Advertisement

ನಮಗೂ ದೇವರಿಗೂ ಜಾತಿ ಬೇಕಿಲ್ಲ; ಸರಕಾರಕ್ಕಷ್ಟೇ ಬೇಕು

06:00 AM Mar 06, 2018 | |

ಜಾತಿಗನುಗುಣವಾಗಿ ಸರಕಾರ ಸೌಕರ್ಯಗಳನ್ನು ನೀಡದೆ ಇದ್ದಿದ್ದರೆ ಯಾರಿಗೂ ಜಾತಿ ಮುಖ್ಯ ಆಗುತ್ತಿರಲಿಲ್ಲ. ಒಂದು ಕಡೆ ಜಾತಿ ಅಂತ ಹೊಡೆದಾಡಬೇಡಿ ಎಂದು ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇನ್ನೊಂದೆಡೆ ಅವರೇ ಜನರನ್ನು ವಿಂಗಡಿಸಲು ಜಾತಿಗಳನ್ನು ಮಾನದಂಡವಾಗಿ ಬಳಸಿಕೊಳ್ಳುತ್ತಿದ್ದಾರೆ. 

Advertisement

ಮಗು ಹುಟ್ಟಿದ ತಕ್ಷಣ ಅದಕ್ಕೆ ಅದರ ಜಾತಿ ತಿಳಿದಿರುವುದಿಲ್ಲ. ಮನೆಯಲ್ಲಿದ್ದಾಗಲೂ ಯಾವ ತಂದೆ ತಾಯಿಯೂ ಬಲವಂತವಾಗಿ ಮಗುವಿಗೆ ಅದರ ಜಾತಿಯನ್ನು ತಲೆಗೆ ತುಂಬುವುದಿಲ್ಲ. ಜಾತಿ ಎಂಬ ಪ್ರಶ್ನೆ ಮೊದಲು ಬರುವುದೇ ಮಗುವನ್ನು ಶಾಲೆಗೆ ಸೇರಿಸಲು ಹೋದಾಗ. ಅದರಲ್ಲೂ ತಂದೆ ತಾಯಿ ಅಂತರ್ಜಾತಿ ವಿವಾಹವಾಗಿದ್ದರೆ ತಂದೆ ಯಾವ ಜಾತಿಯೋ ಅದೇ ಜಾತಿ ಮಗುವಿಗೂ ಮುಂದುವರಿಯಬೇಕು ಎಂಬ ನಿಯಮ ಮಾಡಲಾಗಿದೆ. ಎಷ್ಟೋ ಹೆಣ್ಣು ಮಕ್ಕಳು ಲವ್‌ ಮಾಡುವಾಗಲೇ ಇದನ್ನೆಲ್ಲ ಯೋಚಿಸಿರುತ್ತಾರೆ. ನಾಳೆ ನನಗೆ ಹುಟ್ಟೋ ಮಗುವಿನ ಜಾತಿ ಗುರುತು ಜೀವನ ಪರ್ಯಂತ ಅದರ ತಂದೆಯ ಜಾತಿಯೇ ಆಗಿರುತ್ತೆ, ಮತ್ತೆ ಅದು ಮದುವೆ ಆಗ್ಬೇಕಾದ್ರೆ ಅದೇ ಜಾತಿ ಕಂಟಿನ್ಯೂ ಮಾಡ್ಬೇಕು ಅಥವಾ ಮಗು ಕೂಡ ಯಾರನ್ನಾದರೂ ಲವ್‌ ಮಾಡಿ ಮದುವೆ ಆಗಬೇಕು ಎಂಬಲ್ಲಿಯವರೆಗೆ ಚಿಂತೆ ಮಾಡಿರುತ್ತಾರೆ.

