ತೆಕ್ಕಟ್ಟೆ (ಕೊರವಡಿ): ಕಳೆದ ಹಲವು ದಶಕಗಳಿಂದಲೂ ಈ ದೇಶದಲ್ಲಿ ಆಂದೋಲನದ ರೀತಿಯಲ್ಲಿ ಹಿಂದೂ ಸಮಾಜವನ್ನು ಸಂಘಟಿಸುವಂತಹ ಕಾರ್ಯದಲ್ಲಿ ಯಶಸ್ಸಿನ ಘಟ್ಟದೆಡೆಗೆ ಸಾಗುತ್ತಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ನಮ್ಮ ಅತ್ಯಂತ ಪುರಾತನ ಹಿಂದೂ ಸಮಾಜದ ಸುರಕ್ಷೆ, ಸಂಸ್ಕಾರವನ್ನು ತರುವ ನಿಟ್ಟಿನಿಂದ ಜಿಲ್ಲೆಯ ಪ್ರತಿ ಹಳ್ಳಿ ಹಳ್ಳಿಯಲ್ಲಿ ಸೇವೆ ಮಾಡಲು ಯುವ ಸಮುದಾಯ ಮುಂದಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಕಾರ್ಯಕಾರಿಣಿ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.
ಅವರು ಜು. 23ರಂದು ಕೊರವಡಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ನೂತನ ಕೊರವಡಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ಆದಿಯಲ್ಲಿದ್ದಂತಹ ಹಿಂದೂ ಸಮಾಜ ಇನ್ನೊಬ್ಬರಿಗೆ ತೊಂದರೆ ಯಾಗದಂತೆ ಬದುಕುವ ಜೀವನ ಕ್ರಮದೊಂದಿಗೆ ಸಾಗಿ ಬಂದಿರುವ ಇಂತಹ ಹಿಂದೂ ಸಮಾಜವನ್ನು ಸದೃಢಗೊಳಿಸುವ ನಿಟ್ಟಿನಿಂದ ಧೈರ್ಯ, ಶಕ್ತಿ ಸಂಪನ್ನರಾಗುವ ಮೂಲಕ ಸಂಸ್ಕಾರಯುತವಾಗಿ ನಾವೆಲ್ಲರೂ ಒಂದಾಗಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿ.ಹಿಂ. ಪರಿಷತ್ ಹಾಗೂ ಬಜರಂಗ ದಳದ ಕೊರವಡಿ ಘಟಕದ ಗೌರವಾಧ್ಯಕ್ಷ ರಾಘವೇಂದ್ರ ಕೊರವಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಬಜರಂಗ ದಳದ ಜಿಲ್ಲಾ ಸಾಪ್ತಾಹಿಕ ಮಿಲನ ಇದರ ಪ್ರಮುಖ್ ಸುರೇಂದ್ರ ಮಾರ್ಕೋಡು, ವಿ.ಹಿಂ.ಪರಿಷತ್ ಹಾಗೂ ಬಜರಂಗ ದಳದ ಕೊರವಡಿ ಘಟಕದ ಅಧ್ಯಕ್ಷ ಶಶಿಧರ ಕೊರವಡಿ , ಹರೀಶ್ ಚಂದನ್ , ಸಂಚಾಲಕ ರಾಘವೇಂದ್ರ, ತಾಲೂಕು ಸಂಚಾಲಕ ಸುಧೀರ್ ಮೆರ್ಡಿ ಮೊದಲಾದವರು ಉಪಸ್ಥಿತರಿದ್ದರು.
ಧನ್‌ರಾಜ್ ಸ್ವಾಗತಿಸಿ, ಸುರೇಂದ್ರ ಮಾರ್ಕೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸುಧಾಕರ ಕೊರವಡಿ ಕಾರ್ಯಕ್ರಮ ಸಂಘಟಿಸಿ, ಶಶಿಧರ ಕೊರವಡಿ ವಂದಿಸಿದರು.