Advertisement

ಕ್ಷೇತ್ರ ಉಳಿಸಿಕೊಳ್ಳಲು ಪಕ್ಷದ ಅಭ್ಯರ್ಥಿ ಪರ ಪ್ರಚಾರ

02:42 PM Apr 17, 2023 | Team Udayavani |

ಚಾಮರಾಜನಗರ: 15 ವರ್ಷದಿಂದ ಕ್ಷೇತ್ರ ಕಳೆದುಕಂಡಿದ್ದೇವೆ. ಮತ್ತೆ ಬೇರೆಯವರ ಕೈಗೆ ಹೋಗಬಾರದು. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಪಕ್ಷ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಿ.ನಾಗಶ್ರೀ ಪ್ರತಾಪ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದೇನೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಕೇಳಿದ್ದೆ. ಆಗಲೂ ಕೈತಪ್ಪಿತ್ತು. ಆಗಲೂ ವಿಧಾನಸಭೆ, ಲೋಕಸಭೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಗ್ರಾಪಂ, ಚಾಮುಲ್‌, ಕೊಳ್ಳೇಗಾಲ ನಗರಸಭೆ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಸಂಘಟನೆ ಜೊತೆಗೆ ಜನಪರ ಕೆಲಸಗಳನ್ನೂ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಈ ಬಾರಿಯೂ ಟಿಕೆಟ್‌ ಸಿಗಲಿಲ್ಲ: 2023ರ ವಿಧಾನಸಭಾ ಚುನಾವಣೆಯಲ್ಲಿ ಚಾ.ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಬಹುದೆಂಬ ಆಶಾಭಾವನೆ ಇಟ್ಟುಕೊಂಡಿದ್ದೆ. ಹೆಣ್ಣು ಮಗಳು ರಾಜಕಾರಣದಲ್ಲಿ ತೊಡಗಿಕೊಂಡು ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕಾರ್ಯಕರ್ತರ ಬೆಂಬಲದಿಂದ ಸಂಘಟನೆ ಮಾಡಿದ್ದೇನೆ. ಆದರೆ, ಈ ಬಾರಿಯೂ ನನಗೆ ಟಿಕೆಟ್‌ ಸಿಗಲಿಲ್ಲ. ಇದರಿಂದ ನನಗೆ ಬಹಳ ನೋವಾಯಿತು ಎಂದು ಹೇಳಿದರು.

ಎರಡು ದಿನ ಕಾಲಾವಕಾಶ ಕೇಳಿದ್ದೆ: ಆದರೆ, ಬಂಡಾಯವಾಗಿ ಸ್ಪರ್ಧಿಸಬೇಕೆಂಬ ಯೋಚನೆ ಕನಸು ಮನಸಿನಲ್ಲೂ ಬಂದಿರಲಿಲ್ಲ. ನನಗೆ ಟಿಕೆಟ್‌ ದೊರಕಬಹುದೆಂದು ನನ್ನ ಬೆಂಬಲಿಗರು, ಹಿತೈಷಿಗಳು ಬಹಳ ಆಶಾಭಾವನೆ ಇಟ್ಟುಕೊಂಡಿದ್ದರು. ಟಿಕೆಟ್‌ ದೊರಕದ ಕಾರಣ, ಅವರಿಗೂ ಬಹಳ ನೋವಾಯಿತು. ಬಂಡಾಯವಾಗಿ ಸ್ಪರ್ಧಿಸಿ ಎಂದು ಅನೇಕ ಬೆಂಬಲಿಗರು ಒತ್ತಾಯ ಮಾಡಿದರು. ಆ ಪರಿಸ್ಥಿತಿಯಲ್ಲಿ ನಾನು ಏನೂ ಹೇಳಲಿಲ್ಲ. ಬೆಂಬಲಿಗರು ತಾವೇ ಸಭೆ ಆಯೋಜಿಸಿದರು. ಸಭೆಗೆ ಬರಲೇಬೇಕು ಎಂದು ಪಟ್ಟು ಹಿಡಿದರು. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ನನಗೆ ಬಿಡಬೇಕು ಎಂಬ ಷರತ್ತಿನೊಂದಿಗೆ ಸಭೆಗೆ ಹಾಜರಾದೆ. ಟಿಕೆಟ್‌ ದೊರಕದಿದ್ದರೂ ನನ್ನನ್ನು ಬೆಂಬಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಭೆಗೆ ಆಗಮಿಸಿದ್ದರು. ಆಗಲೂ, ಎರಡು ದಿನ ಕಾಲಾವಕಾಶ ಕೇಳಿದ್ದೆ. ಅದೇ ದಿನ ಸಚಿವ ವಿ.ಸೋಮಣ್ಣನವರು ನಮ್ಮ ಮನೆಗೆ ಬಂದಿದ್ದಾಗಲೂ ಎರಡು ದಿನ ಕಾಲಾವಕಾಶ ಕೇಳಿದ್ದೆ ಎಂದು ವಿವರಿಸಿದರು.