ನಿಜ ಹೇಳಬೇಕು ಅಂದರೆ ನಾವು ಬೆಳೆಯುವಾಗ ನಮಗೆ ನಮ್ಮ ಜಾತಿಯ ಬಗ್ಗೆ ಯಾವ ಅರಿವೂ ಇರುವುದಿಲ್ಲ. ಅದನ್ನೂ ಸಹ ಶಾಲೆಯಲ್ಲೇ ಹೇಳಿಕೊಡುವುದು. ಅಲ್ಲಿ ಸರಕಾರವೇ ನಮ್ಮಿಂದ ಜಾತಿ ಕೇಳುತ್ತದೆ. ಹಿಂದುಳಿದ ಜಾತಿಯಾಗಿದ್ದರೆ ಅದಕ್ಕೆ ಸರ್ಟಿಫಿಕೇಟ್‌ ಕೇಳುತ್ತದೆ. ನಂತರ ಪ್ರತಿ ಹಂತದಲ್ಲೂ ಆಗಾಗ ಜಾತಿ ಕೇಳಲಾಗುತ್ತದೆ. ಆದರೂ ಈ ವರ್ಣ ವ್ಯವಸ್ಥೆಯನ್ನೂ ಅದರಲ್ಲಿನ ಭೇದವನ್ನೂ ನಿರ್ಮಾಣ ಮಾಡಿದ್ದು ದೇವರು ಅಂತ ಕೆಲವರು ಅವನನ್ನು ದೋಷಿಸುತ್ತಾರೆ. ಇನ್ನು ಕೆಲವರು ಗುರು ಪರಂಪರೆಯನ್ನು ಬೈಯುತ್ತಾರೆ. ಆದರೆ ಸತ್ಯ ಏನು? ದೇವರು ಯಾಕೆ ಜಾತಿಭೇದ ಮಾಡುತ್ತಾನೆ? ಎಲ್ಲರನ್ನೂ ಸೃಷ್ಟಿಸಿರುವ ಅವನು, ಎಲ್ಲರನ್ನೂ ಪ್ರೀತಿಸುತ್ತಾನೆ. ಕೆಳಜಾತಿಯವರನ್ನು ದೇವರು ಪ್ರೀತಿಸುವುದಿಲ್ಲ ಎಂದಾಗಿದ್ದರೆ ಅವರನ್ನು ಅವನು ಸೃಷ್ಟಿಸುತ್ತಲೇ ಇರುತ್ತಿರಲಿಲ್ಲ ಅಥವಾ ಕನಕದಾಸರ ನಿಷ್ಕಲ್ಮಶ ಭಕ್ತಿಗೆ ದೇವರೇ ತಿರುಗಿ ದರ್ಶನ ಕೊಡುತ್ತಿದ್ದನಾ? ಬೇಡರ ಕಣ್ಣಪ್ಪನ ಮುಗ್ಧ ಪ್ರೀತಿಗೆ ಮೆಚ್ಚಿ ಪ್ರತಿದಿನ ನೈವೇದ್ಯವನ್ನು ದೇವರು ಸ್ವೀಕರಿಸುತ್ತಿದ್ದನಾ?

