Advertisement
ಮಾನವನಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸಿಕೊಡುವ ಈ ನಿಸರ್ಗ ಮಾತೆಯನ್ನು ದೇಶಾದ್ಯಂತ ಪ್ರತಿಯೊಬ್ಬರೂ ಪೂಜಿಸಿ ಸ್ಮರಿಸುವ ಮೂಲಕ ಜೂ. 5ರಂದು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನದಂದು ಎಲ್ಲರೂ ಸೇರಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಸ್ವತ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡ ಈ ದಿನ ಮಾತ್ರವಲ್ಲದೆ ಪ್ರತಿ ದಿನವೂ ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಪ್ರತಿಜ್ಞೆ ಮಾಡಲಾಗುತ್ತದೆ.
ಜಲಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದನ್ನೆಲ್ಲಾ ಸಹಿಸದಿರುವಾಗ ಭೂಕಂಪ, ಪ್ರಳಯಗಳೆಂಬ ವಿಪತ್ತುಗಳು ಸಂಭವಿಸಿ ಅಪಾರ ಹಾನಿ ಉಂಟಾಗುತ್ತದೆ. ಇದರಿಂದಾಗಿ ಬಡತನ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತದೆ. ಪ್ರಪಂಚದಲ್ಲಿರುವ ಚಿಕ್ಕ ವಸ್ತುವಿನಿಂದ ಹಿಡಿದು ಬೃಹತ್ ಗಾತ್ರದ ಕಟ್ಟಡ ಎಲ್ಲವನ್ನೂ ಹೊತ್ತು ಸಹಿಸಿ ನಿಂತಿರುವ ಭೂಮಿ ತಾಯಿಗೆ ನಮ್ಮಿಂದ ಹಾನಿ ಉಂಟಾದರೆ ಅದು ಕ್ಷಮಿಸಲು ಸಾಧ್ಯವಾದ ಸಂಗತಿ. ಗಾಯದ ಮೇಲೆ ಬರೆ ಹಾಕಿದಂತೆ ಎಂಬ ಮಾತಿದೆ. ಅದರಂತೆಯೇ ನಮ್ಮೆಲ್ಲರ ಭಾರ ಹೊತ್ತಿರುವ ಭೂಮಿಯ ಮೇಲೆ ಹಾನಿ ಎಂಬ ಬರೆ ಹಾಕಿದರೆ ನಮ್ಮೆಲ್ಲರ ವಿನಾಶಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ನಮ್ಮ ಯೋಚನ ವಿಧಾನವನ್ನು ಸರಿಪಡಿಸಿಕೊಂಡು ನಾವು ಪರಿಸರದ ವಿರುದ್ಧ ಏನೆಲ್ಲಾ ಮಾಡುತ್ತಿದ್ದೇವೆ ಎಂದು ನಿಧಾನವಾಗಿ ಯೋಚಿಸಿ, ತಪ್ಪುಗಳನ್ನು ಸರಿಪಡಿಸಿಕೊಂಡು ಪರಿಸರ ಸಂರಕ್ಷಣೆಯಿಂದ ನಮ್ಮ ರಕ್ಷಣೆ ಸಾಧ್ಯ ಎನ್ನುವ ಸತ್ಯಾಂಶವನ್ನು ಮನಗಾಣುವ ಮೂಲಕ ಆರೋಗ್ಯಯುತ, ಸಮತೋಲನವಾದ ಪರಿಸರದೊಂದಿಗೆ ನಮ್ಮೆಲ್ಲರ ಬದುಕನ್ನು ಸಾಗಿಸಲು ಕೈಜೋಡಿಸೋಣ.
Related Articles
Advertisement