Advertisement
ಪ್ರತಿದಿನ ನಾವೆಲ್ಲರೂ ಬೇರೆಯವರನ್ನು ನೋಡಿ ಬೇಕಾದಷ್ಟು ಕಲಿಯುತ್ತಿರುತ್ತೇವೆ. ಕಲಿಯಬೇಕು ಕೂಡ, ಅದರಲ್ಲಿ ತಪ್ಪೇನಿಲ್ಲ. ಆದರೆ, ನಾವು ಕಲಿಯುವ ವಿಷಯ ಅಥವಾ ಅನುಕರಣೆ ಮಾಡುವ ಸಂಗತಿ ನಮ್ಮ ನಿತ್ಯ ಜೀವನಕ್ಕೆ ಸರಿಹೊಂದುತ್ತದೆಯೇ? ನಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್ ಆಗುತ್ತದೆಯೇ? ಇದನ್ನು ವಿಮರ್ಶಿಸಿಕೊಂಡು, ನಂತರ ಬೇರೆಯವರಲ್ಲಿನ ಗುಣವನ್ನು ನಾವು ಅನುಕರಿಸುವುದು ಅಗತ್ಯ. ಇಲ್ಲವಾದರೆ ನಮಗೇ ನಷ್ಟವಾದೀತು.
ಅನೇಕ ಹುಡುಗರು ಚಿಕ್ಕ ವಯಸ್ಸಿನಿಂದ ಒಬ್ಬ ಹೀರೊಗೆ ದೊಡ್ಡ ಫ್ಯಾನ್ ಆಗಿರುತ್ತಾರೆ. ಆ ಹೀರೊನ ಪೋಟೊಗಳನ್ನು ತಮ್ಮ ಕೋಣೆಯ ಗೋಡೆ ಮೇಲೆ ಅಂಟಿಸಿರುತ್ತಾರೆ. ಫಿಲ್ಮ್ ಹೀರೊ ಅಂತಲೇ ಅಲ್ಲ, ಬೇರೆ ಬೇರೆ ರಂಗದ ಸೆಲೆಬ್ರಿಟಿಗಳು, ರಾಷ್ಟ್ರೀಯ-ಅಂತಾರಾಷ್ಟ್ರೀಯ ಹಾಡುಗಾರರು, ಕ್ರಿಕೆಟ್ ಆಟಗಾರರು, ಕಿರುತೆರೆಯ ನಟ ನಟಿಯರನ್ನು ಸಹ ಹುಚ್ಚರಂತೆ ಇಷ್ಟ ಪಡುವವರುಂಟು. ಇದರಲ್ಲಿ ಹೆಚ್ಚು ಅನುಕರಣೆ ಮಾಡುವುದು ಫಿಲ್ಮ್ ಹೀರೊಗಳನ್ನೇ. ಶಾಲೆ, ಕಾಲೇಜ್‌ನಲ್ಲಿ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸುತ್ತಾರೋ ಇಲ್ಲವೋ, ಆದರೆ ತಮ್ಮ ನೆಚ್ಚಿನ ಹೀರೊಗಳ ಡೈಲಾಗ್‌ಗಳನ್ನು ಬಾಯಿಪಾಠ ಮಾಡಿ ಪಟಪಟನೆ ಹೇಳುತ್ತಾರೆ. ತಮ್ಮ ಹಾವಭಾವಗಳನ್ನು ಅವರಂತೆ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಜ ಜೀವನದಲ್ಲಿ ಅವರಂತೆ ಫೈಟ್ ಮಾಡಲು ಮುಂದಾಗುತ್ತಾರೆ, ತಮಗೆ ತಾವೇ ತೆರೆಯ ಮೇಲಿನ ಹೀರೋಗಳಂತೆ ವರ್ತಿಸಲು ಶುರು ಮಾಡುತ್ತಾರೆ.