ಇನ್ನು ನಿಜವಾದ ಧರ್ಮ ಗುರುಗಳು ಬಗ್ಗೆ ಹೇಳಬೇಕು ಅಂದರೆ, ಅವರು ದೇಹಕ್ಕಾಗಲೀ, ಜಾತಿಗಾಗಲೀ, ಇಂದ್ರಿಯಗಳಿಗಾಗಲೀ ಅಥವಾ ಜಗತ್ತಿನ ಕೃತಕ ಆಕರ್ಷಣೆಗಳಿಗಾಗಲೀ ಪ್ರಾಮುಖ್ಯತೆ ಕೊಟ್ಟವರೇ ಅಲ್ಲ. ಹಾಗೇನಾದರೂ ಪ್ರಾಮುಖ್ಯತೆ ಕೊಟ್ಟು ತಾನು ಗುರುವೆಂದು ಯಾರಾದರೂ ಕರೆದುಕೊಂಡರೆ ಆತ ಗುರುವಲ್ಲ. ನಿಜವಾದ ಗುರು ಪರಂಪರೆಯಲ್ಲಿ ಪರಮಾತ್ಮನನ್ನು ಕಾಣುವ ಹಾಗೂ ತನ್ನೊಳಗಿನ ಸತ್ಯವನ್ನು ಶೋಧಿಸಿಕೊಳ್ಳುವ ಪ್ರಯತ್ನ ಮಾತ್ರ ಚಾಲ್ತಿಯಲ್ಲಿರುತ್ತದೆ. ಜಾತಿ-ವರ್ಣಗಳಿಂದ ಯಾವ ಗುರು ಪರಂಪರೆಯೂ ನಮ್ಮನ್ನು ವಿಭಜಿಸುವುದಿಲ್ಲ. ಯಾವುದಾದರೂ ಮಠ ಜಾತಿಭೇದ ಮಾಡುತ್ತದೆ ಎಂದಾದರೆ ಆ ಮಠದ ಆಶಯ ದೇವರ ಆಶಯಕ್ಕೆ ಅನುಗುಣವಾಗಿ ಇಲ್ಲ ಎಂದರ್ಥ. ಋಗ್ವೇದದಲ್ಲಿರುವ ಪುರುಷ ಸೂಕ್ತ ಕೂಡಾ ದೇಹವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದೆಯೇ ಹೊರತು ಮನುಷ್ಯರನ್ನು ಜಾತಿಯಿಂದ ವಿಭಜನೆ ಮಾಡಿಲ್ಲ. ಹೀಗೆ ಹೇಳಿದರೆ ಕೆಲವರು ಕೇಳುತ್ತಾರೆ,

ಬ್ರಾಹ್ಮಣೋ ಅಸ್ಯ ಮುಖಮಾಸೀತ್‌
ಬಾಹೂ ರಾಜನ್ಯಃ ಕೃತಃ|
ಊರೂ ತದಸ್ಯ ಯದ್ವೆಶ್ಯಃ
ಪದ್ಭಾ ಶೂದ್ರೋ ಅಜಾಯತ||

ಇದು ಏನು? ಇಲ್ಲಿ ಜಾತಿಗಳಿಂದ ಮನುಷ್ಯನನ್ನು ಗುರುತಿಸಿಲ್ಲವೇ?
ಇಲ್ಲ, ಇದರರ್ಥ: ಮುಖದಲ್ಲಿ ಬ್ರಹ್ಮಜ್ಞಾನ ನೆಲೆಸಿದೆ, ಬಾಹುಗಳಲ್ಲಿ ರಾಜತ್ವದ ತೋಳ್ಬಲವಿದೆ, ತೊಡೆ-ಕಾಲುಗಳಲ್ಲಿ ವೈಶ್ಯರ ವ್ಯವಹಾರವಿದೆ. ಪಾದಗಳಲ್ಲಿ ಭೂಮಿಗೂ ದೇಹಕ್ಕೂ ಸಂಪರ್ಕ ನೀಡುವ ಶೂದ್ರತ್ವ ನೆಲೆಸಿದೆ. ಇಲ್ಲಿ ಜಾತಿಯನ್ನು ದೇಹದ ಅಂಗಗಳಿಗೆ ಹೇಳಿದೆಯೇ ಹೊರತು ದೇಹಿಗಲ್ಲ. ಪರಮಾತ್ಮನ ದೇಹ ಹೇಗೆ ನಾಲ್ಕು ಭಾಗಗಳಾಗಿ ವಿಂಗಡಣೆಯಾಗಿದೆಯೋ ಹಾಗೆ ಪ್ರತಿಯೊಬ್ಬ ಮನುಷ್ಯನ ದೇಹದ ವಿವಿಧ ಭಾಗಗಳಲ್ಲಿ ಅದರ ವಿಶೇಷ ತತ್ವಗಳಾದ ಬ್ರಾಹ್ಮಣತ್ವ, ಕ್ಷತ್ರಿಯತ್ವ, ವೈಶ್ಯತ್ವ, ಶೂದ್ರತ್ವ ಬೇರೂರಿದೆ. ಇವುಗಳನ್ನು ನಾವು ಬೇಕು-ಬೇಡ ಅಂತ ಬೇರ್ಪಡಿಸಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ದೇಹವನ್ನು ಸೃಷ್ಟಿಕರ್ತ ಸೃಷ್ಟಿಸಿರುವುದೇ ಹಾಗೆ. ಆದರೆ ಜಾತಿಯನ್ನು ಸೃಷ್ಟಿಸಿದ್ದು ಅವನಲ್ಲ. ಅವುಗಳನ್ನು ಸೃಷ್ಟಿಸಿ ಸಮಾಜದಲ್ಲಿ ಮೇಲು-ಕೀಳು ಭಾವನೆ ತಳವೂರಲು ಬಿಟ್ಟಿದ್ದು ಸ್ವಾರ್ಥಿ ಮನುಷ್ಯ.

