ಶಹಾಪುರ: ಕಾಯಕ ಸಂಸ್ಕೃತಿ ಆಚರಣೆ ಮೂಲಕ ಕೆಲಸದಲ್ಲಿ ಸಂತೃಪ್ತಿ ಜೊತೆಗೆ ದೈವಾನುಭೂತಿ ಹೊಂದಿದ ಹಾಲುಮತ ಸಮಾಜ ನೀರು ಕೇಳಲು ಬಂದವರಿಗೆ ಹಾಲುಕೊಟ್ಟು ಬೆಳೆಸಿದ ಕೀರ್ತಿ ಸಲ್ಲುತ್ತದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಕಲಬುರಗಿ ವಿಭಾಗದ ಪೀಠಾಧ್ಯಕ್ಷ ಸಿದ್ಧರಾಮಾನಂದ ಮಹಾಸ್ವಾಮೀಜಿ ಹೇಳಿದರು.
ನಗರದ ಹಳೆಪೇಟೆಯ ವಗ್ಗರಾಯಣ್ಣ ಶರಣನ ಸನ್ನಿಧಾನದ ಆವರಣದಲ್ಲಿ 9 ನೇ ವರ್ಷದ ಹಸಿರು ಮತ್ತು ಹಾಲುಮತ ಸಂಸ್ಕೃತಿ ಜಾಗೃತಿ ಯಾತ್ರೆಗೆ ಚಾಲನೆ ನೀಡಿ, ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದ ಆರಾಧ್ಯ ದೇವರಾದ ಶ್ರೀ ಮಾಳಿಂಗರಾಯ, ಬೀರ ದೇವರು, ದಾರ್ಶನಿಕ ಕನಕದಾಸರಂಥ ದಾಸ ಶ್ರೇಷ್ಠರ ಪರಂಪರೆ ಹೊಂದಿದ ಹಾಲುಮತ ಸಮುದಾಯ ಮನುಷ್ಯ ಸಂಸ್ಕೃತಿ ಕಾಳಜಿ ಮತ್ತು ಜೀವ ಸಂಕುಲದ ಉಸಿರಾಗಿರುವ ನಿಸರ್ಗ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಮನುಷ್ಯತ್ವಕ್ಕಾಗಿ ಸಂಸ್ಕೃತಿ ಮುಖ್ಯವಾಗಿದ್ದು, ಪ್ರತಿಯೊಬ್ಬರು ಇಂದಿನ ಹೊಸ ಸಮಾಜದಲ್ಲಿ ಸದಾಚಾರ ಸಂಪನ್ನರಾಗಬೇಕು. ಕ್ಷಮಾಗುಣ, ಸ್ಪಂಧನಾಗುಣ, ಪ್ರೀತಿ ವಿಶ್ವಾಸ ಮತ್ತು ನಂಬಿದ ದೈವ ದೇವರಲ್ಲಿ ಶ್ರದ್ಧೆ ಭಕ್ತಿಯನಿಟ್ಟು ಮುನ್ನಡೆಯಬೇಕು ಎಂದರು. ಇದೇ ಸಂದರ್ಭದಲ್ಲಿ ಶ್ರೀಗಳು ಸಸಿಗಳನ್ನು ವಿತರಿಸಿ ಅವುಗಳ ರಕ್ಷಣೆ ಮಾಡುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕನಕಗುರು ಪೀಠದ ನಿಂಗಬೀರ ದೇವರು, ನಗರದ ಸಿದ್ಧರಾಮಯ್ಯ ಗುರುವಿನ, ಕುರುಬ ಸಮಾಜದ ಹಿರಿಯ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ಮಾಜಿ ಎಂ.ಎಲ್ .ಸಿ ಅಮಾತೆಪ್ಪ ಕಂದಕೂರ, ರೈತ ಮುಖಂಡ ಶರಣಪ್ಪ ಸಲಾದಪುರ, ಡಾ| ಭೀಮಣ್ಣ ಮೇಟಿ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಸಾಯಬಣ್ಣ ಹೊರಕೇರಿ, ಮುಖಂಡ ವಿಠಲ ವಗ್ಗಿ, ಶಾಂತಗೌಡ ನಾಗನಟಿಗಿ, ಯಮನಪ್ಪ ಭಪ್ಪರಗಿ, ಮಲ್ಲಿಕಾರ್ಜುನ ಕಂದಕೂರು, ಅಯ್ಯಣ್ಣ ಇನಾಂದಾರ, ಮಾನಪ್ಪ ಅರಿಕೇರಿ
ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಸಿ.ಬಿ.ಕಮಾನದಿಂದ ರಾಯಣ್ಣ ದೇವರ ಸನ್ನಿಧಾನದವರೆಗೂ ಯಾತ್ರಾ ಮೆರವಣಿಗೆ ಜರುಗಿತು.