Advertisement

ನಾವೇ ಇಟ್ಟಿಗೆ ಮಾಡಿಕೊಳ್ಳಬಹುದು

06:31 PM Mar 26, 2018 | |

ಮನೆ ಕಟ್ಟುವಾಗ ಒಂದಷ್ಟು ಸಿಮೆಂಟ್‌ ಗಾರೆ ದಿನವೂ ಉಳಿಯುವುದು ಇದ್ದದ್ದೇ, ಅದನ್ನು ಸಾಮಾನ್ಯವಾಗಿ ಮರುದಿನ ಉಪಯೋಗಿಸಲು ನೋಡಿದರೂ ಅದು ಅದಾಗಲೇ ಸಾಕಷ್ಟು “ಖಾರ’ ಕಳೆದುಕೊಂಡು ಗಟ್ಟಿಗೊಂಡಿರುವುದರಿಂದ, ಅದನ್ನು ಹೊಸ ಮರಳಿನೊಂದಿಗೆ ಬೆರೆಸುವುದೂ ಕಷ್ಟವಾಗಬಹುದು. ಆದುದರಿಂದ ಸಂಜೆ ಹೊತ್ತು ಗಾರೆಕೆಲಸದ ನಂತರ ಅದು ಪಾಯ ಇರಲಿ ಗೋಡೆ ಇರಲಿ, ಉಳಿಯುವ ಸಿಮೆಂಟ್‌ ಮಿಶ್ರಣವನ್ನು ಅಚ್ಚಿನಲ್ಲಿ ಹಾಕಿದರೆ ದಿನಕ್ಕೆ ಹತ್ತಾರು ಇಟ್ಟಿಗೆಗಳನ್ನು ಮಾಡಿಕೊಳ್ಳಬಹುದು.  

Advertisement

ಮನೆ ಕಟ್ಟುವಾಗ ಅನೇಕಬಾರಿ ಇಟ್ಟಿಗೆಗಳು ಸಾಲದೆ ಪರದಾಟ ಆಗುವುದುಂಟು. ಪ್ರತಿ ಘಟ್ಟದಲ್ಲೂ ಅಂದರೆ ಪಾಯದಿಂದ ಹಿಡಿದು ಸೂರಿಗೆ ನೀರು ನಿರೋಧಕ ಪದರದ ಹಾಕುವ ಕೊನೆ ಹಂತದಲ್ಲು ನಮ್ಮ ಲೆಕ್ಕಾಚಾರ ತಪ್ಪಾಗಿ ಇಟ್ಟಿಗೆ – ಬ್ಲಾಕ್‌ ಕಡಿಮೆಯಾಗಿ ಕೆಲಸ ನಿಲ್ಲುವ ಹಂತವನ್ನು ತಲುಪಬಹುದು!  ದೊಡ್ಡ ನಿವೇಶನ ಇದ್ದಾಗ ಒಮ್ಮೊಮ್ಮೆ ಇಡೀ ಮನೆಗೆ ಬೇಕಾಗುವಷ್ಟು ವಸ್ತುಗಳನ್ನು ಒಮ್ಮೆಲೇ ತಂದು ಸುರಿದುಕೊಳ್ಳಬಹುದು. ಆದರೆ ಸಣ್ಣ ನಿವೇಶನಗಳಲ್ಲಿ, ಅದರಲ್ಲೂ ನಗರ ಪ್ರದೇಶಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಹೆಚ್ಚು ವಸ್ತುಗಳು ಗುಡ್ಡೆ ಬಿದ್ದಷ್ಟೂ ಅವುಗಳ ನಿರ್ವಹಣೆ ಕಷ್ಟಕರ. 

