ಕೆ.ಆರ್.ನಗರ: ತಾಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ಸರ್ಕಾರದ್ದು ಎಂದು ಹೇಳುವ ಕಾಂಗ್ರೆಸ್ ಅಭ್ಯರ್ಥಿ, ಅದರಲ್ಲಿ ಕ್ಷೇತ್ರದ ಶಾಸಕರ ಶ್ರಮವಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಸಿದರು.
ಕ್ಷೇತ್ರದ ಚೀರ್ನಹಳ್ಳಿ ಬಸವೇಶ್ವರ ದೇವಾಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಅವರು, ಸರ್ಕಾರ ಎಲ್ಲಾ ಕ್ಷೇತ್ರಗಳಿಗೂ ನೀಡುವಂತೆ ತಮ್ಮ ಕ್ಷೇತ್ರಕ್ಕೂ ಅನುದಾನ ನೀಡಿದೆಯೇ ಹೊರತು ಪಿರಿಯಾಪಟ್ಟಣ ಮತ್ತು ಹುಣುಸೂರು ಕ್ಷೇತ್ರಕ್ಕೆ ನೀಡಿದಷ್ಟು ವಿಶೇಷ ಅನುದಾನ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಐದು ವರ್ಷಗಳೂ ಅಧಿಕಾರಿಗಳ ವರ್ಗಾವಣೆಯಲ್ಲೇ ಕಾಲ ಕಳೆದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮುಖಂಡರು ಈ ಜಿಲ್ಲೆಯ ಮುಖ್ಯಮಂತ್ರಿ ಮತ್ತು ನಿಮ್ಮ ಸಮುದಾಯದವರಾಗಿದ್ದರು. ಶ್ರೀರಾಮ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಏಕೆ ಪ್ರಯತ್ನಿಸಲಿಲ್ಲ.
ಕಾರ್ಖಾನೆ ಪ್ರಾರಂಭಿಸಿದರೆ ಹಣ ಸಿಗುವುದಿಲ್ಲಾ ಎಂಬ ಕಾರಣಕ್ಕೆ. ಸುಮ್ಮನೆ ಮತ ಕೇಳಲು ಹೋದರೆ ಮತದಾರರು ಪ್ರಶ್ನೆ ಮಾಡುತ್ತಾರೆ ಎಂಬ ಉದ್ದೇಶದಿಂದ ಎರಡು ಮೂರು ಮುಖಂಡರಿಗೆ ಹಣ ಕೊಟ್ಟು ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ಕ್ಷೇತ್ರದ ಮತದಾರರಿಗೆ ಗೊತ್ತಿದೆ ಎಂದು ತಿಳಿಸಿದರು.
ತಾಲೂಕಿನ ಮತದಾರರ ಬಯಕೆಯಂತೆ ಮತ್ತೂಂದು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೆ ಬಾರಿ ಶಾಸಕನಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಜನಸೇವೆ, ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ. ಅದಕ್ಕೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ದ್ವಾರಕೀಶ್, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕುರುಬ ಸಮಾಜದ ಮುಖಂಡ ಚೀರ್ನಹಳ್ಳಿ ಶ್ರೀನಿವಾಸ್ ಹಾಗೂ ಸಂಪತ್, ಹೆಬ್ಟಾಳ್ ಸುಜಯ್‌ಕುಮಾರ್, ಚಿದಂಬರ್ ನಾಯಕ, ಮಂಜುನಾಥ, ವೇಣು, ನಾಗರಾಜ್ ಇನ್ನಿತರರು ಹಾಜರಿದ್ದರು.