Advertisement

ಪರಿಸರ ನಾಶವಿಲ್ಲದ ಪವಿತ್ರ ಆರ್ಥಿಕತೆಯತ್ತ ಸಾಗಬೇಕಿದೆ

09:39 PM Sep 16, 2019 | Lakshmi GovindaRaju |

ಮೈಸೂರು: ಹೆಚ್ಚು ಪರಿಸರ ನಾಶವಿಲ್ಲದೇ ಯುವಕ, ಯುವತಿಯರಿಗೆ ಉದ್ಯೋಗ ಕೊಡುವ ಪವಿತ್ರ ಆರ್ಥಿಕತೆಯತ್ತ ನಾವು ಸಾಗಬೇಕಿದೆ ಎಂದು ಚಿಂತಕ ಹೆಗ್ಗೊಡು ಪ್ರಸನ್ನ ಹೇಳಿದರು.

Advertisement

ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘ, ರಾಸೇಯೋ, ಎಚ್‌.ಸಿ.ದಾಸಪ್ಪ ಸಾರ್ವಜನಿಕ ಸಂಸ್ಥೆ, ಬೆಂಗಳೂರಿನ ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಗಾಂಧಿ ವಿಚಾರ ಪರಿಷತ್‌ ಸಹಯೋಗದಲ್ಲಿ ಮಹಾರಾಜ ಕಾಲೇಜು ಶತಮಾನೋತ್ಸವದಲ್ಲಿ ಏರ್ಪಡಿಸಿದ್ದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಗಾಂಧಿ ವ್ಯಕ್ತಿ ವಿಚಾರಗಳ ಪ್ರಸ್ತುತತೆ ವಿಚಾರ ಸಂಕಿರಣದಲ್ಲಿ “ಗಾಂಧೀ ಇಂದು ಎಷ್ಟು ಪ್ರಸ್ತುತ ವಿಚಾರ ಕುರಿತು ಮಾತನಾಡಿದರು.

ರಾಕ್ಷಸ ಆರ್ಥಿಕತೆ: ಪವಿತ್ರ ಆರ್ಥಿಕತೆ ಅಂದರೆ ಸರಳವಾದದ್ದು. ಹೆಚ್ಚು ಪರಿಸರ ನಾಶವಿಲ್ಲದೇ ಯುವಕ, ಯುವತಿಯರಿಗೆ ಉದ್ಯೋಗ ಕೊಡುವುದು. ಉದ್ಯೋಗ ಕಡಿತ ಮಾಡುವ, ಪರಿಸರ ನಾಶ ಮಾಡುವ ಆರ್ಥಿಕತೆಯನ್ನು ರಾಕ್ಷಸ ಆರ್ಥಿಕತೆ ಅಂತ ಕರೆಯುತ್ತಾರೆ. ಇದರಿಂದ ಹೊರ ಬರಬೇಕಿದೆ ಎಂದು ತಿಳಿಸಿದರು.

ಪವಿತ್ರ ಆರ್ಥಿಕತೆ ಅಂದರೆ ಗುದ್ದಲಿ-ಪಿಕಾಸಿ ಹಿಡಿದು ದುಡಿಯುವಂತೆ ನಾನು ಹೇಳುತ್ತಿಲ್ಲ. ರೈತರು, ಕುಶಲಕರ್ಮಿಗಳು, ನೇಕಾರರಿಗೆ ಸಹಾಯ ಮಾಡುವ ಉದ್ಯೋಗ ಸೃಷ್ಟಿ ಮಾಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದೇನೆ. ಆಟೋಮೊಬೈಲ್‌, ಸಾಫ್ಟ್ವೇರ್‌ ಉದ್ದಿಮೆಗಳಿಗೆ ತಮ್ಮನ್ನು ಮಾರಿಕೊಳ್ಳದೇ ಸಣ್ಣ ಉದ್ದಿಮೆ ಸ್ಥಾಪಿಸಿ ನಾಯಕರಾಗಬಹುದು. ಇದರಿಂದ ಒಳ್ಳೆಯ ಬದುಕು ನಡೆಸಲು ಸಾಧ್ಯವಿದೆ ಎಂದರು.

