ಬೆಂಗಳೂರು: ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವ ಸ್ವಾಮೀಜಿಗಳ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿಯಾಗಿ ತಾವೆಲ್ಲಾ ಅವರೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸಕ್ಕೆ ಶನಿವಾರ ಮಧ್ಯಾಹ್ನ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ನಿಯೋಗ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯ ದರ್ಶಿ ಎಂ.ಪಿ.ರೇಣುಕಾಚಾರ್ಯ ಉಪಸ್ಥಿತರಿದ್ದರು.
ನಂತರ ಪ್ರತಿಕ್ರಿಯಿಸಿದ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರದ ವೀರಶೈವ- ಲಿಂಗಾಯತ ಪಂಚಮಸಾಲಿ ಮಠದ ಕಾರ್ಯಕ್ರಮದಲ್ಲಿ ಒಂದು ಅಚಾತುರ್ಯ ನಡೆದಿದೆ. “ಪಂಚಮಸಾಲಿಗಳು ಕೈಬಿಡಲಿದ್ದಾರೆ’ ಎಂಬ ಶಬ್ದ ಸಮುದಾಯದಲ್ಲಿ ನಿರಾಸೆ ಉಂಟು ಮಾಡಿದೆ. ಯಾವುದೇ ಒಂದು ಸಮುದಾಯದ ಬೆಂಬಲದಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ. ಎಲ್ಲ ಜನಾಂಗದವರು ಬೆಂಬಲ ನೀಡಿದರೆ ಸರ್ಕಾರ ರಚನೆಯಾಗುತ್ತದೆ. ಅದರಂತೆ ನಮ್ಮ ಸಮುದಾಯ ಆಶೀರ್ವಾದ ಮಾಡುತ್ತದೆ. ಸಮುದಾಯ ಕೈಬಿಡುತ್ತದೆ ಎಂದು ಹೇಳುವುದು ಸರಿಯಲ್ಲ. ಬಹುಮತದ ಸರ್ಕಾರಕ್ಕೆ ಸಮುದಾಯ ಆಶೀರ್ವಾದ ಮಾಡುತ್ತದೆ ಎಂದು ಹೇಳಿದರು.
ಮಠಾಧಿಪತಿಗಳೆಲ್ಲಾ ಸೇರಿ ಚರ್ಚೆ ನಡೆಸಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದೇವೆ. ನಾವು ಯಾವುದೇ ಅನುದಾನ, ಸಚಿವ ಸ್ಥಾನಕ್ಕಾಗಿ ಬಂದಿಲ್ಲ. ಅವರೊಂದಿಗೆ ನಾವಿದ್ದೇವೆ ಎಂದು ಹೇಳಿದ್ದೇವೆ. ಧರ್ಮಗುರುಗಳ ಮೇಲೆ ಮುಖ್ಯಮಂತ್ರಿಗಳೂ ಇಟ್ಟಿರುವ ನಂಬಿಕೆಗೆ ಎಂದೂ ಧಕ್ಕೆಯಾಗಬಾರದು. ಅದೇ ಗೌರವ ಮುಂದುವರಿಯಲಿ. ನಾವೆಲ್ಲಾ ನಿಮ್ಮೊಂದಿಗಿದ್ದೇವೆ ಎಂಬ ನೈತಿಕ ಬಲ ನೀಡಲು ಬಂದಿದ್ದೇವೆ ಎಂದರು.
ಪಂಚಮಸಾಲಿ ಸಮುದಾಯದ 15 ಬಿಜೆಪಿ ಶಾಸಕರಿದ್ದು, ಎಲ್ಲರೂ ಸಚಿವಕಾಂಕ್ಷಿಗಳಾಗಿದ್ದಾರೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಗುರುಗಳಾದವರು ಈ ಸಮಾಜಕ್ಕೆ ಕೊಡಿ ಎನ್ನಬಹುದು. ಇತ್ತೀಚೆಗೆ ಆದ ಘಟನೆಯಿಂದ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಅವರ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಶೀಘ್ರವೇ ಮುಖ್ಯಮಂತ್ರಿಗಳು ಕರೆಸಿ ಗೊಂದಲ ಪರಿಹರಿಸುವುದಾಗಿ ಹೇಳಿದ್ದಾರೆ ಎಂದರು.
ಹರ ಜಾತ್ರೆಯಲ್ಲಿ ನಡೆದ ಘಟನೆಗೆ ವಚನಾನಂದ ಸ್ವಾಮೀಜಿ ಈಗಾಗಲೇ ಕ್ಷಮೆ ಕೇಳಿದ್ದಾರೆ. ಅದನ್ನು ಮತ್ತೆ ಮುಂದುವರಿಸುವುದಿಲ್ಲ. ಕೇಳುವುದಕ್ಕೆ ಎಲ್ಲರಿಗೂ ಅವಕಾಶವಿದೆ. ಕೇಳುವ ಶೈಲಿಯಲ್ಲಿ ವ್ಯತ್ಯಾಸವಿರುವುದು ಸರಿಯಲ್ಲ. ಆ ರೀತಿ ಆಗುವುದು ಬೇಡ. ನಿಮ್ಮೊಂದಿಗೆ ಪಂಚಮಸಾಲಿ ಸಮಾಜ ಕೈಬಿಡುವ ವಿಚಾರ ಸರಿಯಲ್ಲ. ಎಲ್ಲರೂ ಜತೆಯಲ್ಲಿರುತ್ತೇವೆ ಎಂದು ಹೇಳಲು ಬಂದಿದ್ದೇವೆ ಎಂದು ತಿಳಿಸಿದರು.