ದಿಢೀರ್‌ ಇಟ್ಟಿಗೆ
ಮಾರುಕಟ್ಟೆಯಲ್ಲಿ ಇಟ್ಟಿಗೆ ಮಾಡುವ ಅಚ್ಚುಗಳು ಸಿಗುತ್ತವೆ. ಇವನ್ನು ಸಾಮಾನ್ಯವಾಗಿ ವೇಸ್ಟ್‌ ಟೀಕ್‌ ಮರದಲ್ಲಿ ಮಾಡುವುದರಿಂದ ಹೆಚ್ಚು ದುಬಾರಿಯಲ್ಲದಿದ್ದರೂ ಮಳೆ ಬಿಸಿಲಿಗೆ ತನ್ನ ಆಕಾರವನ್ನು ಕಳೆದುಕೊಳ್ಳುವುದಿಲ್ಲ. ಅಚ್ಚುಗಳು ಸುಲಭದಲ್ಲಿ ಸಿಗದಿದ್ದರೆ, ಇಟ್ಟಿಗೆ ಅಳತೆಯ ಒಂದೆರಡು ಅಚ್ಚುಗಳನ್ನು ಮನೆಯಲ್ಲಿ ಕೆಲಸಮಾಡುತ್ತಿರುವ ಮರಗೆಲಸದವರಿಗೆ ಹೇಳಿದರೂ ನೀರು ನಿರೋಧಕ ಗುಣ ಹೊಂದಿರುವ ಪ್ಲೆ„ವುಡ್‌ ನಿಂದ ತಯಾರು ಮಾಡಿಕೊಡುತ್ತಾರೆ. ಮರದ ಕೆಲಸ ಮಾಡುವಾಗ ಅನಿವಾರ್ಯವಾಗಿ ಒಂದಷ್ಟು ವೇಸ್ಟ್‌ ತುಂಡುಗಳು ಸಿಗುತ್ತವೆ, ಅಚ್ಚು ಮಾಡಲು ಬಡಗಿಗಳಿಗೆ ಇದೇ ಸಾಕಾಗುತ್ತದೆ. ಸಿಮೆಂಟ್‌ ಹಾಗೂ ಮರಳನ್ನು ಒಂದಕ್ಕೆ ಆರರಂತೆ ಅಂದರೆ ಒಂದು ಪಾಲು ಸಿಮೆಂಟ್‌ ಹಾಗೂ ಆರುಪಾಲು ಮರಳನ್ನು ಹಾಕಿ ಮಿಶ್ರಣ ಮಾಡಿದ ಗಾರೆಯನ್ನು ಅಚ್ಚಿಗೆ ತುಂಬಿ, ತುಂಡು ಮಟ್ಟಗೋಲಿನಿಂದ ಒತ್ತಿ, ಮಟ್ಟಮಾಡಿ ತೆಗೆದರೆ ಸುಂದರವಾದ ಇಟ್ಟಿಗೆ ಹೊರಬರುತ್ತದೆ! 

ಈ ಮಿಶ್ರಣ ಸ್ವಲ್ಪ ಉದುರುಉದುರಾಗಿದ್ದರೆ ಒಳಿತು. ಅಚ್ಚಿಗೆ ಹಾಕಿ ಮಟ್ಟಗೋಲಿನಿಂದ ಒತ್ತಿದರೆ, ಮಟ್ಟ ಆಗುವುದರ ಜೊತೆಗೆ ಅದರಲ್ಲಿ ಅಡಕವಾಗಿರುವ ನೀರು ಮೇಲಕ್ಕೇರಿ ಗಟ್ಟಿಮುಟ್ಟಾದ ಇಟ್ಟಿಗೆ ತಯಾರಾಗುತ್ತದೆ. ನೀರು ಹೆಚ್ಚಾದರೆ ಸುಲಭದಲ್ಲಿ ತುಂಬಲು ಸಾಧ್ಯವಾದರೂ ಅಚ್ಚು ತೆಗೆಯುವಾಗ ಇಟ್ಟಿಗೆ ತನ್ನ ಆಕಾರವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವೊಮ್ಮೆ ಮರದ ಅಚ್ಚಿಗೆ ಸಿಮೆಂಟ್‌ ಅಂಟಿಕೊಂಡು ಇಟ್ಟಿಗೆ ಸಪೂರಾಗಿ ಬಾರದಿರಬಹುದು. ಅಂಥ ಸಮಯದಲ್ಲಿ ಒಂದಷ್ಟು ಎಣ್ಣೆಯನ್ನು ಅಚ್ಚಿಗೆ ಲೇಪಿಸಿ ಮೂಲೆಗಳನ್ನು ಸ್ವತ್ಛಗೊಳಿಸಿದರೆ, ನುಣುಪಾದ ಮೇಲ್‌ಮೈಯ ಇಟ್ಟಿಗೆ ತಯಾರಾಗುತ್ತದೆ!  ಎಣ್ಣೆ ಲಭ್ಯವಿಲ್ಲದಿದ್ದರೆ, ನುಣ್ಣನೆಯ ಮರಳನ್ನು ಲೇಪಿಸಿದರೂ, ಸಿಮೆಂಟ್‌ ಅಷ್ಟೊಂದು ಸುಲಭದಲ್ಲಿ ಅಚ್ಚಿಗೆ ಅಂಟುವುದಿಲ್ಲ.  ಅಚ್ಚಿನಲ್ಲಿ ದಿಢೀರ್‌ ತಯಾರಾದ ಇಟ್ಟಿಗೆಗಳು ಮಾರನೇ ದಿನ ಸಾಕಷ್ಟು ಗಟ್ಟಿಗೊಳ್ಳುವುದರಿಂದ, ಉಪಯೋಗಿಸಬಹುದು. ಈ ದಿಢೀರ್‌ ಇಟ್ಟಿಗೆಗಳನ್ನು ಎಲ್ಲ ಸಿಮೆಂಟ್‌ ಕೆಲಸಗಳಲ್ಲಿ ಮಾಡುವಂತೆ ನಂತರ ಹತ್ತು ಹದಿನೈದು ದಿನ ಕ್ಯೂರಿಂಗ್‌ ಮಾಡುವುದು ಅನಿವಾರ್ಯ. 

