ದಾವಣಗೆರೆ: ಪ್ರಕೃತಿಯ ಕೊಡುಗೆ ಅಪಾರವಾದರೂ ಅದನ್ನು ಸಮರ್ಪಕವಾಗಿ ಬಳಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ನಾಗಶ್ರೀ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಾಜಿ ಪುರಸಭಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ, ಪರಿಸರ ಸಂರಕ್ಷಣಾ ವೇದಿಕೆ, ಕಾಲೇಜಿನ ಪ್ರೌಢಶಾಲಾ ವಿಭಾಗದ ಎನ್‌ಎಸ್‌ಎಸ್ ಘಟಕದಿಂದ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ, ಮಾತನಾಡಿದ ಅವರು, ಪಂಚಭೂತಗಳಾದ ಆಕಾಶ, ಮಳೆ, ಅಗ್ನಿ, ಗಾಳಿ, ಭೂಮಿ ನಮ್ಮ ಹಿಡಿತದಲ್ಲಿಲ್ಲ. ಇವುಗಳ ಕೊಡುಗೆ ಅಪಾರ ಆದರೆ, ಇವುಗಳ ನಾಶಕ್ಕೆ ನಾವು ಮುಂದಾಗುತ್ತಿದ್ದೇವೆ ಎಂದರು.
ಪ್ರಕೃತಿ ವಿರುದ್ಧ ನಡೆದುಕೊಳ್ಳುವುದೆಂದರೆ ನಮ್ಮ ವಿನಾಶಕ್ಕೆ ನಾವೇ ಎಡೆಮಾಡಿಕೊಂಡಂತೆ. ಇದು ಅರ್ಥವಾದರೂ ಸಹ ನಾವು ಸುಧಾರಣೆ ಆಗುತ್ತಿಲ್ಲ. ಪ್ರಕೃತಿ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುತ್ತಿಲ್ಲ. ಪ್ರಕೃತಿಯ ಯಾವುದೇ ಕೊಡುಗೆಯನ್ನು ನಾವು ಸೃಷ್ಟಿಮಾಡುವುದು ಅಸಾಧ್ಯ. ಇದನ್ನು ನಾವು ಮನನಮಾಡಿಕೊಳ್ಳಬೇಕಿದೆ ಎಂದು ಅವರು
ತಿಳಿಸಿದರು.
ಯಾಂತ್ರಿಕತೆ, ತಾಂತ್ರಿಕತೆ ಎಷ್ಟೇ ಮುಂದುವರಿದರೂ ಪ್ರಕೃತಿಯಿಂದ ಸಿಗುವ ಶುದ್ಧ ಗಾಳಿ, ನೀರು ಮುಂತಾದ ಸಂಪನ್ಮೂಲಗಳನ್ನು ಸೃಷ್ಟಿಸುವುದು ಅಸಾಧ್ಯ. ಹೀಗಿದ್ದರೂ ನಾವು ಅವುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು, ಹೆಚ್ಚು ಮಾಡಲು ಮುಂದಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪರಿಸರ ದಿನಾಚರಣೆ ವೇಳೆ ಮಾತ್ರ ನಾವು ಪ್ರಕೃತಿ ಬಗ್ಗೆ ಕಾಳಜಿ ತೋರುತ್ತಿವೆ. ದೈನಂದಿನ ಜೀವನದಲ್ಲಿ ಇದೇ ಪರಿಸರದ ಮೇಲೆ ನಾವು ದೌರ್ಜನ್ಯ ಎಸಗುತ್ತೇವೆ. ಮಾನವ ಕುಲದಿಂದ ಪರಿಸರದ ಮೇಲೆ ಈಗ ಆಗಲೇ ಆಗಿರುವ ದೌರ್ಜನ್ಯ ಸರಿಮಾಡಲೇ ನೂರಾರು ವರ್ಷ ಸಹ ಸಾಲದು ಎಂದು ಅವರು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಕೆ. ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಗಬಾಲಯ್ಯ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಇ. ಚಂದ್ರಕಲಾ, ಹಿರಿಯ ವಕೀಲರಾದ ಆರ್. ಭಾಗ್ಯಲಕ್ಷ್ಮಿ, ಅರಣ್ಯಾಧಿಕಾರಿ ಚಂದ್ರಶೇಖರ ನಾಯ್ಕ, ಮೀಸಲು ಅರಣ್ಯಾಧಿಕಾರಿ ಎಮ. ರವಿ, ಪರಿಸರ ಸಂರಕ್ಷಣಾ
ವೇದಿಕೆಯ ಅಧ್ಯಕ್ಷ ಗಿರೀಶ್ ಎಂ. ದೇವರಮನಿ, ಉಪ ಪ್ರಾಂಶುಪಾಲರಾದ ಸಂಧ್ಯಾ, ಉಪನ್ಯಾಸಕ ನಾಗಪ್ಪ ವೇದಿಕೆಯಲ್ಲಿದ್ದರು.