ಸುರತ್ಕಲ್‌ನ ಕಾಟಿಪಳ್ಳ ಕೃಷ್ಣಾಪುರದ ಜಿ.ಕೆ. ಸುಂದರ್ (78) ವಾಯುಪಡೆಯ ಮಾಜಿ ಯೋಧ. 1962ರಿಂದ 1977ರ ತನಕ 15 ವರ್ಷ ಅವರು ವಾಯು ಪಡೆಯಲ್ಲಿ ಟೆಕ್ನೀಶಿಯನ್ ಆಗಿ ಸೇವೆ ಸಲ್ಲಿಸಿದ್ದರು.
ಜಿ.ಕೆ. ಸುಂದರ
1971ರಲ್ಲಿ ಬಾಂಗ್ಲಾ ಯುದ್ಧ ಆರಂಭವಾದಾಗ ನಾನು ಮದರಾಸಿನಲ್ಲಿ (ಈಗಿನ ಚೆನ್ನೈ) ಸೇವೆ ಸಲ್ಲಿಸುತ್ತಿದ್ದೆ. ಯುದ್ಧದಲ್ಲಿ ಕರ್ತವ್ಯ ನಿರ್ವಹಿಸಲು ಕರೆ ಬಂದ ಹಿನ್ನೆಲೆಯಲ್ಲಿ ಅಮೃತ್ ಸರಕ್ಕೆ ತೆರಳಿದ್ದೆ. 1971 ಅಕ್ಟೋಬರ್‌ನಿಂದ 1972 ಜನವರಿ ತನಕ ನಾನು ಅಲ್ಲಿದ್ದೆ. ಯುದ್ಧದ ಸಂದರ್ಭದಲ್ಲಿ ಗ್ರೌಂಡ್ ಕ್ರೂವ್ ಆಗಿ ಕಾರ್ಯ ನಿರ್ವಹಿಸಿದ್ದೆ. ಯುದ್ಧದಲ್ಲಿ ನಿರತವಾಗಿರುವ ವಿಮಾನಕ್ಕೆ ಇಂಧನ ತುಂಬಿಸುವುದು, ವಿಮಾನ ಕೆಟ್ಟು ಹೋದ ಸಂದರ್ಭದಲ್ಲಿ ತುರ್ತಾಗಿ ದುರಸ್ತಿ ಮಾಡಿ ಕೊಡುವುದು ಇತ್ಯಾದಿಯಾಗಿ ವಿಮಾನವನ್ನು ಯುದ್ಧಕ್ಕೆ ಸನ್ನದ್ಧಗೊಳಿಸಿ ಇರಿಸುವುದು ನಮ್ಮ ಕರ್ತವ್ಯವಾಗಿತ್ತು.
ಅದೊಂದು ದಿನ ಸಂಜೆ ವೇಳೆಗೆ ಯುದ್ಧ ವಿಮಾನದ ಎಂಜಿನ್ ಕೆಟ್ಟು ಹೋಗಿತ್ತು. ರಾತೋರಾತ್ರಿ ಎಂಜಿನ್ ಬದಲಾಯಿಸಬೇಕಾಗಿ ಬಂದಿತ್ತು. ಆಗ ಅಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಇತ್ತು. ಹಾಗಿದ್ದರೂ ತುರ್ತಾಗಿ ಈ ಕೆಲಸವನ್ನು ಆರಂಭಿಸಿ ಕೆಟ್ಟು ಹೋದ ಎಂಜಿನ್ ಅನ್ನು ತೆಗೆದು ಹೊಸ ಎಂಜಿನ್ ಜೋಡಿಸಿ ಮುಂಜಾನೆ 3.30ರ ವೇಳೆಗೆ ಕಾಮಗಾರಿ ಪೂರ್ತಿಗೊಳಿಸಿ ವಿಮಾನವನ್ನು ಯುದ್ಧಕ್ಕೆ ಸನ್ನದ್ಧಗೊಳಿಸಲಾಗಿತ್ತು. ಯುದ್ಧದ ಸಂದರ್ಭದಲ್ಲಿ ಶತ್ರುವಿನ ವಿರುದ್ಧ ಯುದ್ಧ ನಡೆಸಿ ಗೆಲುವು ಸಾಧಿಸುವುದು ಮಾತ್ರ ನಮ್ಮ ಗುರಿಯಾಗಿರುತ್ತದೆ. ನಮ್ಮ ಅತ್ಯುತ್ತಮ ಗುಪ್ತಚರ ವ್ಯವಸ್ಥೆಯಿಂದಾಗಿ ನಾವು ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು.
ನಿರೂಪಣೆ: ಹಿಲರಿ ಕ್ರಾಸ್ತಾ