ಭಾಲ್ಕಿ: ಕ್ರಿಯಾಶೀಲ ವ್ಯಕ್ತಿಗಳಿಗೆ ಜೀವನದಲ್ಲಿ ನಿವೃತ್ತಿ ಎನ್ನುವುದೇ ಇರುವುದಿಲ್ಲ ಎಂದು ಕಲಬುರಗಿಯ ಜಂಟಿ ನಿರ್ದೇಶಕರ ಕಾರ್ಯಾಲಯದ ನಿವೃತ್ತ ಚಿತ್ರಕಲಾ ಪರಿವೀಕ್ಷಕ ಪ್ರೊ| ದೇವಿಂದ್ರಪ್ಪ ಹೇಳಿದರು.
ತಾಲೂಕಿನ ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ವಯಸ್ಸಿಗೆ ಮುಪ್ಪಾದರೂ ಮನಸ್ಸಿಗೆ ಮುಪ್ಪಿಲ್ಲ. ನಾವು ಸದಾ ಕ್ರಿಯಾಶೀಲರಾಗಿರಬೇಕು. ಅಂದಾಗ ಮಾತ್ರ ನಮ್ಮ ಮನಸ್ಸು ಪ್ರಫುಲ್ಲವಾಗಿರುತ್ತದೆ. ಸದಾ ಚಟುವಟಿಕೆ ಯಿಂದಿರುವ ಮನುಷ್ಯ ಜೀವನದಲ್ಲಿ ಸದಾ ಹಸನ್ಮುಖೀಯಾಗಿರುವನು. ಅವನಿಗೆ ಬೇಸರ ಎನ್ನುವುದೇ ಇರುವುದಿಲ್ಲ ಎಂದರು.
ಕೆಎಲ್‌ಇ ಶಿಕ್ಷಣ ಸಂಸ್ಥೆ ಬೀರದ ಮಹಾತ್ಮಾಗಾಂಧಿ ಪ್ರೌಢಶಾಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸದಾ ಚಟುವಟಿಕೆಯಲ್ಲಿರುವರು. ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರು.
ಉಪನಿರ್ದೇಶಕ ಕಾರ್ಯಾಲಯದಲ್ಲಿ ಸಹಾಯಕ ನಿರ್ದೇಶಕ ಗುಂಡಪ್ಪಾ ಹುಡಗೆ ಮಾತನಾಡಿದರು. ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಹಾರುದ್ರಪ್ಪ ಅಣದೂರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಚಿತ್ರಕಲಾ ಶಿಕ್ಷಕ ಶಿವಶರಣಪ್ಪ ಸೊನಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜೇಶ್ವರಿ ದೇವೇಂದ್ರಪ್ಪ, ಚಿತ್ರಕಲಾ ಶಿಕ್ಷಕರಾದ ಎಸ್. ಜಾಧವ, ಪರಮೇಶ್ವರ, ಶಫಿಯೋದಿನ್, ವಿಜ್ಞಾನ ಶಿಕ್ಷಕ ಮಂಜುನಾಥ ಬೆಳಕೆರೆ, ಕಿರಣಕುಮಾರ ಭಾಟಸಿಂಗೆ, ದೀಪಕ ಗಾಯಕವಾಡ, ಓಂ ಬಿರಾದಾರ, ಶಿವಕುಮಾರ, ಆನಂದ, ಸೋಪಾನ ಇನ್ನಿತರರು ಇದ್ದರು. ಸಂಜೀವಕುಮಾರ ಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಮಾಸಿಮಾಡೆ ನಿರೂಪಿಸಿದರು. ಪ್ರವೀಣಕುಮಾರ ಸಿಂಧೆ ವಂದಿಸಿದರು.