Advertisement

ಜಾತಿ ಅನಿವಾರ್ಯ ಏಕೆಂದರೆ…
ಇವನ್ನೆಲ್ಲ ಯಾಕೆ ಹೇಳಬೇಕಾಯಿತು ಅಂದರೆ; ಸರಕಾರ ಈಗಷ್ಟೇ ಜಾತಿ ಗಣತಿ ಮಾಡಿದೆ. ಜಾತಿಗಳಲ್ಲಿರುವ ಉಪ ಜಾತಿಗಳನ್ನು ಹುಡುಕಿ ತೆಗೆಯುತ್ತಿದೆ. ಜಾತಿ ಗಣತಿ ಮೂಲ ಉಪಜಾತಿ-ಪಂಗಡಗಳನ್ನು ಜಾತಿ ಗಣತಿಯ ಸಿಬ್ಬಂದಿ ತಮಗೆ ಬೇಕಾದಂತೆ ಅರ್ಜಿಯಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ. ಜನ ಸಾಮಾನ್ಯರು ಯಾರೂ ತಮ್ಮನ್ನು ಜಾತಿ ಅಥವಾ ಉಪ ಜಾತಿಗಳಿಂದ ಸರಕಾರ ಗುರುತಿಸಬೇಕು ಎಂದು ದುಂಬಾಲು ಬಿದ್ದಿರಲಿಲ್ಲ. ಜಾತಿಗೊಂದು ರೀತಿಯ ಸೌಕರ್ಯವನ್ನು ಸರಕಾರವೇ ನೀಡುತ್ತಿರುವುದರಿಂದ ಅವುಗಳನ್ನು ಪಡೆಯಲು ಅನಿವಾರ್ಯವಾಗಿ ತಮ್ಮನ್ನು ಜಾತಿಯಿಂದ ಗುರುತಿಸಿಕೊಳ್ಳುತ್ತಿದ್ದಾರೆ.

