Advertisement

ನಾವು ನಿಮ್ಮೊಡನಿದ್ದೇವೆ!

10:16 PM Jun 22, 2019 | Team Udayavani |

ತೀವ್ರ ತರಹದ ಮಾನಸಿಕ ಅಸ್ವಾಸ್ಥ éದಿಂದ ಗುಣಮುಖವಾಗುತ್ತಿರುವ ರೋಗಿಗಳಿಗೆ ಕೌಟುಂಬಿಕ ನೆರವಿನ ಪಾತ್ರ

Advertisement

ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಮನೆಯ ಸದಸ್ಯನ ಚಿಕಿತ್ಸೆಯಲ್ಲಿ ಮತ್ತು ಅವರು ಗುಣಮುಖರಾಗಿ ಸೌಖ್ಯದಿಂದಿರುವಲ್ಲಿ ಕುಟುಂಬಗಳು ನಿರ್ಣಾಯಕ ಪಾತ್ರವನ್ನು ವಹಿಸಬಲ್ಲವು. ಸಿಜೊಫ್ರೀನಿಯಾ ಅಥವಾ ಬೈಪೋಲಾರ್‌ ಅಫೆಕ್ಟಿವ್‌ ಡಿಸಾರ್ಡರ್‌ನಂತಹ ತೀವ್ರ ಸ್ವರೂಪದ ಮಾನಸಿಕ ಅಸ್ವಾಸ್ಥ್ಯ ಪೀಡಿತರಾಗಿರುವವರು ಒಂದೋ ತಮ್ಮ ಕುಟುಂಬದ (ಹೆತ್ತವರು, ಜೀವನ ಸಂಗಾತಿ, ಸಹೋದರ – ಸಹೋದರಿಯರು ಮತ್ತು ಮಕ್ಕಳು) ಜತೆಯಲ್ಲಿಯೇ ಇರುತ್ತಾರೆ ಅಥವಾ ಕುಟುಂಬದ ಜತೆಗೆ ನಿರಂತರ ಸಂಬಂಧ- ಸಂಪರ್ಕವನ್ನು ಹೊಂದಿರುತ್ತಾರೆ. ಮಾನಸಿಕ ಅಸ್ವಾಸ್ಥ್ಯದ ಜತೆಗೆ ಉಂಟಾಗುವ ವರ್ತನಾತ್ಮಕ ಬದಲಾವಣೆಗಳನ್ನು ವ್ಯಕ್ತಿಯಲ್ಲಿ ಮೊತ್ತಮೊದಲು ಗುರುತಿಸುವವರು ಕುಟುಂಬ ಸದಸ್ಯರಾಗಿರುತ್ತಾರೆ. ಅವರೇ ಮಾನಸಿಕ ಆರೋಗ್ಯ ಸೇವೆಗಳ ಸಹಾಯ ಪಡೆಯಲು ವ್ಯಕ್ತಿಗೆ ನೆರವಾಗುತ್ತಾರೆ. ಅಸ್ವಾಸ್ಥ್ಯದ ಮರುಕಳಿಕೆಯ ಲಕ್ಷಣಗಳನ್ನು ಕೂಡ ಕುಟುಂಬ ಸದಸ್ಯರೇ ಗುರುತಿಸುತ್ತಾರೆಯಲ್ಲದೆ ಶೀಘ್ರವಾಗಿ ನೆರವು ಪಡೆಯಲು ಹುರಿದುಂಬಿಸುತ್ತಾರೆ.

ಚಿಕಿತ್ಸಾ ಪ್ರಕ್ರಿಯೆಯಲ್ಲಿ ಕುಟುಂಬ ಸದಸ್ಯರು ಒಳಗೊಂಡಾಗ ರೋಗಿಗಳ ಪಾಲಿಗೆ ಅದರ ಫ‌ಲಿತಾಂಶಗಳು ಗಮನಾರ್ಹವಾಗಿ ಉತ್ತಮಗೊಳ್ಳುತ್ತವೆ ಎಂದು ಅಧ್ಯಯನಗಳು ಹೇಳಿವೆ. ಅಲ್ಲದೆ, ಕುಟುಂಬಗಳ ಭಾಗೀದಾರಿಕೆಯಿಂದ ಅಸ್ವಾಸ್ಥ್ಯ ಮರುಕಳಿಕೆಯ ಪ್ರಕರಣಗಳು ಕಡಿಮೆಯಾಗುತ್ತವೆ; ಕುಟುಂಬದ ಒಟ್ಟಾರೆ ಕಲ್ಯಾಣವುಂಟಾಗುತ್ತದೆ ಎಂಬುದಾಗಿ ಅಧ್ಯಯನಗಳು ಹೇಳಿವೆ.

