Advertisement

ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು:ಕಣ್‌ ತೆರೆದು ನೋಡಿ!

11:32 AM May 03, 2018 | |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ? ನಮ್ಮ ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು! 

Advertisement

ಮಳೆಯಲ್ಲಿ ನರ್ತಿಸುವ  ಪ್ರಾಣಿಗಳು ಯಾವುವು?
ಮಳೆ ಬಂದರೆ ನಮ್ಮಲ್ಲಿ ಬಹಳಷ್ಟು ಜನರ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಕೆಲವರು ಮಾತ್ರ, ಹಾಳಾದ ಮಳೆ ಯಾಕಾದರೂ ಬಂತೋ ಎಂದು ಗೊಣಗಿಕೊಳ್ಳುತ್ತಾರೆ. ಅವರ ಆ ವ್ಯಥೆಯ ಹಿಂದೆ ನಾನಾ ಕಾರಣಗಳಿರುತ್ತವೆ. ಉದಾಹರಣೆಗೆ, ಬಟ್ಟೆ ಒಣಗಲು ಹಾಕಿದ್ದಿರಬಹುದು, ಛತ್ರಿ ತರಲು ಮರೆತಿರಬಹುದು ಇತ್ಯಾದಿ. ಆದರೆ, ಸೃಷ್ಟಿಗೆ ಮತ್ತು ಇಳೆಗೆ ಜೀವವನ್ನೀಯುತ್ತಿರುವ ಮಳೆ ಮಿಲಿಯ ವರ್ಷಗಳಿಂದ ಸುರಿಯುತ್ತಿದೆ. ಈ ಪ್ರಕ್ರಿಯೆ ನಮ್ಮ ಯಕಶ್ಚಿತ್‌ ಕಾರಣಗಳಿಗೆಲ್ಲಾ ಮಿಗಿಲಾದುದು ಎಂದು ನೆನಪಿರಲಿ. ಹಾಗಾಗಿ ಮಳೆ ಬಂದಾಗ, ಮಾಡುತ್ತಿರುವ ಕೆಲಸದಿಂದ ಒಂದೆರಡು ಕ್ಷಣ ಬಿಡುವು ಮಾಡಿಕೊಳ್ಳಿ. ಕಿಟಕಿಯಿಂದ ಮಳೆ ತರುವ ಆನಂದವನ್ನು ಆಸ್ವಾದಿಸಿ. ಮಳೆ ಬಂದಾಗ ಹೀಗೆ ಸಂತಸದಿಂದ ಕುಣಿದಾಡುವುದು ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ಕೂಡಾ. ಈ ಪಟ್ಟಿಯಲ್ಲಿ ಅನೇಕ ಪ್ರಾಣಿಗಳು ಸೇರಿಕೊಂಡಿವೆ. ಗಂಡು ನವಿಲು ಮಳೆ ಬಂದಾಗ ಗರಿ ಬಿಚ್ಚಿ ನರ್ತಿಸುವುದು ನಿಮಗೆ ಗೊತ್ತಿರಲೇಬೇಕು. ಚಿಂಪಾಂಜಿಗಳು ಕೂಡಾ ಮಳೆ ಬಂದಾಗ ನರ್ತಿಸುತ್ತವೆ. ಅವುಗಳ ನರ್ತನ ಬಹಳ ವಿನೂತನವಾದುದೆಂದೇ ಹೆಸರುವಾಸಿ. ಹಮ್ಮಿಂಗ್‌ ಪಕ್ಷಿಗಳಂತೂ ಮಳೆ ಬಂದಾಗ ಹುಚ್ಚೆದ್ದು ಕುಣಿದು ಬಿಡುತ್ತವೆ. ಗಿಳಿಗಳಿಗೂ ಮಳೆ ಬಂದರೆ ಅಷ್ಟೇ ಖುಷಿ. ಹಾಗಾಗಿ ಮಳೆ ಬರುವಾಗಲೇ ಪ್ರಾಣಿಗಳ ವೀಕ್ಷಣೆಗೆ ತೆರಳಿ. ಅವುಗಳ ಸಂತಸವನ್ನು ಕಣ್ತುಂಬಿಕೊಳ್ಳಿ. ಬಂಧನದಲ್ಲಿರುವ ಪ್ರಾಣಿಗಳನ್ನು ನೋಡುವುದಕ್ಕಿಂತ ಕಾಡಿನಲ್ಲಿ ಸ್ವತಂತ್ರವಾಗಿ ತಿರುಗಾಡಿಕೊಂಡಿರುವ ಪ್ರಾಣಿಗಳನ್ನು ನೋಡುವುದೇ ಒಂದು ಖುಷಿ. ಮಳೆ ಬರುವಾಗ ಕಾಡಿನಲ್ಲಿ ಸಫಾರಿ ಹೋಗುವ ಅವಕಾಶ ಸಿಕ್ಕರೆ ಖಂಡಿತಾ ಬಿಡದಿರಿ.