ಜಾತಿಗನುಗುಣವಾಗಿ ಸರಕಾರ ಸೌಕರ್ಯಗಳನ್ನು ನೀಡದೆ ಇದ್ದಿದ್ದರೆ ಯಾರಿಗೂ ಜಾತಿ ಮುಖ್ಯವಾಗುತ್ತಿರಲಿಲ್ಲ. ಒಂದು ಕಡೆ ಜಾತಿ ಅಂತ ಹೊಡೆದಾಡಬೇಡಿ ಅಂತ ರಾಜಕಾರಣಿಗಳು ಭಾಷಣ ಮಾಡುತ್ತಾರೆ. ಇನ್ನೊಂದೆಡೆ ಅವರೇ ಜನರನ್ನು ಬೇರೆ ಬೇರೆಯಾಗಿ ವಿಂಗಡಿಸಲು ಜಾತಿಗಳನ್ನು ಮಾನದಂಡವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ರಾಷ್ಟ್ರೀಯ ಭಾವೈಕ್ಯತೆಗೆ ಅರ್ಥ ಏನು? ಹಿಂದೂ, ಮುಸ್ಲಿಮ್‌, ಕ್ರೈಸ್ತ ಧರ್ಮಗಳನ್ನು ಧರ್ಮಗಳನ್ನಾಗೇ ಅನುಸರಿಸಲು ಬಿಡಬೇಕು. ಅವರವರ ಧರ್ಮಾಚರಣೆಯ ಪ್ರಕಾರ ಧರ್ಮಗಳೊಳಗೆ ಪಂಗಡಗಳಿದ್ದರೂ ಎಲ್ಲಾ ಧರ್ಮದಲ್ಲಿ ಐಕ್ಯತೆ ಇದೆ. ಅದನ್ನ ಉಪ ಜಾತಿಗಳನ್ನಾಗಿ ಎತ್ತಿ ಹಿಡಿಯುವ ಸರಕಾರದ ಪ್ರಯತ್ನದಿಂದ ನಮಗೆಲ್ಲ ಏನು ಲಾಭ? ನಾವೆಲ್ಲ ಒಂದೇ – ಭಾರತೀಯರು. ನಮ್ಮ ತಾಯಿ ಭಾರತಿ, ನಾವೆಲ್ಲ ಅವಳ ಮಕ್ಕಳು. ನಾವು ಎಲ್ಲರನ್ನೂ ನಮ್ಮವರೆಂದು ಭಾವಿಸಬೇಕು, ಯಾರಲ್ಲೂ ದ್ವೇಷ ಇರಬಾರದು, ಎಲ್ಲರೂ ನಮ್ಮ ಅಣ್ಣ ತಮ್ಮಂದಿರು-ಅಕ್ಕ ತಂಗಿಯರು ಎಂದು ಸ್ವೀಕರಿಸಬೇಕು ಎಂಬ ಉದಾತ್ತ ಚಿಂತನೆಯನ್ನು ಭಾರತೀಯ ಸಂಸ್ಕೃತಿಯೇ ನಮ್ಮಲ್ಲಿ ಬೇರೂರುವಂತೆ ಮಾಡಿದೆ. ಇದನ್ನು ಸ್ವೀಕರಿಸಿ ನಾವೆಲ್ಲ ಜಾತಿಯನ್ನು ತಲೆಯಿಂದ ತೆಗೆದುಹಾಕಲು ಪ್ರಯತ್ನ ಮಾಡುತ್ತಿದ್ದರೆ ಸರಕಾರ ಮತ್ತೆ ಮತ್ತೆ ನಮ್ಮ ಜಾತಿಯನ್ನು ನೆನಪಿಸಿ ನೀವು ಇದರಿಂದಲೇ ಗುರುತಿಸಿಕೊಳ್ಳಬೇಕು ಎಂದು ಹೇಳುತ್ತಿದೆ.

ಬಡವರನ್ನು ಮೊದಲು ಗುರುತಿಸಿ
ಹಿಂದುಳಿದ ವರ್ಗಕ್ಕೆ ಮುಂದೆ ಬರಲು ಸಹಾಯ ಮಾಡಬೇಕು, ಅವರಿಗೆ ಸರಕಾರದಿಂದ ಸೌಕರ್ಯಗಳನ್ನು ಕೊಡಬೇಕು ಎಂದು ಈ ಮೊದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇತ್ತು. ಅದರ ಉದ್ದೇಶವನ್ನು ಒಪ್ಪಿಕೊಳ್ಳೋಣ. ಆದರೆ ಈಗ ಜನರನ್ನು ಇನ್ನಷ್ಟು ಪಂಗಡಗಳಾಗಿ ವಿಭಜಿಸಿ ಏನು ಸವಲತ್ತು ನೀಡುವ ಉದ್ದೇಶ ಸರಕಾರಕ್ಕಿದೆ? ಹಾಗೆಯೇ ತನಗೆ ಗೊತ್ತಿರುವ ಮುಖ್ಯ ಉಪ ಪಂಗಡಗಳನ್ನು ಮಾತ್ರ ಅರ್ಜಿಯಲ್ಲಿ ಮುದ್ರಿಸಿದೆ. ಗೊತ್ತಿಲ್ಲದ ಅನೇಕ ಉಪ ಜಾತಿಯ ಹೆಸರನ್ನು ಸೇರಿಸಿಲ್ಲ. ಹಾಗಾದರೆ ಅವರಿಗೆಲ್ಲ ಸರಕಾರದ ದೃಷ್ಟಿಯಲ್ಲಿ ಗುರುತು ಇಲ್ಲವೇ?