ಕುಟುಂಬಗಳ ಒಳಗೊಳ್ಳುವಿಕೆ ಏಕೆ ಮುಖ್ಯ?
-ಕುಟುಂಬದ ಹೊಣೆಗಾರಿಕೆ‌
ತಮ್ಮ ರೋಗಬಾಧಿತ ಸದಸ್ಯನನ್ನು ಆದಷ್ಟು ಬೇಗನೆ ಚಿಕಿತ್ಸೆಗೆ ಒಳಪಡಿಸುವುದು ಅಥವಾ ಅನಾರೋಗ್ಯ ಪೀಡಿತ ಸದಸ್ಯ ಆದಷ್ಟು ಶೀಘ್ರ ಮನೋವೈದ್ಯರನ್ನು ಕಾಣುವಂತೆ ಪ್ರೋತ್ಸಾಹಿಸುವುದು ಅಥವಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಕುಟುಂಬಗಳ ನಿರೀಕ್ಷಿತ ಹೊಣೆಗಾರಿಕೆಯಾಗಿದೆ.
-ವಿಶ್ಲೇಷಣೆಯ ಉದ್ದೇಶ ಅಥವಾ ರೋಗದ ಮಾಹಿತಿಗಾಗಿ
ರೋಗಬಾಧಿತ ವ್ಯಕ್ತಿಯ ನಡವಳಿಕೆ ಮತ್ತು ಲಕ್ಷಣಗಳ ಬಗ್ಗೆ ಕುಟುಂಬ ಸದಸ್ಯರು ಒದಗಿಸುವ ಮಾಹಿತಿಯು ರೋಗದ ವಿಶ್ಲೇಷಣೆ ಮತ್ತು ರೋಗ ಪತ್ತೆಯ ವಿಚಾರದಲ್ಲಿ ಬಹಳ ನಿರ್ಣಾಯಕವಾಗಿದೆ. ರೋಗಿಯ ಬಗ್ಗೆ ಖಚಿತವಾದ ಮಾಹಿತಿಯನ್ನು ಆತನ ಆರೈಕೆಯನ್ನು ಸತತವಾಗಿ ಮಾಡುತ್ತಿರುವ ವ್ಯಕ್ತಿಗಳು ಮಾತ್ರ ನೀಡಬಹುದಾಗಿದೆ.
ಕುಟುಂಬ ಸದಸ್ಯರೇ ರೋಗಿಯ ಮುಖ್ಯ ಆರೈಕೆದಾರರು ಎಂಬುದಾಗಿ ಭಾವಿಸಲಾಗುತ್ತದೆ:

ಭಾರತದಂತಹ ದೇಶದಲ್ಲಿ ಬಹುತೇಕ ರೋಗಿಗಳು ಕುಟುಂಬದ ಜತೆಗೆ ಮನೆಯಲ್ಲಿ ವಾಸಿಸುತ್ತಾರೆ. ತೀವ್ರ ತರಹದ ಮಾನಸಿಕ ಅಸ್ವಾಸ್ಥ್ಯಕ್ಕೆ ತುತ್ತಾಗಿ ಗುಣ ಹೊಂದುತ್ತಿರುವ ರೋಗಿಗಳ ಪುನರ್‌ ಸಾಮಾಜೀಕರಣ, ಪರ್ಯಾಯ ಮತ್ತು ಸಾಮಾಜಿಕ ಕೌಶಲಗಳ ತರಬೇತಿಯಲ್ಲಿ ಆರೈಕೆ ಮಾಡುವವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ.