Related Articles
ಅನೇಕ ವಸ್ತುಗಳಿಗೆ ಸೆಲೆಬ್ರಿಟಿಗಳು ಬ್ರಾಂಡ್ ರಾಯಭಾ ರಿಗಳಾಗಿರುತ್ತಾರೆ. ಆದರೆ, ಆ ಬ್ರಾಂಡ್ ಅನ್ನು ನಾವು ಖರೀದಿಸಿದರೆ ಮಾತ್ರ ನಮ್ಮ ಸ್ಟ್ಯಾಂಡರ್ಡ್ ಹೆಚ್ಚಾಗುತ್ತದೆ ಎಂದೇನೂ ಅಲ್ಲ. ಈಗೆಲ್ಲ ಸೀರೆಗಳಿಗೂ, ಬಟ್ಟೆಗಳಿಗೂ, ಪಾತ್ರೆ-ತಟ್ಟೆ-ಲೋಟಕ್ಕೂ, ಹೇರ್ ಕಟಿಂಗ್‌ಗೂ ಹೀರೊ, ಹೀರೊಯಿನ್‌ಗಳ ಹೆಸರು ಇಟ್ಟಿರುತ್ತಾರೆ. ಅಷ್ಟೇ ಅಲ್ಲ ಕೆಲವು ಕಡೆ ತಿನ್ನುವ ಊಟಕ್ಕೂ, ಐಸ್‌ಕ್ರೀಮ್‌ಗೂ ಹೀರೊಯಿನ್ ಹೆಸರಿರುತ್ತದೆ. ಕೆಲವರಿಗೆ ಸೆಲೆಬ್ರಿಟಿಗಳು ಏನನ್ನು ಧರಿಸುತ್ತಾರೋ ಅದನ್ನೇ ತಾವೂ ತೊಡಬೇಕು ಎಂಬ ಆಸೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಮನೆಯಲ್ಲಿರುವ ಕಷ್ಟಗಳಿಗೆ ತಾವು ಎಷ್ಟು ಸಂಪಾದಿಸಿದರೂ ಸಾಲುವುದಿಲ್ಲ ಎಂಬ ಪರಿಸ್ಥಿತಿಯಿದ್ದರೂ ಇವರು ಬ್ರಾಂಡೆಡ್ ವಾಚ್, ಬ್ರಾಂಡೆಡ್ ಬ್ಯಾಗ್, ಬ್ರಾಂಡೆಡ್ ಬಟ್ಟೆ ಇವನ್ನೆಲ್ಲ ಕೊಂಡುಕೊಳ್ಳುತ್ತಾರೆ. ಹುಡುಗ ಹುಡುಗಿಯರಲ್ಲಿ ಈ ಶೋಕಿ ಇತ್ತೀಚೆಗೆ ಅತಿಯಾಗಿದೆ. ಅದನ್ನೆಲ್ಲ ಹಾಕ್ಕೊಂಡ ಮಾತ್ರಕ್ಕೆ ನಮ್ಮ ಯೋಗ್ಯತೆ ಹೈ ಲೆವಲ್‌ಗೆ ಹೋಗುತ್ತದೆಯಾ? ಇಲ್ಲ. ಆದರೆ, ಇದು ಬಹಳ ಯುವಕ ಯುವತಿಯರಿಗೆ ಅರ್ಥವಾಗುವುದಿಲ್ಲ.
Advertisement
ನಿಮಗೆ ನೀವೇ ಸೆಲೆಬ್ರಿಟಿಮೊದಲು ನಾವು ಬೇರೆಯವರನ್ನು ಅನುಕರಣೆ ಮಾಡೋದು ಬಿಡಬೇಕು. ನಮಗೆ ನಮ್ಮದೇ ಆದ ಒಂದು ಸ್ಟೈಲ್ ಇರಬೇಕು, ಬೇರೆಯವರು ನಮ್ಮನ್ನು ಕಾಪಿ ಮಾಡುವ ಮಟ್ಟಕ್ಕೆ ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ತೆರೆಯ ಮೇಲೆ ಬಂದು ಹೋಗುವ ಯಾವುದೋ ತಾತ್ಕಾಲಿಕ ಪಾತ್ರಗಳನ್ನು