ ಮಾಡಿರಲಿಲ್ಲ. ಆದರೆ, ಯಡಿಯೂರಪ್ಪ ನೇತೃತ್ವದ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿ 50 ಕೋಟಿ ರೂ. ಮೀಸಲಿಟ್ಟಿದ್ದಾರೆ. ಈ ಅನುದಾನವನ್ನು 100 ಕೋಟಿ ರೂ.ಗಳಿಗೆ ಹೆಚ್ಚಿಸಿ ಸಮಾಜದ ಮತ್ತಷ್ಟು ಪ್ರಗತಿಗೆ ಸಹಕಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸವದಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ವಿ. ಸೋಮಣ್ಣ, ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ ಪಿ. ರಾಜೀವ್‌, ಬಸವರಾಜ ಮತ್ತಿಮಾಡ, ಮಾಜಿ ಸಚಿವರಾದ ಸುನೀಲ ವಲ್ಲಾಪುರ, ಬಾಬುರಾವ್‌ ಚಿಂಚನಸೂರ್‌, ಮಾಜಿ ಶಾಸಕ ಎಂ.ಜಿ. ಮುಳೆ, ಜಿಪಂ ಅಧ್ಯಕ್ಷೆ ನಿರ್ಮಲಾ ಮಾನಗೋಪಾಳ್‌, ಪಕ್ಷದ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌, ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ್‌ ಸೇರಿದಂತೆ ಇತರರು ಇದ್ದರು.

ಮರಾಠಾ ಸಮಾಜ 2ಎಗೆ ಸೇರ್ಪಡೆ ಸೇರಿದಂತೆ ಸಮಾಜದ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಭರವಸೆ ನೀಡಿದ ಕಾರಣಕ್ಕೆ ಸಮಾಜದ ಅಭಿವೃದ್ಧಿ ಹಿತದೃಷ್ಟಿಯಿಂದ ನಾನು ಚುನಾವಣೆ ಕಣದಿಂದ ಹಿಂದೆ ಸರಿದಿದ್ದೇನೆ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಹಾಗಾಗಿ ಸರ್ಕಾರ ಈ ಹಿಂದೆ ನೀಡಿದ್ದ ಆಶ್ವಾಸನೆ ಈಡೇರಿಸುತ್ತದೆ ಎಂಬ ವಿಶ್ವಾಸ ನನಗಿದೆ. ನಾನು ನಾಮಪತ್ರ ಹಿಂಪಡೆಯಲು ಡೀಲ್‌ ಮಾಡಿಕೊಂಡಿದ್ದೇನೆ, ಅದು ಸಮಾಜದ ವಿಕಾಸಕ್ಕಾಗಿ ಡೀಲ್‌ ಆಗಿದೆ.
ಎಂ.ಜಿ. ಮುಳೆ, ಮಾಜಿ ಶಾಸಕ

Advertisement

12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ್ದ ಅನುಭವ ಮಂಟಪಕ್ಕೆ ಶಿವಮೊಗ್ಗದಿಂದ ಅಲ್ಲಮಪ್ರಭು ದೇವರು, ಅಕ್ಕ ಮಹಾದೇವಿ ಬಂದಿದ್ದರು. ಈಗ ಅದೇ ಶಿವಮೊಗ್ಗದಿಂದ ಸಿಎಂ ಯಡಿಯೂರಪ್ಪ ಅವರು ಬಸವಣ್ಣನ ಕರ್ಮಭೂಮಿಗೆ ಬಂದು ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು ಕಾಕತಾಳೀಯ.
ಲಕ್ಷ್ಮಣ ಸವದಿ, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next