ಆನೆಗಳು ಬೆಕ್ಕಿನಂತೆ ಆಡುವುದು ಯಾವಾಗ?
ಬೃಹತ್‌ ಗಾತ್ರದ ಆನೆಯೊಂದು ಗಂಭೀರವಾಗಿ, ಕೋಪೋದ್ರಿಕ್ತಗೊಂಡು ನಿಮ್ಮ ಬಳಿ ಬಂದು  àಳಿಡುವುದಕ್ಕೆ ಬದಲಾಗಿ ಮ್ಯಾಂವ್‌ ಎಂದರೆ ಹೇಗಿರುತ್ತದೆ. ಸಖತ್ತಾಗಿರುತ್ತದೆ ಎಂದು ನೀವೇನೋ ಕಣ್ಣರಳಿಸಿಕೊಂಡು ಹೇಳಬಹುದು. ಆದರೆ, ಆನೆ ಮ್ಯಾಂವ್‌ ಅನ್ನಬೇಕಲ್ಲ. ಅಷ್ಟಕ್ಕೂ ಆನೆಯನ್ನು ಪುಟ್ಟ ಗಾತ್ರದ ಬೆಕ್ಕಿನೊಂದಿಗೆ ಹೋಲಿಸಲಾಗುತ್ತದೆಯೇ! ಮಾತಿನ ನಡುವೆ, ಆನೆ-ಇಲಿಯನ್ನು ಜೊತೆ ಸೇರಿಸಿ ತಮಾಷೆ ಮಾಡುವುದುಂಟು. ಅದು ಗಾತ್ರದ ವಿಚಾರವಾಯಿತು. ಇಲಿಗಳ ದುಷ್ಮನ್‌ ಬೆಕ್ಕಿಗೂ, ಆನೆಗೂ ಹೇಗೆ ಸಂಬಂಧ ಕಲ್ಪಿಸಬಹುದು. ಛೇ, ನೀವು ಅನ್ಯಥಾ ಭಾವಿಸಬಾರದು. ವಿಷಯ ಏನೆಂದರೆ, ಆನೆ ಮತ್ತು ಬೆಕ್ಕಿಗೆ ಒಂದು ವಿಚಾರದಲ್ಲಿ ಸಾಮ್ಯತೆ ಇದೆ. ಅದು ಗುರುಗುಟ್ಟುವುದರಲ್ಲಿ. ಮನೆಯವರು ಕೆಲಸವಿಲ್ಲದೆ ಟಿವಿ ನೋಡುತ್ತಲೋ, ಊಟ ಮಾಡುತ್ತಲೋ ಕುಳಿತಿದ್ದರೆ ಬೆಕ್ಕು ಗುರುಗುಟ್ಟುತ್ತಾ ಕಾಲಿಗೆ ಮೈ ತಾಗಿಸಿಕೊಂಡು ನಡೆಯುವುದು ಗೊತ್ತಿರಬಹುದು. ಬೆಕ್ಕು ಹಾಗೆ ಮಾಡಿದರೆ, ಒಂದು ಕಾಲಿನಲ್ಲಿ ನೂಕಿಯೋ, ಸಿಟ್ಟು ಬಂದರೆ ಒಧ್ದೋ ಆಚೆಗೆ ತಳ್ಳುತ್ತೀರಿ. ಒಂದು ವೇಳೆ ಆನೆಯೇ ಹಾಗೆ ಮಾಡಿದರೆ ಅದನ್ನು ನಿಮ್ಮಿಂದ ನೂಕಲಾಗುತ್ತದೆಯೋ? ಹಾಗೆ ಮಾಡಿದರೆ ಅದು ನಿಮ್ಮನ್ನು ಸೊಂಡಿಲಿನಿಂದ ಹಿಡಿದು ಎತ್ತಿ ಎಸೆದೀತು. ಅವೆಲ್ಲಾ ಯಾಕೆ, ಆನೆಯ ಒದೆಯಿಂದ ತಪ್ಪಿಸಿಕೊಳ್ಳೋದು ಹೇಗಪ್ಪಾ ಎಂದು  ‌ುುಂದಾಲೋಚಿಸುವುದನ್ನು ಬಿಟ್ಟುಬಿಡಿ. 

