ವಿಶ್ವಾಸ ಮತ್ತು ನಂಬಿಕೆಗಳು ಬಹಳ ಸುಂದರ ಪದಗಳು. ಅವುಗಳಲ್ಲಿ ನಿಹಿತವಾದ ಅರ್ಥವೂ ಅಷ್ಟೇ ಸುಂದರ ಮತ್ತು ಆಳವಾದದ್ದು. ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವರೇ ಒಳ್ಳೆಯದು ಮಾಡು ಎಂದು ಪ್ರಾರ್ಥಿಸುತ್ತೇವೆ. ದೇವರು ನಮಗೆ ಒಳಿತನ್ನು ಉಂಟು ಮಾಡುತ್ತಾನೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ದೇವರನ್ನು ನಾವು ಕಣ್ಣಾರೆ ಕಾಣದಿದ್ದರೂ ಆತ ಇದ್ದಾನೆ ಮತ್ತು ನಮ್ಮೆಲ್ಲರ ಮೇಲೆ ಆತನ ಕೃಪೆ ಇರುತ್ತದೆ ಎಂದು ಅಚಲವಾಗಿ ನಂಬಿದ್ದೇವೆ.
ಆದರೆ ಈ ನಂಬಿಕೆ, ವಿಶ್ವಾಸಗಳ ತಳಹದಿ ಯೇ ಕೆಲವೊಮ್ಮೆ ಅಲ್ಲಾಡುತ್ತದೆ. ಏನನ್ನೋ ದೇವರ ಬಳಿ ಕೇಳಿಕೊಂಡಿದ್ದೇವೆ ಎಂದುಕೊಳ್ಳಿ. ಉದಾಹರಣೆಗೆ, ಲಾಟರಿಯಲ್ಲಿ ಬಂಪರ್ ಬಹುಮಾನವಾದ ಕಾರು ನಮಗೇ ಸಿಗಬೇಕು ಎಂದು ಪ್ರಾರ್ಥಿಸಿಕೊಂಡಿದ್ದೇವೆ, ಆದರೆ ಅದು ಒಲಿಯುವುದಿಲ್ಲ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳು ಸಿಗಲಿ ಎಂದು ಬೇಡಿ ಕೊಂಡಿದ್ದೇವೆ. ಫಲಿತಾಂಶ ಬಂದಾಗ ಒಂದೆರಡು ಅಂಕಗಳು ಕಡಿಮೆ ಸಿಗುತ್ತದೆ.
ನಮ್ಮ ತತ್‌ಕ್ಷಣದ ಪ್ರತಿ ಕ್ರಿಯೆಯೇನು? ದೇವರು ನಾನು ಕೇಳಿದ್ದನ್ನು ಈಡೇರಿಸ ಲಿಲ್ಲವಲ್ಲ ಎಂಬ ಅವಿಶ್ವಾಸದ ಒಂದೆಳೆ ಮನಸ್ಸಿನಲ್ಲಿ ಹಾದು ಹೋಗುತ್ತದೆ. ನಿಜಕ್ಕೂ ವಿಶ್ವಾಸ ಮತ್ತು ನಂಬಿಕೆ ಹೀಗಿರಲು ಸಾಧ್ಯವೇ ಇಲ್ಲ. ಅವಿಶ್ವಾಸ ಮತ್ತು ಅಪನಂಬಿಕೆಯ ಒಂದು ಸಣ್ಣ ಎಳೆಯೂ ಅದರಲ್ಲಿ ಇರುವುದಿಲ್ಲ. ದೇವರು ಮಾತ್ರವಲ್ಲ; ಎಲ್ಲದರ ಮೇಲೆಯೂ ನಮ್ಮ ನಂಬಿಕೆ ಮತ್ತು ವಿಶ್ವಾಸ ಅಚಲವಾಗಿರಬೇಕು. ಗುರು ಓಶೋ ರಜನೀಶ್ ನಂಬಿಕೆ ಮತ್ತು ವಿಶ್ವಾಸ ಹೇಗಿರಬೇಕು ಎನ್ನುವುದನ್ನು ಸುಂದರ ವಾದ ಕಥೆಯ ಮೂಲಕ ವಿವರಿಸುತ್ತಾರೆ.
