Advertisement

ಜನರಿಗೆ ನೈಜ ಧರ್ಮ ತಿಳಿಸುವ ಕೆಲಸ ಮಾಡುತ್ತಿದ್ದೇವೆ 

08:01 AM Jan 17, 2018 | Team Udayavani |

ಮೈಸೂರು: ಸಮಾಜ ಒಡೆಯುವ ಕಾರ್ಯ ಮಾಡಲ್ಲ, ಬದಲಿಗೆ ಜನರಿಗೆ ನೈಜ ಧರ್ಮ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಸಾಣೇಹಳ್ಳಿ ಶ್ರೀತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿರುಗೇಟು ನೀಡಿದ್ದಾರೆ. ಸುತ್ತೂರು ಕ್ಷೇತ್ರದಲ್ಲಿ ಮಂಗಳವಾರ ನಡೆದ ಕೃಷಿ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರು
ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು, ಕೆಲ ಸ್ವಾಮೀಜಿಗಳು ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದು ಸರಿಯಲ್ಲ. ಗುರುಗಳು ಯಾವತ್ತೂ ಸಮಾಜ ಒಡೆಯುವ ಕೆಲಸ ಮಾಡಲ್ಲ. ಜನರಿಗೆ ನೈಜ ಧರ್ಮ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

Advertisement

ವೈದಿಕ ಪರಂಪರೆಯಲ್ಲಿ ಹಾಲು-ತುಪ್ಪ, ದವಸ-ಧಾನ್ಯ, ಬಟ್ಟೆಗಳನ್ನು ಸುಟ್ಟು ಹಾಕಲಾಗುತ್ತದೆ. ವೀರಶೈವರು ಇದನ್ನು
ಅನುಸರಿಸುತ್ತಿದ್ದಾರೆ. ಬಸವಣ್ಣ ಇದನ್ನು ವಿರೋಧಿಸಿ ಹೊರ ಬಂದು ಹೊಸ ಧರ್ಮ ಹುಟ್ಟು ಹಾಕಿದರು. ಹೀಗಾಗಿ, ಲಿಂಗಾಯತ ಧರ್ಮ ಹುಟ್ಟಿಕೊಂಡಿತು. ಈಗ ಜನರು ಮರೆತಿರುವ ಧರ್ಮವನ್ನು ಅರಿಯುವ ಕೆಲಸವಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ದೊರೆತರೆ, ಲಿಂಗಾಯತ ಸಮಾಜದ ಯುವಜನರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ
ದೊರೆತು ಅನುಕೂಲವಾಗಲಿದೆ. ಸುತ್ತೂರು ಮಠಾಧೀಶರು ಸ್ಥಾಪಿಸಿರುವ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಹ 
ಲಿಂಗಾಯತ ಧರ್ಮವನ್ನು ಪ್ರಸಾರ ಮಾಡುತ್ತಿದೆ. ಹೀಗಾಗಿ, ಸಮಾಜದವರು ಲಿಂಗಾಯತ ಧರ್ಮದ ಬಗ್ಗೆ ಒಲವು
ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ಸುತ್ತೂರಿನಲ್ಲಿ ಸೋಮವಾರ  ಮಾತನಾಡಿದ್ದ ರಂಭಾಪುರಿ ಶ್ರೀಗಳು, ಕೆಲ ರಾಜಕಾರಣಿಗಳು ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ. ವೀರಶೈವ ಧರ್ಮದಲ್ಲಿ ಹೊರಗಿನವರಿಗಿಂತ ಒಳಗಿನ ವೈರಿಗಳೇ ಹೆಚ್ಚಾಗಿದ್ದಾರೆ. ಧರ್ಮದಲ್ಲಿ ಶ್ರದ್ಧೆ ಇಲ್ಲದ ಬೆರಳೆಣಿಕೆಯ ಮಠಾಧೀಶರು ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದಿದ್ದರು.

ಹೊಸಮಠ ಸ್ವಾಮೀಜಿ ಭೇಟಿ ಮಾಡಿದ ಕುಲಕರ್ಣಿ 
ಮೈಸೂರು: ಸಚಿವ ವಿನಯ್‌ ಕುಲಕರ್ಣಿ ಅವರು ಮಂಗಳವಾರ ಮೈಸೂರಿನ ಹೊಸಮಠಕ್ಕೆ ಭೇಟಿ ನೀಡಿ ಚಿದಾನಂದ ಸ್ವಾಮೀಜಿಯವರ ಜೊತೆ ಸುಮಾರು ಒಂದು ಗಂಟೆ ರಹಸ್ಯ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಬಂದಿದ್ದರಿಂದ ಸ್ವಾಮೀಜಿಯ ವರನ್ನು ಭೇಟಿ ಮಾಡಿದೆ. ಲಿಂಗಾಯತ ಧರ್ಮ ಹೋರಾಟ ಕುರಿತು ಸುತ್ತೂರು ಶ್ರೀಗಳಿಗೆ ಹಿಂದೆಯೇ ತಿಳಿಸಿದ್ದೇವೆ. ಅವರು ತಟಸ್ಥರಾಗಿ ಉಳಿದಿದ್ದಾರೆ. ಮುಂಬರುವ ದಿನಗಳಲ್ಲಿ ಸುತ್ತೂರು ಶ್ರೀಗಳನ್ನೂ ನಮ್ಮ ಹೋರಾಟಕ್ಕೆ ಆಹ್ವಾನಿಸುತ್ತೇವೆ ಎಂದರು. ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದ ಹೊಸಮಠದ ಚಿದಾನಂದ ಸ್ವಾಮೀಜಿ, ಮೈಸೂರು ಭಾಗದಲ್ಲೂ ಶೀಘ್ರ ಹೋರಾಟ ಆರಂಭವಾಗಲಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next