ದಿಢೀರ್‌ ಕಾಂಕ್ರಿಟ್‌ ಬ್ಲಾಕ್‌
ನಿಮ್ಮ ಮನೆಗೆ ಉಪಯೋಗಿಸುತ್ತಿರುವ ಆರು ಇಂಚಿನ ಇಲ್ಲವೆ ಎಂಟು ಇಂಚಿನ ಬ್ಲಾಕ್‌ ಅನ್ನೂ ಕೂಡ ಅದೇ ಅಳತೆಯ ಅಚ್ಚುಗಳಿಂದ ತಯಾರಿಸಿಕೊಳ್ಳಬಹುದು. ನಿಮಗೆ ಹೀಗೆ ಮಾಡುವುದರಿಂದ ಹೆಚ್ಚು ಸಿಮೆಂಟ್‌ ಗಾರೆ ಖರ್ಚಾಗುತ್ತದೆ ಎಂದೆನಿಸಿದರೆ, ಬ್ಲಾಕ್‌ ವರಸೆ ಇಡುವಾಗ ಗಾರೆಯವರು ಅನಿವಾರ್ಯವಾಗಿ ಅವನ್ನು ಅಳತೆಗೆ ತಕ್ಕಂತೆ ಒಡೆಯ ಬೇಕಾಗುತ್ತದೆ. ಹೀಗೆ ಒಡೆದಾಗ ಒಂದಷ್ಟು ರಾಶಿ ತುಂಡುಗಳು ತ್ಯಾಜ್ಯವಾಗಿ ಬಿದ್ದಿರುತ್ತದೆ. ಈ ತುಂಡುಗಳನ್ನೂ ಕೂಡ ಸಿಮೆಂಟ್‌ ಗಾರೆ ಜೊತೆಗೆ ಬೆರೆಸಿ, ಕಾಂಕ್ರಿಟ್‌ ಮಾದರಿಯಲ್ಲಿ ಅಚ್ಚನ್ನು ತುಂಬಿದರೆ, ಸದೃಢವಾದ ಬ್ಲಾಕ್‌ ದಿಢೀರನೆ ತಯಾರಾಗುತ್ತದೆ. ಇದೇ ರೀತಿಯಲ್ಲಿ ನಾವು ಅರ್ಧ,  ಮುಕ್ಕಾಲು ಬ್ಲಾಕ್‌ ಅಚ್ಚುಗಳನ್ನು ತಯಾರಿಸಿಟ್ಟುಕೊಂಡರೆ, ಗಾರೆಯವರು ಬ್ಲಾಕ್‌ಗಳನ್ನು ಅಳತೆಗೆ ತಕ್ಕಂತೆ ಒಡೆಯುವಾಗ ಆಗುವ ವೇಸ್ಟ್‌ ಅನ್ನು ತಡೆಯಬಹುದು! ಅಚ್ಚು ಮಾಡುವಾಗ ಮಟ್ಟಸವಾದ ನೆಲವಿರುವುದು ಅನಿವಾರ್ಯ. ಮಣ್ಣಿನ ಮೇಲೂ ಮಟ್ಟಸವಾಗಿ ತಟ್ಟಿಕೊಂಡು, ಹಳೆಯ ವೃತ್ತಪತ್ರಿಕೆ ಇಲ್ಲವೇ ಸಿಮೆಂಟ್‌ ಖಾಲಿ ಚೀಲದ ಮೇಲೆ ಅಚ್ಚು ಹಾಕಿದರೆ, ಬ್ಲಾಕ್‌ಗಳು ಸಪೂರಾಗಿ ಬರುವುದರ ಜೊತೆಗೆ ಸೆಟ್‌ ಆದಮೇಲೆ ಮಾರನೇ ದಿನ ಸುಲಭದಲ್ಲಿ ತೆಗೆಯಲೂ ಕೂಡ ಅನುಕೂಲವಾಗುತ್ತದೆ. 