ನೀವು ಈಗ ಅನುಸರಿಸಿದರೂ ಕಾಲ ಕಳೆದಂತೆ ಬೇರೆ ಬೇರೆ ಸೆಲೆಬ್ರಿಟಿಗಳು ಬರುತ್ತಲೇ ಇರುತ್ತಾರೆ, ಹೋಗುತ್ತಲೇ ಇರುತ್ತಾರೆ. ಆದರೆ ನೀವು ಇಲ್ಲೇ ನಾಲ್ಕು ಜನರ ನಡುವೆ, ನಿಮ್ಮದೇ ಸಮಾಜದಲ್ಲಿ ಬದುಕಬೇಕಾಗುತ್ತದೆ. ಒಬ್ಬ ಸೆಲೆಬ್ರಿಟಿ ಬೇಡಿಕೆಯಲ್ಲಿದ್ದಾಗ ಪ್ರತಿಯೊಬ್ಬರೂ ಅವರ ಬಗ್ಗೆ ಮಾತನಾಡುತ್ತಾರೆ. ಆತ ಬೇಡಿಕೆ ಕಳೆದುಕೊಂಡಾಗ ಹಾಗೇ ಜನರ ಮನಸ್ಸಿಂದ ಮರೆಯಾಗುತ್ತಾರೆ. ಆದರೆ ನಿಮ್ಮ ಜೀವನದಲ್ಲಿ ನೀವು ಸುಮ್ಮನೆ ತೆರೆಯ ಮೇಲೆ ಬಂದು ಹೋಗುವ ಪಾತ್ರವಲ್ಲ. ನಿಮಗೆ ನೀವೇ ಸೆಲೆಬ್ರಿಟಿ. ನೀವು ಇನ್ನೊಬ್ಬರನ್ನು ನೋಡಿ, ಅವರ ಥರ ವರ್ತಿಸಿ ಸೆಲೆಬ್ರಿಟಿ ಆಗಬೇಕಾಗಿಲ್ಲ. ತೆರೆಯ ಮೇಲೆ ಮಹಾನ್ ವ್ಯಕ್ತಿತ್ವಗಳಂತೆ ಬಿಂಬಿಸಿಕೊಳ್ಳುವ ಅನೇಕ ವ್ಯಕ್ತಿಗಳು ತೆರೆಯ ಹಿಂದೆ ಅವರ ಖಾಸಗಿ ಜೀವನದಲ್ಲಿ ಹೇಗಿರುತ್ತಾರೆ ಎಂಬುದನ್ನು ನೀವೇ ಪತ್ರಿಕೆಗಳಲ್ಲಿ ಓದಿರುತ್ತೀರಿ, ಟೀವಿಯಲ್ಲಿ ನೋಡಿರುತ್ತೀರಿ. ನಿಜವಾದ ಸೆಲೆಬ್ರಿಟಿ ಯಾರು?
ದುಬಾರಿ ಮೇಕಪ್, ಹೇರ್‌ಸ್ಟೈಲ್, ಬಟ್ಟೆಯನ್ನು ತೊಟ್ಟವರು, ನಾಲ್ಕೈದು ದಿನ ಟಿವಿಯಲ್ಲಿ ಅಥವಾ ಸಿನಿಮಾದಲ್ಲಿ ಕಾಣಿಸಿಕೊಂಡು ಹೆಸರು ಮಾಡಿದವರು ಮಾತ್ರ ಸೆಲೆಬ್ರಿಟಿಗಳು ಅಂತ ಏಕೆ ನಾವು ಅಂದುಕೊಳ್ಳಬೇಕು? ಎಲ್ಲರೂ ಅವರಂತಾಗಲು ಹೊರಟರೆ ಆಗ ಆ ಸೆಲೆಬ್ರಿಟಿಗಳಿಗಾದರೂ ಬೆಲೆ ಉಳಿದೀತೇ? ಅಷ್ಟಕ್ಕೂ ಇನ್ನೊಬ್ಬರಂತೆ ಆಗಲು ಯಾರಿಗೂ ಸಾಧ್ಯವಿಲ್ಲ. ನನ್ನ ಪ್ರಕಾರ ದಿನ ನಿತ್ಯ ನಿಷ್ಠೆಯಿಂದ ತನ್ನ ಕೆಲಸ ಮಾಡುವ, ಜೀವನದಲ್ಲಿ ಮೇಲೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಸೆಲೆಬ್ರಿಟಿಯೇ. ಅವನು ಟಿವಿಯಲ್ಲಿ ಬಾರದೆ ಇರಬಹುದು, ಆದರೆ ಆತನ ಅಗತ್ಯ ದೇಶಕ್ಕಿದೆ. ಬೀದಿಯ ಕಸ ಗುಡಿಸುವವರಾಗಿರಲಿ, ಪಾನಿಪುರಿ ಮಾರುವವ ನಾಗಿರಲಿ, ಶೌಚಾಲಯ ಕ್ಲೀನ್ ಮಾಡುವವರಾಗಿರಲಿ, ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಾಗಿರಲಿ, ಶಾಲೆ ಕಾಲೇಜಿನಲ್ಲಿ ಪಾಠ ಮಾಡುವವರಾಗಿರಲಿ ಅಥವಾ ನಿಷ್ಠೆಯಿಂದ ಪೌರೋಹಿತ್ಯ ಮಾಡಿಸುವವರಾಗಿರಲಿ… ಎಲ್ಲರೂ ಸೆಲೆಬ್ರಿಟಿಗಳೇ. ನಮ್ಮ ನಾಡಿಗೆ, ದೇಶಕ್ಕೆ ಹಸರು ತಂದುಕೊಟ್ಟ ಸಾಹಿತಿಗಳು, ಕವಿಗಳು, ವಿಜ್ಞಾನಿಗಳು, ಅಷ್ಟೇ ಯಾಕೆ ತಾವು ಎಲ್ಲವನ್ನೂ ತ್ಯಜಿಸಿ ನಾವು ಸುಖವಾಗಿರಲಿ ಅಂತ ನಮ್ಮ ದೇಶದ ಗಡಿಗಳಲ್ಲಿ ನಿಂತಿರುವ ಪ್ರತಿಯೊಬ್ಬ ಯೋಧನೂ ನಿಜವಾದ ಸೆಲೆಬ್ರಿಟಿ. ಪ್ರಾಣತ್ಯಾಗ ಮಾಡಿದ ನಂತರ ನಾವು ಒಬ್ಬ ಯೋಧನ ನ್ಯೂಸ್ ನೋಡಿ ಅಯ್ಯೋ ಪಾಪ ಎನ್ನುತ್ತೇವೆ. ಅವರ ಹೆಸರು ಏನು ಅಂತ ಅವರು ಸತ್ತ ನಂತರ ತಿಳಿದುಕೊಳ್ಳುತ್ತೇವೆ. ಆ ರೀತಿ ಪ್ರಾಣ ತ್ಯಾಗಮಾಡಲು ಸಿದ್ಧರಾಗಿ ನಿಂತಿರುವ ಮಹಾನ್ ವ್ಯಕ್ತಿಗಳ ಹೆಸರೇ ನಮಗೆ ಗೊತ್ತಿರಲ್ಲ. ಅನುಕರಣೆ ಮಾಡುವುದಾದರೆ ಇಂಥವರನ್ನು ಅನುಕರಿಸಬೇಕೆ ಹೊರತು ಬಣ್ಣ, ಥಳುಕು, ಆಕರ್ಷಣೆಯನ್ನಲ್ಲ. ಕಲರ್‌ಫುಲ್ಲಾಗಿ ಕಣ್ಣಿಗೆ ಕಾಣುವ ಮಾಯೆಯೇ ನಿಜವಾದ ಜೀವನ ಎಂಬ ಭ್ರಮೆಯಲ್ಲಿರುವುದೇ ನಮ್ಮ ಸಮಸ್ಯೆ. ನಾವು ಜೀವನಪೂರ್ತಿ ಬೇರೆಯವರನ್ನೇ ಸೆಲೆಬ್ರಿಟಿಯೆಂದು ಆರಾಧಿ ಸುತ್ತಿದ್ದರೆ ನಮ್ಮ ಐಡೆಂಟಿಟಿಯನ್ನು ನಾವೇ ಕಳೆದುಕೊಳ್ಳುತ್ತೇವೆ. ನಾವು ಅವರ ಥರ ಇವರ ಥರ ಇರಬೇಕು ಎಂದು ಕುರುಡಾಗಿ ಅನುಕರಿಸುವುದರಿಂದ ಏನೂ ಪ್ರಯೋಜನವಿಲ್ಲ. ನಾವು ಯಾರ ರೀತಿಯೂ ಇರಬಾರದು, ನಾವೇ ವಿಶೇಷವಾಗಿರಬೇಕು.