Advertisement

-ಕುಟುಂಬ ವರ್ತನೆ ಮತ್ತು ಮರುಕಳಿಕೆ
ಬಹುತೇಕ ಪ್ರಕರಣಗಳಲ್ಲಿ, ರೋಗಿಗಳತ್ತ ಆರೈಕೆದಾರರ ಋಣಾತ್ಮಕ ವರ್ತನೆ ಮತ್ತು ನಡವಳಿಕೆ ಅಥವಾ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇರುವುದು ರೋಗ ಮರುಕಳಿಸುವಂತೆ ಮಾಡಬಹುದು. ಕುಟುಂಬವು ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರೆ ಮರುಕಳಿಕೆಯನ್ನು ತಡೆಯಬಹುದಾಗಿದೆ. ಕೆಲವೊಂದು ರೋಗಗಳಲ್ಲಿ ಕುಟುಂಬದ ಸದಸ್ಯರುಗಳು ಸಹ ಆಪ್ತಸಮಾಲೋಚಕರಾಗಿರುತ್ತಾರೆ.
-ಮನೆಯಲ್ಲಿ ರೋಗಿಯ ಮೇಲ್ವಿಚಾರಣೆ
ಚಿಕಿತ್ಸಾ ಪ್ರಕ್ರಿಯೆಯಲ್ಲಿ ಕುಟುಂಬ ಸದಸ್ಯರು ಒಳಗೊಳ್ಳಬೇಕು ಎಂಬುದಕ್ಕೆ ಇತರ ಕಾರಣಗಳೆಂದರೆ, ತನ್ನ ಸಂಬಂಧಿಯಾಗಿರುವ ರೋಗಿಯ ಗುಣಮುಖ ಪ್ರಕ್ರಿಯೆಯ ಪ್ರಗತಿಯ ಮೇಲೆ ನಿಗಾ ಇರಿಸಬಹುದು ಮತ್ತು ರೋಗ ಮರುಕಳಿಕೆಯ ಲಕ್ಷಣಗಳನ್ನು ಗಮನಿಸುತ್ತಿರಬಹುದು ಎಂಬುದಾಗಿದೆ.
1. ಮಾನಸಿಕ ಅಸ್ವಾಸ್ಥ್ಯದ ಬಗ್ಗೆ ಮತ್ತು ಲಭ್ಯವಿರುವ ಸೇವೆಗಳ ಕುರಿತು ತಿಳಿದುಕೊಳ್ಳುವುದು.
ಕುಟುಂಬಗಳು ಮಾನಸಿಕ ಆರೋಗ್ಯ ಶಿಕ್ಷಣದಿಂದ ಪ್ರಯೋಜನ ಪಡೆಯುವುದು ಸಾಧ್ಯ. ಇದರಿಂದ ಗೊಂದಲಕಾರಿಯಾದ ಮಾನಸಿಕ ಅಸ್ವಾಸ್ಥ್ಯದ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಮಾನಸಿಕ ಆರೋಗ್ಯದ ಶಿಕ್ಷಣದ ಮೂಲಕ ತಿಳಿದುಕೊಳ್ಳಬೇಕಾದ ವಿಚಾರಗಳೆಂದರೆ:
– ರೋಗಿಯ ಅಸ್ವಾಸ್ಥ್ಯದ ಗುಣಲಕ್ಷಣ/ ಚಿಹ್ನೆಗಳು
– ತನ್ನ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂಬುದನ್ನು ರೋಗಿ ಯಾಕೆ ತಿಳಿದುಕೊಳ್ಳಲಾರ ಎಂಬುದನ್ನು ಗಮನಿಸುವುದು
– ವ್ಯಕ್ತಿ ಸಹಾಯ ಪಡೆಯಲು ಯಾಕೆ ನಿರಾಕರಿಸುತ್ತಾನೆ (ಉದಾಹರಣೆಗೆ ವೈದ್ಯರಲ್ಲಿಗೆ ಹೋಗುವುದು) ಎಂಬುದನ್ನು ತಿಳಿಯುವುದು
– ಕೆಲವು ಔಷಧಗಳನ್ನು ಯಾಕೆ ಬಳಸುತ್ತಾರೆ ಮತ್ತು ಅವುಗಳ ಅಡ್ಡ ಪರಿಣಾಮಗಳ ಬಗ್ಗೆ ತಿಳಿಯುವುದು
– ಶಿಫಾರಸು ಮಾಡಲಾದ ಔಷಧಗಳನ್ನು ತೆಗೆದುಕೊಳ್ಳದೆ ಇರುವುದು ಅಥವಾ ಶಿಫಾರಸು ಮಾಡಲಾದ ಚಿಕಿತ್ಸೆಯನ್ನು ಅನುಸರಿಸದೆ ಇರುವುದಕ್ಕೆ ಕಾರಣಗಳು ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು.
– ರೋಗಿಗೆ ಅಗತ್ಯವಾಗಿರುವ ಸೇವೆಗಳೇನು, ಸಮುದಾಯದಲ್ಲಿ ಯಾವ ಯಾವ ಸೇವೆಗಳು ಲಭ್ಯವಿವೆ ಎಂಬುದನ್ನು ನಿರ್ಧರಿಸುವುದು ಹಾಗೂ ಈ ಸೇವೆಗಳನ್ನು ಪಡೆಯವುದಕ್ಕೆ ತಾವು ರೋಗಿಗೆ ಹೇಗೆ ನೆರವಾಗಬಹುದು ಎಂಬುದನ್ನು ನಿರ್ಧರಿಸುವುದು.