ಹಿಂದುಳಿದವರನ್ನು ಮುಂದೆ ತರಬೇಕು ಅಂದರೆ ಜನರನ್ನು ಅವರ ಆರ್ಥಿಕ ಸ್ಥಿತಿಯಿಂದ ಗುರುತಿಸಬೇಕೇ ಹೊರತು ಜಾತಿಯಿಂದಲ್ಲ. ಸೋಕಾಲ್ಡ್‌ ಮೇಲ್ವರ್ಗದಲ್ಲಿ ಬಡವರಿಲ್ಲವೇ? ಸೋಕಾಲ್ಡ್‌ ಕೆಳವರ್ಗ ದಲ್ಲಿ ಶ್ರೀಮಂತರಿಲ್ಲವೇ? ರಾಜಕೀಯ ಲಾಭಕ್ಕಾಗಿ ಸರಕಾರಗಳು ಏನು ಬೇಕಾದರೂ ನಿರ್ಧಾರ ಕೈಗೊಂಡು ತಮಗೆ ತೋಚಿದಂತೆ ಕೆಲಸ ಮಾಡುತ್ತವೆ ಎಂಬುದು ಪ್ರಜಾಪ್ರಭುತ್ವದ ಬಹುದೊಡ್ಡ ಕೊರತೆ. ವಾಸ್ತವವಾಗಿ ಪ್ರಜಾಪ್ರಭುತ್ವದ ಆಶಯದೊಳಗೆ ಈ ಕೊರತೆಯಿಲ್ಲ. ಅವುಗಳನ್ನು ಜಾರಿಗೊಳಿಸುವ ಹೊಣೆ ಹೊತ್ತ ಶಾಸಕರು ಹಾಗೂ ಸಂಸದರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳುವುದರಿಂದ ಆಗುತ್ತಿರುವ ತೊಂದರೆಗಳಿವು.

ಸರಕಾರ ಎಷ್ಟೇ ಜಾತಿಮಂತ್ರ ಪಠಿಸಿದರೂ, ಜನರನ್ನು ನೀನು ಆ ಜಾತಿ ನೀನು ಈ ಜಾತಿ ಎಂದು ಒಡೆದು ಆಳಿದರೂ ಪ್ರಬುದ್ಧ ಆಲೋಚನಾ ಶಕ್ತಿ ಹೊಂದಿರುವ ಇಂದಿನ ಯುವ ಜನಾಂಗ ಇಂತಹ ಕೆಟ್ಟ ಪ್ರಭಾವಕ್ಕೆ ಒಳಗಾಗುವುದಿಲ್ಲ. ದೇಶದ ಭವಿಷ್ಯವನ್ನು ನಿರ್ಧರಿಸುವುದು ಇದೇ ಯುವ ಜನಾಂಗ. ಹಾಗಾಗಿ ಭರವಸೆ ಕಳೆದುಕೊಳ್ಳಲು ಕಾರಣವಿಲ್ಲ. 

ರೂಪಾ ಅಯ್ಯರ್‌

Advertisement

Udayavani is now on Telegram. Click here to join our channel and stay updated with the latest news.

Next