ಲಕ್ನೋ: ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹಿಂದೂಗಳ ಮದುವೆ ಕುರಿತು ವಿವಾದಿತ ಹೇಳಿಕೆ ನೀಡಿರುವ ಎಐಎಂಐಎಂ ರಾಜ್ಯಾಧ್ಯಕ್ಷ ಶೌಕತ್ ಅಲಿ ಪೇಚಿಗೆ ಸಿಲುಕಿರುವುದಾಗಿ ವರದಿ ತಿಳಿಸಿದೆ.
ನಾವು ಮೂರು ಮದುವೆಯಾಗುತ್ತೇವೆ ಎಂದು ಜನರು ಹೇಳುತ್ತಾರೆ. ನಮಗೆ ಎರಡು ಅಥವಾ ಮೂರು ಜನರ ಹೆಂಡತಿಯರಿದ್ದರೂ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಗೌರವಿಸಿಕೊಂಡು ಸಮಾಜದಲ್ಲಿರುತ್ತೇವೆ. ನಮ್ಮ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಹಾಕುತ್ತೇವೆ. ಆದರೆ ಹಿಂದೂಗಳು ಒಬ್ಬ ಹೆಂಡತಿಯನ್ನು, ಮೂವರು ಪ್ರೇಯಸಿರನ್ನು ಹೊಂದಿರುತ್ತಾರೆ. ಆದರೆ ನೀವು ನಿಮ್ಮ ಒಬ್ಬ ಪತ್ನಿಯನ್ನೂ ಅಥವಾ ಪ್ರೇಯಸಿಯನ್ನು ಗೌರವಿಸಲ್ಲ ಎಂದು ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ಹಿಜಾಬ್ ಕುರಿತ ಅಭಿಪ್ರಾಯದ ಬಗ್ಗೆ ಮಾತಾನಾಡಿದ ಅವರು, ದೇಶದಲ್ಲಿ ಜನರು ಏನನ್ನು ಧರಿಸಬೇಕೆನ್ನುವುದು ಸಂವಿಧಾನ ನಿರ್ಧರಿಸಬೇಕು ವಿನಃ ಹಿಂದುತ್ವ ನಿರ್ಧರಿಸುವುದಲ್ಲ ಎಂದರು.
ಮದರಸಾ, ಹತ್ಯೆ, ಹಿಜಾಬ್, ವಕ್ಫ್, ವಿಷಯಗಳಲ್ಲಿ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ದುರ್ಬಲವಾದಾಗ ಇಂಥ ವಿಷಯಗಳನ್ನು ತಂದು ಟಾರ್ಗೆಟ್ ಮಾಡುತ್ತಾರೆ ಎಂದು ಹೇಳಿದರು.
ಶುಕ್ರವಾರ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಹಿಜಾಬ್ ವಿಷಯವಾಗಿ, “ಮುಸ್ಲಿಮರು ಚಿಕ್ಕ ಮಕ್ಕಳಿಗೆ ಹಿಜಾಬ್ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ನಾವು ನಿಜವಾಗಿಯೂ ನಮ್ಮ ಹುಡುಗಿಯರನ್ನು ಒತ್ತಾಯಿಸುತ್ತಿದ್ದೇವೆಯೇ? ನಮ್ಮ ಹೆಣ್ಣುಮಕ್ಕಳು ಹಿಜಾಬ್ ಧರಿಸಲು ಬಿಡಿ, ನೀವು ಬಯಸಿದರೆ ಬಿಕಿನಿಯನ್ನು ಧರಿಸಿ…” ಎಂದು ಕಿಡಿಕಾರಿದ್ದರು.