2. ಚಿಕಿತ್ಸಾ ಯೋಜನೆಯಲ್ಲಿ ರೋಗಿಯನ್ನು ಭಾಗಿಯನ್ನಾಗಿಸುವುದು
– ರೋಗಿಗಳು ಸಹಾಯ ಪಡೆಯುವುದಕ್ಕೆ ಪ್ರೋತ್ಸಾಹಕಾರಿಯಾದ ರೀತಿಯಲ್ಲಿ ಅವರ ಜತೆಗೆ ಸಂವಹನ ನಡೆಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು.
– ವ್ಯಕ್ತಿಯು ನೆರವನ್ನು ಪಡೆಯಲು ಸಮ್ಮತಿಸದೇ ಇರುವ ಸಂದರ್ಭದಲ್ಲಿ ಕುಟುಂಬವು ಯಾವ ಪರ್ಯಾಯ ಹೆಜ್ಜೆಯನ್ನು ತೆಗೆದುಕೊಳ್ಳಬಹುದು (ಕಾನೂನು ಪ್ರಕ್ರಿಯೆಗಳು) ಎಂಬುದನ್ನು ತಿಳಿಯುವುದು.

3. ಮರುಕಳಿಕೆಯ ಎಚ್ಚರಿಕೆಯ ಸೂಚನೆಗಳನ್ನು ಅಥವಾ ಲಕ್ಷಣಗಳನ್ನು ಗುರುತಿಸುವುದು
-ಸಂಭಾವ್ಯ ರೋಗ ಮರುಕಳಿಕೆಯ ಲಕ್ಷಣಗಳು ಅಥವಾ ಚಿಹ್ನೆಗಳನ್ನು ಗುರುತಿಸುವ ಬಗ್ಗೆ ತಮ್ಮ ರೋಗಿಗೆ ಹಿಮ್ಮಾಹಿತಿ ಒದಗಿಸಲು ಕಲಿಯುವುದು.
– ವ್ಯಕ್ತಿಯ ಮೇಲೆ ತೀವ್ರ ಒತ್ತಡ ಉಂಟು ಮಾಡುವ ಮತ್ತು ರೋಗ ಮರುಕಳಿಕೆಗೆ ಕಾರಣವಾಗಬಲ್ಲ ಸನ್ನಿವೇಶಗಳನ್ನು ಗುರುತಿಸುವುದು ಮತ್ತು ಅಂತಹ ಸನ್ನಿವೇಶಗಳು ಉಂಟಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.

4. ಔಷಧ ಸೇವೆಯನ್ನು ನಿರ್ವಹಿಸುವುದು
– ಔಷಧ ಸೇವನೆಯನ್ನು ಒಂದು ದೈನಂದಿನ ಚಟುವಟಿಕೆಯಾಗಿ ತೆಗೆದುಕೊಳ್ಳುವುದನ್ನು ರೂಢಿ ಮಾಡಿಕೊಳ್ಳಲು ತಮ್ಮ ರೋಗಿಗೆ ಸಹಾಯ ಮಾಡುವುದು.
– ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವುದಕ್ಕೆ ಪೂರಕವಾಗಿರುವ ಮಾಹಿತಿಯನ್ನು ಪಡೆಯುವುದು.
– ಅಡ್ಡ ಪರಿಣಾಮಗಳನ್ನು ನಿಭಾಯಿಸುವ ಮಾರ್ಗೋಪಾಯಗಳನ್ನು ತಿಳಿದುಕೊಳ್ಳುವುದು.
– ಅನುಸರಣಾ ವೈದ್ಯರ ಭೇಟಿಗೆ ತೆರಳುವುದಕ್ಕೆ ರೋಗಿಗೆ ಸಹಾಯ ಮಾಡುವುದು.

-ಪ್ರವೀಣ್‌ ಎ.,
ಮನೋ-ಸಾಮಾಜಿಕ ಸಮಾಲೋಚಕರು
ಮನಶಾಸ್ತ್ರ ವಿಭಾಗ ಮತ್ತು ಹೊಂಬೆಳಕು ಮಾನಸಿಕ ಪುನರ್ವಸತಿ ಕೇಂದ್ರ
ಕೆ.ಎಂ.ಸಿ., ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next