Advertisement

ಸೈಜುಗಲ್ಲು
ಸಾಮಾನ್ಯವಾಗಿ ಪಾಯದ ಕಲ್ಲುಗಳು ಎಂಟು ಇಂಚು ಎತ್ತರವೂ, ಒಂಭತ್ತು ಇಂಚಿಗೆ ಹತ್ತು ಇಂಚು ಅಗಲವೂ ಇರುತ್ತದೆ. ಪಾಯ ಹಾಕುವಾಗ ರಾಶಿ ಬೌಲ್ಡರ್‌ಗಳು ಇದ್ದೇ ಇರುತ್ತವೆ. ಆದರೆ ನಮಗೆ ಹತ್ತಾರು ಸೈಜು ಕಲ್ಲುಗಳು ಬೇಕೆಂದರೆ ತರಿಸುವುದು ಕಷ್ಟ. ನಾವು ಒಂದೆರಡು ಕಲ್ಲಿನ ಗಾತ್ರದ ಅಚ್ಚು ತಯಾರು ಮಾಡಿಟ್ಟುಕೊಂಡರೆ, ಒಂದಕ್ಕೆ ಆರರಂತೆ ಸಿಮೆಂಟ್‌ ಗಾರೆ ತಯಾರುಮಾಡಿಕೊಂಡು, ಅಚ್ಚಿನಲ್ಲಿ ಒಂದೆರಡು ವೇಸ್ಟ್‌ ಕಲ್ಲು ತುಂಡುಗಳೊಂದಿಗೆ ಹಾಕಿ ತುಂಬಿದರೆ, ಸಿಮೆಂಟ್‌ ಹೆಚ್ಚು ಖರ್ಚಾಗದೆ, ನಮಗೆ ಚಚ್ಚೌಕದ ಸೈಜು ಕಲ್ಲು ನಿರಾಯಾಸವಾಗಿ ಸಿಗುತ್ತದೆ.  

ಮನೆ ಕಟ್ಟುವಾಗ ಒಂದಷ್ಟು ಸಿಮೆಂಟ್‌ ಗಾರೆ ದಿನವೂ ಉಳಿಯುವುದು ಇದ್ದದ್ದೇ, ಅದನ್ನು ಸಾಮಾನ್ಯವಾಗಿ ಮರುದಿನ ಉಪಯೋಗಿಸಲು ನೋಡಿದರೂ ಅದು ಅದಾಗಲೇ ಸಾಕಷ್ಟು “ಖಾರ’ ಕಳೆದುಕೊಂಡು ಗಟ್ಟಿಗೊಂಡಿರುವುದರಿಂದ, ಅದನ್ನು ಹೊಸ ಮರಳಿನೊಂದಿಗೆ ಬೆರೆಸುವುದೂ ಕಷ್ಟವಾಗಬಹುದು. ಆದುದರಿಂದ ಸಂಜೆ ಹೊತ್ತು ಗಾರೆಕೆಲಸದ ನಂತರ ಅದು ಪಾಯ ಇರಲಿ ಗೋಡೆ ಇರಲಿ, ಉಳಿಯುವ ಸಿಮೆಂಟ್‌ ಮಿಶ್ರಣವನ್ನು ಅಚ್ಚಿನಲ್ಲಿ ಹಾಕಿದರೆ ದಿನಕ್ಕೆ ಹತ್ತಾರು ಇಟ್ಟಿಗೆಗಳನ್ನು ಮಾಡಿಕೊಳ್ಳಬಹುದು. ಹೀಗೆ ಮಾಡುವುದರಿಂದ ಸಿಮೆಂಟ್‌ ವ್ಯರ್ಥವಾಗುವುದನ್ನು ತಡೆಯಬಹುದು. ನೂರಾರು ಇಟ್ಟಿಗೆಗಳು ಪುಕ್ಕಟೆಯಾಗಿ ಸಂಪಾದಿಸಬಹುದು. 

ಹೆಚ್ಚಿನ ಮಾತಿಗೆ ಫೋನ್‌ 98441 32826   

 ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next