Advertisement

ಯಾರನ್ನು ನೋವಿಸುವ ಉದ್ದೇಶ ನಮಗಿರಲ್ಲ; ನ್ಯಾಯಾಧೀಶ ಬಿರಾದರ

05:12 PM May 13, 2022 | Team Udayavani |

ಹುಬ್ಬಳ್ಳಿ: ನ್ಯಾಯಾಧೀಶರು ಯಾವಾಗಲೂ ಉದ್ದೇಶ ಪೂರ್ವಕವಾಗಿ ಯಾರನ್ನು ನೋವಿಸುವ, ಯಾರ ವೃತ್ತಿ ಹಾಳು ಮಾಡಬೇಕು ಹಾಗೂ ಕಕ್ಷಿದಾರರಿಗೆ ತೊಂದರೆ ಕೊಡಬೇಕೆಂಬ ದೃಷ್ಟಿಯಿಂದ ಕಾರ್ಯ ನಿರ್ವಹಿಸಲ್ಲ ಎಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿರಾದರ ದೇವೆಂದ್ರಪ್ಪ ಎನ್‌. ಹೇಳಿದರು.

Advertisement

ಇಲ್ಲಿನ ವಕೀಲರ ಸಂಘದ ಸಭಾಭವನದಲ್ಲಿ ವಕೀಲರ ಸಂಘದವರು ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಜೀವನದಲ್ಲಿ ಹಸಿವು, ಧನ ಹಾಗೂ ಹೆಣ್ಣು-ಗಂಡು ಆತುರಗಳಿಗಿಂತ ಮನ್ನಣೆಯ ಆತುರ ಶ್ರೇಷ್ಠ. ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಪ್ರದೇಶದವರು ಬೇರೆ ಭಾಗಕ್ಕೆ ಹೋದರೆ ಅವರಿಗೆ ಅಲ್ಲಿನ ಭಾಷಾ ಶೈಲಿ ಸಮಸ್ಯೆಯಾಗುತ್ತದೆ. ಆದರೆ ಉತ್ತರ ಕರ್ನಾಟಕದವರು ಯಾವುದೇ ಭಾಗಕ್ಕೆ ಹೋದರೂ ಅವರಿಗೆ ಆ ತೊಂದರೆಯಾಗಲ್ಲ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇನ್ನೋರ್ವ ನ್ಯಾಯಾಧೀಶರಾದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಸುಮಂಗಲಾ ಬಸವಣ್ಣೂರ, ಕೌಟುಂಬಿಕ ನ್ಯಾಯಾಲಯಗಳಲ್ಲಿ ಕಕ್ಷಿದಾರರಿಗೆ ಆದಷ್ಟು ಬೇಗ ನ್ಯಾಯ ವಿತರಣೆಯಾದಾಗ ಅವರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಈ ವಿಚಾರದಲ್ಲಿ ಹುಬ್ಬಳ್ಳಿ ವಕೀಲರ ಸಂಘದವರು ನ್ಯಾಯಾಧೀಶರಿಗೆ ಹೆಚ್ಚಿನ ಸಹಕಾರ ನೀಡಿದ್ದರ ಫಲವಾಗಿ ಹಲವು ಪ್ರಕರಣಗಳು ಬೇಗನೆ ಇತ್ಯರ್ಥಗೊಂಡಿವೆ. ಕೆಲವು ಪ್ರದೇಶಗಳ
ಕೋರ್ಟ್‌ಗಳಲ್ಲಿ ವಕೀಲರು ವಾದ ಮಾಡಲ್ಲ. ಉತ್ತರ ಕರ್ನಾಟಕದಲ್ಲಿ ಕೆಲಸ ಮಾಡುವುದೆಂದರೆ ಗೌರವ, ಒತ್ತಡ ರಹಿತ ಜೀವನ ಆಗಿದೆ. ಈ ಭಾಗದಲ್ಲಿ ನ್ಯಾಯಾಧೀಶರಿಗೆ ಗೌರವ, ಸ್ಪಂದನೆ ಕೊಡುತ್ತಾರೆ. ಆತ್ಮೀಯತೆ ತೋರುತ್ತಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ 2ನೇ ಹಿರಿಯ ಶ್ರೇಣಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಕುಮಾರಿ ಸುಜಾತಾ, 4ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಆರ್‌., 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಪುಷ್ಪಾ ಜೋಗೋಜಿ, ನಮ್ಮ ವೃತ್ತಿ ಜೀವನದ ಒಂದು ಹಂತ ಸೇರಿಸಿದ ಜಿಲ್ಲೆ ಧಾರವಾಡ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನಮ್ಮ ಪಾಲ್ಗೊಳ್ಳುವಿಕೆ, ಸಮಯಪ್ರಜ್ಞೆ ಮುಖ್ಯ. ನಮ್ಮ ಬುದ್ಧಿಮಟ್ಟ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಕಿರಿಯ ವಕೀಲರು ಕೋರ್ಟ್‌ಗೆ ಬರುವ ಮುಂಚೆ ಆಯಾ ಪ್ರಕರಣ, ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಸಮಯ ಕೊಡಿ ಎಂದು ಕೇಳಬಾರದು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸಿ.ಆರ್‌.ಪಾಟೀಲ ಮಾತನಾಡಿ, ಕಕ್ಷಿದಾರರಿಗೆ ನ್ಯಾಯದಾನ ಸಿಗುವಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಸಂಘದ ನಡುವೆ ಉತ್ತಮ ಸಂಬಂಧ ಮುಖ್ಯ. ಈಗ ಕಕ್ಷಿದಾರರಿಗೆ ತ್ವರಿತ ನ್ಯಾಯಾಧೀಶರು ಬೇಕಾಗಿದೆ. ಕಾರಣ ನ್ಯಾಯಾಧೀಶರು ಅರ್ಜೆನ್ಸಿಗೆ ಸ್ಪಂದಿಸಬೇಕು. ಪ್ರಕರಣದ ಆಧಾರ ಮೇಲೆ ಆದೇಶ ನೀಡುವಂತಾಗಬೇಕು ಎಂದರು.

1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೇಲಸ್ವಾಮಿ ಚೆಟ್ಟಿಯಾರ ಅತಿಥಿಯಾಗಿದ್ದರು. ನ್ಯಾಯಾಧೀಶರು, ವಕೀಲರ ಸಂಘದ ಕಾರ್ಯದರ್ಶಿ ಅಶೋಕ ಅಣವೇಕರ, ಉಪಾಧ್ಯಕ್ಷ ಐ.ಕೆ. ಬೆಳಗಲಿ ಹಾಗೂ ಸಂಘದ ಪದಾಧಿಕಾರಿಗಳು, ಹಿರಿಯ- ಕಿರಿಯ ವಕೀಲರು ಇದ್ದರು. ರತ್ನಾ ದಾನಮ್ಮನವರ ಪ್ರಾರ್ಥಿಸಿದರು. ಸುನೀತಾ ಪಿಳ್ಳೆ ಸ್ವಾಗತಿಸಿದರು. ಲೋಕೇಶ ಕೆ.ಎಂ. ನಿರೂಪಿಸಿದರು. ಎಂ.ಎಂ. ಹಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next