ನವವಿವಾಹಿತ ಯೋಧನೊಬ್ಬ ಪತ್ನಿ ಜತೆ ದೋಣಿಯಲ್ಲಿ ಪ್ರಯಾಣ ಹೊರಟಿದ್ದ. ಪ್ರಯಾಣದ ನಡುವೆ ಹಠಾತ್ತನೆ ದಿಗಂತದಲ್ಲಿ ಕಾರ್ಗತ್ತಲು ಮುಸುಕಿತು. ಸಮುದ್ರದಲ್ಲಿ ಭೀಕರ ಚಂಡಮಾರುತ ಸೃಷ್ಟಿಯಾಯಿತು. ದೋಣಿ ಹೊಯ್ದಾಡಲಾರಂಭಿಸಿತು. ನವವಧು ಗಾಬರಿಗೊಂಡಳು. ಪತಿಯತ್ತ ನೋಡಿದರೆ ಅವನ ಮುಖದಲ್ಲಿ ಹೆದರಿಕೆಯ ಲವಲೇಶವೂ ಇಲ್ಲ. “ಎಂಥ ಭಯಾನಕ ಸನ್ನಿವೇಶ ಇದು, ನಿಮಗೆ ಭಯವಾಗುವುದಿಲ್ಲವೇ?’ ಎಂದು ಕೇಳಿದಳು ಆಕೆ.
ಆತ ಉತ್ತರಿಸಲಿಲ್ಲ. ಒರೆಯಿಂದ ಖಡ್ಗ ವನ್ನು ಸೆಳೆದು ಪತ್ನಿಯ ಕಂಠಕ್ಕಾನಿಸಿ ಹಿಡಿದ. “ಹೆದರಿಕೆ ಯಾಗುತ್ತದೆಯೇ?’ ಎಂದ. ಆಕೆ ನಸುನಕ್ಕು, “ಇದೊಳ್ಳೆ ಪ್ರಶ್ನೆಯಾಯಿತಲ್ಲ! ನಾನೇಕೆ ಹೆದರಲಿ, ನನ್ನ ಕೊರಳ ಮೇಲಿರುವುದು ಖಡ್ಗ ನಿಜ ಆದರೆ ಅದನ್ನು ಹಿಡಿ ದಿರುವವರು ನೀವು, ನನ್ನ ಪತಿ ದೇವರಲ್ಲವೇ!’ ಎಂದಳು.
“ನೀನು ಆಗ ಕೇಳಿದ ಪ್ರಶ್ನೆಗೆ ನಿನ್ನ ಮಾತಿನಲ್ಲೇ ಉತ್ತರ ಅಡಗಿದೆ. ಈ ಚಂಡಮಾರುತ ದೇವರ ಕೈಯಲ್ಲಿದೆ. ಹಾಗಾಗಿ ಆಗಲಿರುವುದು ಏನೇ ಆದರೂ ಅದು ಒಳ್ಳೆಯದಕ್ಕೇ ಆಗಿರುತ್ತದೆ. ನಾವು ಉಳಿದರೂ ಅಳಿದರೂ ಅವನಿಂದಲೇ. ಏಕೆಂದರೆ ನಮ್ಮನ್ನು ಸೃಷ್ಟಿಸಿದವನು ದೇವರು ಮತ್ತು ಆತ ನಮಗೆ ಕೆಟ್ಟದ್ದನ್ನು ಮಾಡಲಾರ ಎಂಬ ನಂಬಿಕೆ ನನ್ನದು’ ಎಂದ ಆತ.
ಅಚಲ ನಂಬಿಕೆ ಅಂದರೆ ಇದು. ನಾವು ಮಾಡುವ ಕೆಲಸದಲ್ಲಿ, ನಮ್ಮ ಉದ್ದೇಶದಲ್ಲಿ, ಗುರಿಗಳಲ್ಲಿ ಇಂಥ ದೃಢ ನಂಬಿಕೆ ಹೊಂದಿರಬೇಕು. ಅದೇ ನಮ್ಮ ಬದುಕನ್ನು ಬದಲಾಯಿಸುತ್ತದೆ – ಬೆಳೆಸುತ್ತದೆ ಎನ್ನುತ್ತಾರೆ ಓಶೋ.
(ಸಂಗ್ರಹ)
ಲೇಖನಗಳನ್ನು ಈ ವಿಳಾಸಕ್ಕೆ ಕಳುಹಿಸಿ
ಬರಹಗಾರರು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಲೇಖನಗಳನ್ನು edit@udayavani.comಗೆ ಕಳುಹಿಸಬಹುದು. ಸೂಕ್ತವಾದವುಗಳನ್ನು ಪ್ರಕಟಿಸಲಾಗುವುದು.