ಆನೆಯೇನು ಮನುಷ್ಯರ ಬಳಿ ಗುರುಗುಟ್ಟುತ್ತಾ ಬರುವುದಿಲ್ಲ. ಅದು ಗುರುಗುಡುವುದು ಪ್ರೀತಿಪಾತ್ರರ ಬಳಿ ಮಾತ್ರ. ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅವು ಹಾಗೆ ಮಾಡುತ್ತವೆ. ಗಂಡಾನೆಯ ಪ್ರೀತಿಯನ್ನು ಅದರ ಗುರುಗುಟ್ಟುವಿಕೆಯಿಂದ ಅರ್ಥ ಮಾಡಿಕೊಂಡ ಹೆಣ್ಣಾನೆ ತಾನೂ ಗುರುಗುಟ್ಟುವುದರ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.

ಬಾವಲಿಗೆ ಮೋಸ ಮಾಡುವವರು ಯಾರು?

Advertisement


ಎಲ್ಲಾ ಮೋಸಕ್ಕೂ ರಾಜಕಾರಣಿಗಳನ್ನು ದೂರುವುದು ಸರಿಯಲ್ಲ! ನಮಗೆ ತಿಳಿದ ಹಾಗೆ ಬಾವಲಿಗಳು ರಾತ್ರಿಯ ವೇಳೆ ಬೇಟೆಯಾಡಲು ಹೊರಬೀಳುತ್ತವೆ. ಕತ್ತಲಲ್ಲಿ ಶಿಕಾರಿಗೆ ಹೊರಟ ಬೇಟೆಗಾರರು ಟಾರ್ಚನ್ನು, ಬಂದೂಕುಗಳನ್ನು ಕೊಂಡೊಯ್ಯುವಂತೆ ಬಾವಲಿಗಳು ಏನನ್ನೂ ಕೊಂಡೊಯ್ಯುವುದಿಲ್ಲ. ತಮ್ಮ ಸ್ವಂತ ಸಾಮರ್ಥ್ಯದಿಂದಲೇ ಅವು ಬೇಟೆಯಾಡುತ್ತವೆ. ಅವುಗಳು ಬೇಟೆಯಾಡಲು ಅನುಸರಿಸುವ ವಿಧಾನ ಬಹಳ ಸ್ವಾರಸ್ಯಕರವಾದುದು. ಅವುಗಳಿಗೆ ರಾತ್ರಿಗತ್ತಲಿನಲ್ಲಿ ಕಣ್ಣು ಕಾಣಿಸುವುದಿಲ್ಲ. ಹೀಗಿದ್ದೂ ಅವುಗಳು ತಮ್ಮ ಬೇಟೆಯನ್ನು ಗುರಿ ತಪ್ಪದೆ ಹಿಡಿಯುತ್ತವೆ, ಹೇಗೆ? ಉತ್ತರ, ತಾವು ಹೊರಡಿಸುವ ಅಲ್ಟ್ರಾಸೋನಿಕ್‌ ತರಂಗಗಳಿಂದ. ಬಾವಲಿಗಳು ಎಡೆಬಿಡದೆ ಕೀಚಲು ದನಿಗೆ ಹತ್ತಿರವಾದ ಅಲ್ಟ್ರಾಸೋನಿಕ್‌ ಸದ್ದುಗಳನ್ನು ಬಾಯಿಯಿಂದ ಹೊರಡಿಸುತ್ತಿರುತ್ತವೆ. ಈ ಅಲ್ಟ್ರಾಸೋನಿಕ್‌ ತರಂಗಗಳು ಸುತ್ತಮುತ್ತಲ ವಸ್ತುಗಳಿಗೆ ಬಡಿದು ಹಿಂತಿರುಗಿ ಬರುತ್ತವೆ. ಅದರ ತೀವ್ರತೆಯ ಆಧಾರದ ಮೇಲೆ ಬಾವಲಿ, ತನ್ನ ಬೇಟೆಯ ಇರುವಿಕೆಯನ್ನು ಪತ್ತೆ ಮಾಡುತ್ತದೆ. ಇವಿಷ್ಟೂ ಲೆಕ್ಕಾಚಾರವನ್ನು ಬಾವಲಿಗಳು ಕ್ಷಣಮಾತ್ರದಲ್ಲಿ ಮಾಡಿಬಿಡುತ್ತವೆ. ಇದಕ್ಕೆ ಪ್ರತಿಯಾಗಿ ಬಾವಲಿಗಳಿಗೆ ಹೆಚ್ಚು ತುತ್ತಾಗುವ ಚಿಟ್ಟೆ ಪ್ರಭೇದಕ್ಕೆ ಸೇರಿದ ಹುಳುವೊಂದು ತಪ್ಪಿಸಿಕೊಳ್ಳಲು ಚಾಣಾಕ್ಷ ತಂತ್ರವನ್ನು ಅಭಿವೃದ್ಧಿಪಡಿಸಿದೆ. 
ಅದೇನೆಂದರೆ ಬಾವಲಿಗಳು ಹೊರಡಿಸುವ ಅಲ್ಟ್ರಾಸೋನಿಕ್‌ ತರಂಗಗಳಿಗೆ ಪ್ರತಿಯಾಗಿ ತಾವೂ ಅಲ್ಟ್ರಾಸೋನಿಕ್‌ ತರಂಗಗಳನ್ನು ಹೊರಡಿಸುವುದು. ಹೀಗೆ ಮಾಡಿದಾಗ ಪ್ರತಿಫ‌ಲಿತ ತರಂಗಗಳ ಜೊತೆಗೆ ಹುಳುಗಳ ತರಂಗಗಳೂ ಸೇರಿಕೊಂಡು ಬಾವಲಿಗಳು ಬಾವಲಿಗಳ ದಿಕ್ಕು ತಪ್ಪುವುದು. ಇದೇ ರೀತಿಯ ತಂತ್ರಜ್ಞಾನವನ್ನು ವಿಜ್ಞಾನಿಗಳು ಕೆಲ ಸ್ಥಳಗಳಲ್ಲಿ ಮೊಬೈಲ್‌ ಸಿಗ್ನಲ್‌ಗ‌ಳನ್ನು ಬ್ಲಾಕ್‌ ಮಾಡಲು ಬಳಸಿಕೊಂಡಿದ್ದು. ಆದರೆ, ಬಾವಲಿಗಳಿಗೆ ಮೋಸ ಮಾಡಲು ಆ ಹುಳುಗಳು ಬಹಳ ಹಿಂದೆಯೇ ಆ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದು ಸೋಜಿಗವಲ್ಲವೆ!

ಹರ್ಷ

Advertisement

Udayavani is now on Telegram. Click here to join our channel and stay updated with the latest news.

Next