Advertisement

ಇಂದಿರಾಗಿಂತ ನಾವೇ ಹೆಚ್ಚು ಪ್ರಬಲ: ಮೋದಿ

07:35 AM Dec 21, 2017 | Team Udayavani |

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಲದಲ್ಲಿನ ಕಾಂಗ್ರೆಸ್‌ಗಿಂತಲೂ ಈಗಿನ ಬಿಜೆಪಿ ಹೆಚ್ಚು ಪ್ರಬಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 

Advertisement

ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫ‌ಲಿತಾಂಶ ಪ್ರಕಟವಾದ ಮೇಲೆ ಇದೇ ಮೊದಲ ಬಾರಿಗೆ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ 19 ರಾಜ್ಯಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ  ಸರ್ಕಾರಗಳಿವೆ. ವಿಶೇಷವೆಂದರೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ವೇಳೆ ದೇಶದಲ್ಲಿ 18 ಕಾಂಗ್ರೆಸ್‌ ಆಡಳಿತದ ಸರ್ಕಾರಗಳಿದ್ದವು. ನಾವು ಈ ಸಂಖ್ಯೆಯನ್ನೂ ಮೀರಿದ್ದೇವೆ ಎಂದರು. 

80ರ ದಶಕದಲ್ಲಿ ಕೇವಲ 2 ಸ್ಥಾನ ಹೊಂದಿದ್ದ ಬಿಜೆಪಿ, ಈಗ ಈ ಪ್ರಮಾಣದ ಸಾಧನೆ ಮಾಡಿರುವ ಬಗ್ಗೆ ನೆನೆದು ಭಾವುಕರಾದರು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದರೂ ಹೊರಗೆ ತೋರದೇ ಪಕ್ಷದಕ್ಕಾಗಿ ದುಡಿದ ನಾಯಕರ ಸ್ಮರಿಸಿದರು. ಅಲ್ಲದೆ ಲೋಕಸಭೆ ಚುನಾವಣೆ ವೇಳೆ ಗುಜರಾತ್‌ನಲ್ಲಿನ ಸಾಧನೆ ಕಂಡು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಹೇಳಿದ್ದ ಮಾತುಗಳನ್ನೂ ನೆನಪಿಸಿಕೊಂಡರು. 

ಯುವಕರ ಬೆಳೆಸಿ: ಈ ಮಧ್ಯೆ, ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಫ‌ಲಿತಾಂಶದ ಬಗ್ಗೆ ಮಾತನಾಡುತ್ತಲೇ ಕಾಂಗ್ರೆಸ್‌ ಪಕ್ಷವನ್ನೂ ತಿವಿದರು. ಕಾಂಗ್ರೆಸ್‌ ನಾಯಕರು ತಮಗೆ ನೈತಿಕ ಗೆಲುವು ಸಿಕ್ಕಿದೆ ಎಂದು ಮಾತನಾಡುತ್ತಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ನಾಯಕರು, ಕಾರ್ಯಕರ್ತರು ಮೈಮರೆಯ ಬಾರದು. ತಕ್ಷಣದಿಂದಲೇ 2018ರಲ್ಲಿ ನಡೆಯುವ ರಾಜ್ಯ ವಿಧಾನಸಭೆಗಳ ಚುನಾವಣೆ ಮತ್ತು 2019ರ ಲೋಕಸಭೆ ಚುನಾವಣೆಗಾಗಿ ಈಗಿನಿಂದಲೇ ಸಿದ್ಧವಾಗಬೇಕು ಎಂದು ಎಚ್ಚರಿಕೆ ರೂಪದ ಕರೆ ನೀಡಿದರು. 

1995ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಹೆಚ್ಚು ಸ್ಥಾನ ಗಳಿಸಿಕೊಂಡಿದೆ. ಇದಕ್ಕೆ ಆ ಪಕ್ಷ ಯುವಕರನ್ನು ಬಳಸಿಕೊಂಡ ರೀತಿ ಕಾರಣ. ಹೀಗಾಗಿ ಪಕ್ಷದ ಒಳಗೆ ಮತ್ತು ಹೊರಗೆ ಯುವಕರನ್ನು ಮುನ್ನಲೆಗೆ ಕರೆದುಕೊಂಡು ಬರಲು ಶ್ರಮಿಸಬೇಕು. ಈ ಮೂಲಕವೇ ಪಕ್ಷವನ್ನು ಮತ್ತಷ್ಟು ಗಟ್ಟಿ ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ಕುಮಾರ್‌ ಹೇಳಿದ್ದಾರೆ.

Advertisement

ಇದಲ್ಲದೇ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಯಾವುದೇ ರೀತಿಯ ಆರೋಪ ಮಾಡಲಿ, ಸುಳ್ಳು ಸುದ್ದಿ ಹಬ್ಬಿಸಲಿ, ಯಾವುದೇ ಕಾರಣಕ್ಕೂ ಕಾರ್ಯಕರ್ತರು ಹೆದರುವುದು ಬೇಡ ಎಂಬ ಸಲಹೆಯನ್ನೂ ಮೋದಿ ನೀಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. 
2022ರ ವೇಳೆಗೆ ಹೊಸ ಭಾರತ ನಿರ್ಮಿಸಲು ಎಲ್ಲರೂ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿ ಎಂದೂ ಸೂಚಿಸಿದ್ದಾರೆ. ಈ ಮಧ್ಯೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಕೂಡ, ಕಾಂಗ್ರೆಸ್‌ ನೈತಿಕ ಗೆಲುವಿನ ಬಗ್ಗೆ ಹಾಸ್ಯಾಸ್ಪದ ವಿಚಾರ ಎಂದಿದ್ದಾರೆ. ಸೋತರೂ, ನಾವು ಗೆದ್ದಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ ನಾವು ಈ ಹಿಂದಿನ ಎಲ್ಲ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ವೋಟ್‌ ಶೇರ್‌ ಪಡೆದಿದ್ದೇವೆ ಎಂದಿದ್ದಾರೆ. 

ಭಾವುಕರಾದ ಪ್ರಧಾನಿ
ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಹಿಂದಿನ ಸ್ವರೂಪ “ಜನಸಂಘ’ವನ್ನು ಗುಜರಾತ್‌ನಲ್ಲಿ ಕಟ್ಟಿ ಬೆಳೆಸಿದ ಸಂಘಟನೆಯ ದಿಗ್ಗಜರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ ಗದ್ಗದಿತರಾದರು. ಗುಜರಾತ್‌ನಲ್ಲಿ ಅವಿರತ ದುಡಿಮೆಯಿಂದ ಜನ ಸಂಘ ಕಟ್ಟಿದ ಮಕರಂದ್‌ ದೇಸಾಯಿ, ಅರವಿಂದ್‌ ಮನಿವರ್‌  ವಸಂತ್‌ ರಾವ್‌ ಗಜೇಂದ್ರಗಡ್ಕರ್‌ ಹಾಗೂ ಇತರರನ್ನು ನೆನೆದ ಮೋದಿ, ಗದ್ಗದಿತರಾದರು. ಅಂಥ ಹಲವಾರು ಮಹನೀಯರ ತ್ಯಾಗ, ಪರಿಶ್ರಮಗಳನ್ನು ಬಣ್ಣಿಸುವಾಗ ಬಂದ ಕಣ್ಣೀರನ್ನು ಎರಡು-ಮೂರು ಬಾರಿ ತಡೆ ಹಿಡಿದರು.

Advertisement

Udayavani is now on Telegram. Click here to join our channel and stay updated with the latest news.

Next