ಪಣಜಿ: ಗೋವಾದಲ್ಲಿ ವಿವಿಧ ಪಕ್ಷಗಳ ಶಾಸಕರು ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದಾರೆ, ಆದರೆ ಈ ಶಾಸಕರನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪಕ್ಷದ ವರಿಷ್ಠರು ಇನ್ನೂ ಅನುಮತಿ ನೀಡಿಲ್ಲ ಎಂದು ಗೋವಾ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಹೇಳಿದ್ದಾರೆ.
ಪಣಜಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಸದ್ಯ ರಾಜ್ಯದಲ್ಲಿ 25 ಜನ ನಮ್ಮ ಸರಕಾರದ ಬೆಂಬಲಕ್ಕೆ ಶಾಸಕರಿದ್ದಾರೆ. ಇತರ ಪಕ್ಷಗಳ ಹಲವು ಜನ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸದ್ಯ ಇತರ ಪಕ್ಷಗಳ 5 ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ನಮ್ಮ ಪಕ್ಷದ ವರಿಷ್ಠರು ಅನುಮತಿ ನೀಡಿದರೆ ನಮ್ಮ ಪಕ್ಷದ ಶಾಸಕರ ಸಂಖ್ಯೆ 30 ಕ್ಕೆ ಏರಿಕೆಯಾಗಲಿದೆ ಎಂದು ಸಿ.ಟಿ ರವಿ ಹೇಳಿದರು.
ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ರಾಜ್ಯದ ಜನತೆ ಕಳೆದ 50 ವರ್ಷಗಳ ಗೋವಾದ ಅಭಿವೃದ್ಧಿ ಗಮನಿಸಿಬೇಕು ಮತ್ತು ಕಳೆದ 8 ವರ್ಷಗಳ ಅಭಿವೃದ್ಧಿ ಕಾರ್ಯವನ್ನು ಗಮನಿಸಬೇಕು. ಕಳೆದ 50 ವರ್ಷಗಳಲ್ಲಿ ಸಾಧ್ಯವಾಗದಿದ್ದನ್ನು ಬಿಜೆಪಿ ಸರ್ಕಾರವು ಕಳೆದ 8 ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಅಗಷ್ಟ 15 ರಂದು ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಗೊಳ್ಳಲಿದೆ. ಈ ನಿಲ್ದಾಣದ ಉಧ್ಘಾಟನೆಯ ನಂತರ ಪ್ರವಾಸೋದ್ಯಮ ದೃಷ್ಠಿಯಿಂದ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ಸಚಿವ ಮಾವಿನ್ ಗುದಿನ್ಹೊ, ವಿಶ್ವಜಿತ್ ರಾಣೆ, ರೋಹನ್ ಖಂವಟೆ, ದಾಮು ನಾಯ್ಕ ವೇದಿಕೆಯ ಮೇಲೆ ಉಪಸ್ಥಿತರಿದ್ದರು.