ಆರ್ಥಿಕ ಹಿಂಜರಿತ: ಆರ್ಥಿಕ ಹಿಂಜರಿತದ ಬಗ್ಗೆ ಪತ್ರಿಕಾ ವರದಿಗಳು ಹೆದರಿಕೆ ತರುತ್ತಿವೆ. ಮಾಹಿತಿ ತಂತ್ರಜ್ಞಾನ, ವಾಣಿಜ್ಯ, ಎಂಜಿನಿಯರ್ ಕ್ಷೇತ್ರಗಳಲ್ಲಿ 3 ದಶಕಗಳಲ್ಲಿ ಉತ್ತಮ ಉದ್ಯೋಗಾವಕಾಶಗಳು ದೊರತವು. ಆರ್ಥಿಕ ಪರಿಸ್ಥಿತಿ ಚೆನ್ನಾಗಿತ್ತು. ಆಕರ್ಷಕ ಕೆಲಸ ಕೊಟ್ಟದ್ದು ನಿಜ. 10 ವರ್ಷಗಳಿಂದ ಈ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕೆಲಸ ಸಿಗುತ್ತಿಲ್ಲ. ಪರಿಸ್ಥಿತಿ ದಿನೇ ದಿನೆ ಹಾಳಾಗುತ್ತಿದೆ ಎಂದು ತಿಳಿಸಿದರು.

Advertisement

ಮಾಲ್‌ ವ್ಯವಸ್ಥೆ: ಎಲ್ಲಾ ಸೌಲಭ್ಯ ಕೊಟ್ಟು ಬೃಹತ್‌ ಮಾಲ್‌ ವ್ಯವಸ್ಥೆ ತಂದು ಬೀದಿಬದಿ ವ್ಯಾಪಾರಗಾರರು, ಕಾರ್ಮಿಕರನ್ನು ಕೊಲ್ಲಲಾಗುತ್ತಿದೆ. ತಳ್ಳುಗಾಡಿ ವ್ಯಾಪಾರಿಗಳ‌ನ್ನು ಬಂಧಿಸಲಾಗುತ್ತಿದೆ. ಗಿರಣಿ ಅಂಗಡಿ ಬಂದ್‌ ಮಾಡಿಸಲಾಗುತ್ತಿದೆ. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಹೆಣ್ಣು ಮಕ್ಕಳು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಮುಂದಿನ ಬದುಕು ಏನಾಗಬಹುದು? ಊಹಿಸಲು ಅಸಾಧ್ಯ ಎಂದರು.

ಗಾಂಧೀಜಿ ಬಗ್ಗೆ ಹೆಚ್ಚು ಮಾತನಾಡಿ ಗೂಡ್ಸೆ ಜನಪ್ರಿಯವಾಗುವಂತೆ ಮಾಡಿದ್ದೇವೆ. ಈಗ ಗಾಂಧೀಜಿ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಕೆಲಸ ಮಾಡಬೇಕಿದೆ. ವಿಶ್ವವಿದ್ಯಾನಿಲಯಗಳು ಸಿಮೆಂಟಿನಲ್ಲಿ ಗಾಂಧಿ ಪ್ರತಿಮೆ, ಭವನ ಕಟ್ಟುವುದೇ ನಮ್ಮ ಕೆಲಸ ಅಂದುಕೊಂಡಿವೆ. ಪವಿತ್ರ ಆರ್ಥಿಕತೆಗೆ ವಿಶ್ವವಿದ್ಯಾನಿಲಯಗಳು ಒಂದು ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.

ರೈತರಿಗೆ ನೆರವಾಗಿ: ರಾಸೇಯೋ ಶಿಬಿರಾರ್ಥಿಗಳು ಹಳ್ಳಿಗಳಿಗೆ ಹೋದಾಗ ಅಲ್ಲಿ ಪಾರ್ಥೇನಿಯಂ ಗಿಡ ಕೀಳುವ ನಾಟ ಮಾಡದೇ ರೈತಾಪಿ ಜನರ ಬದುಕನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಲು ಸಾಧ್ಯವೇ ಚಿಂತಿಸಬೇಕು. ಕುವೆಂಪು ಅವರ ನಿರಂಕುಶಮತಿಗಳಾಗಿ ಎಂಬ ಮಾತನ್ನು ಅಳವಡಿಸಿಕೊಳ್ಳಬೇಕು. ಸರಿ ಅನ್ನಿಸಿದ್ದನ್ನು ಕಾರ್ಯ ರೂಪಕ್ಕೆ ತರುವ ಛಾತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜ ಪರಿತರ್ವನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಮಹಾತ್ಮ ಗಾಂಧೀ ನ್ಯಾಷನಲ್‌ ಮ್ಯೂಜಿಯಂ ನಿರ್ದೇಶಕ ಎ.ಅಣ್ಣಾಮಲೈ, ಸಮಾಜವಾದಿ ಪ.ಮಲ್ಲೇಶ್‌, ಮೈಸೂರು ವಿವಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ವಸಂತಕುಮಾರ್‌ ತಿಮಕಾಪುರ, ಎಚ್‌.ಸಿ.ದಾಸಪ್ಪ ಸಾರ್ವಜನಿಕ ಸಂಸ್ಥೆ ಅಧ್ಯಕ್ಷ ಡಾ.ಕೆ.ಮಹಾದೇವ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next