ಪಕ್ಷ ಮುಖ್ಯ: ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂದು ಬಿಜೆಪಿ ನನಗೆ ಹೇಳಿಕೊಟ್ಟಿದೆ. ಪಕ್ಷ ನನಗೆ ತಾಯಿ ಇದ್ದಂತೆ. ಅದನ್ನು ನಂಬಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ನಮ್ಮ ಆಸೆ-ಆಕಾಂಕ್ಷೆಗಳು ಬಹಳಷ್ಟು ಇವೆ. ದಿನ ಬೆಳಗಾದರೆ ಹೊಸ ಆಶಾಭಾವನೆಗಳನ್ನು ಇಟ್ಟುಕೊಂಡಿರುತ್ತೇವೆ. ನಮ್ಮ ತಂದೆಯವರ ಆಸೆ ಪೂರೈಸಬೇಕೆಂದು ಹೋರಾಟ ನಡೆಸಿದೆ. ಆದರೆ, ಪಕ್ಷ ತನ್ನದೇ ಆದ ಉದ್ದೇಶದಿಂದ ತೀರ್ಮಾನ ಕೈಗೊಂಡಿದೆ. ಅದಕ್ಕೆ ಬದ್ಧಳಾಗಿದ್ದೇನೆ ಎಂದು ಅವರು ಹೇಳಿದರು.

Advertisement

ಉತ್ತಮ ಜನಪ್ರತಿನಿಧಿ ಕೊರತೆ ಇದೆ: 15 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಉತ್ತಮ ಜನಪ್ರತಿನಿಧಿಗಳ ಕೊರತೆಯಿದೆ. ಹಾಗಾಗಿ, ನಾನು ಬಿಜೆಪಿಯ ಅಧಿಕೃತ ಅಭ್ಯರ್ಥಿಯ ಪರ ಕೆಲಸ ಮಾಡುತ್ತೇನೆ. ಮತ್ತೆ ಸಣ್ಣಪುಟ್ಟ ತಪ್ಪುಗಳಿಂದ ಕ್ಷೇತ್ರ ಕಳೆದುಕೊಳ್ಳಬಾರದು. ಇಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ನಾಗಶ್ರೀ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮುಖಂಡ ಉಡಿಗಾಲ ಆರ್‌. ಕುಮಾರಸ್ವಾಮಿ, ಚಾಮುಲ್‌ ನಿರ್ದೇಶಕ ಎಚ್‌.ಎಸ್‌. ಬಸವರಾಜು, ಎನ್‌. ಬಸವನಾಯಕ, ಎಪಿಎಂಸಿ ಮಾಜಿ ನಿರ್ದೇಶಕ ಎಸ್‌. ಮಹೇಶ್‌, ರಾಮಸಮುದ್ರ ಪ್ರಸನ್ನ, ಗ್ರಾಪಂ. ಮಾಜಿ ಸದಸ್ಯ ಚಿಕ್ಕಮಹದೇವೇಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ನಾಯಕ ಸಂತೋಷ್‌ ದೂರವಾಣಿ ಕರೆ: ಟಿಕೆಟ್‌ ದೊರಕದ ಕಾರಣ ತುಂಬಾ ನೋವಾಯಿತು. ಹಾಗಾಗಿ, ಯಾವ ಪ್ರತಿಕ್ರಿಯೆ ನೀಡಲೂ ನನಗೆ ಮನಸ್ಸಾಗಲಿಲ್ಲ. ಮೌನವಾಗೇ ಉಳಿದೆ. ಬಿಜೆಪಿ ರಾಷ್ಟ್ರೀಯ ನಾಯಕ ಸಂತೋಷ್‌ ಅವರು ದೂರವಾಣಿ ಕರೆ ಮಾಡಿದ್ದರು. ಟಿಕೆಟ್‌ ದೊರಕದ ಕಾರಣ, ನಿನಗೆ ನೋವಾಗಿರುವುದು ಸಹಜ. ನೋವಿನಿಂದ ಹೊರ ಬಂದು ಪಕ್ಷದ ಪರ ಕೆಲಸ ಮಾಡು. ಪಕ್ಷದ ಸಿದ್ಧಾಂತಗಳಿಗೆ ಬದ್ಧಳಾಗಿ  ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಕೋ ಎಂದು ಅವರು ಸಲಹೆ ನೀಡಿದರು ಎಂದು ನಾಗಶ್ರೀ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next