Advertisement

ಸರ್ಕಾರಕ್ಕೆ ನೀರಿನ ಸಮಸ್ಯೆ ಮಾಹಿತಿ ನೀಡುತ್ತಿದ್ದೇವೆ

10:38 AM Jul 31, 2017 | Team Udayavani |

ದಾವಣಗೆರೆ: ನಿರೀಕ್ಷಿತ ಮಳೆ ಬಾರದ ಇರುವುದರಿಂದ ಮುಂದೆ ನೀರಿನ ಸಮಸ್ಯೆ ತಲೆದೋರುವ ಕುರಿತು ಸರ್ಕಾರಕ್ಕೆ ಆಗಿಂದಾಗ್ಗೆ ಪತ್ರ ಮುಖೇನ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್‌. ಅಶ್ವತಿ ತಿಳಿಸಿದ್ದಾರೆ.

Advertisement

ಭಾನುವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಜಿಲ್ಲೆಯ 80 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ 70 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ ಮೂಲಕ ಕುಡಿಯುವ ನೀರು ಪೂರೈಕೆಮಾಡಲಾಗುತ್ತಿದೆ. ಹಾಲಿ ಮಳೆಗಾಲ ಆಗಿದ್ದರೂ ಸಹ ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಜಿಲ್ಲೆಯಲ್ಲಿನ ಪರಿಸ್ಥಿತಿ ತಿಳಿಸಲು ಸರ್ಕಾರಕ್ಕೆ ಆಗಿಂದಾಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ನಾನು ಅಧಿಕಾರ ವಹಿಸಿಕೊಂಡಿದ್ದು 2016ರ ನವೆಂಬರ್‌ನಲ್ಲಿ. ಆಗಲೇ ಕುಡಿಯುವ ನೀರಿನ ಸಮಸ್ಯೆ ಇತ್ತು. ಕೆಲವೇ ಹಳ್ಳಿಗಳಿಗೆ ಟ್ಯಾಂಕರ್‌, ಖಾಸಗಿ ಬೋರ್‌ವೆಲ್‌ ಮೂಲಕ ನೀರು ಕೊಡಲಾಗುತ್ತಿತ್ತು. ಆದರೆ, ಕಾಲ ಕ್ರಮೇಣ ಈ ಸಂಖ್ಯೆ ಹೆಚ್ಚಿತು. ಇದೀಗ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ.
ಬೋರ್‌ವೆಲ್‌ ಕೊರೆಸಿದರೆ ನೀರು ಬರುತ್ತಿಲ್ಲ. ಕೆರೆ ಕಟ್ಟೆ, ಚಾನೆಲ್‌, ಹಳ್ಳಗಳಲ್ಲೂ ನೀರಿಲ್ಲ ಎಂದು ಹೇಳಿದರು.

ಜಿಲ್ಲೆಯನ್ನು ಬಯಲು ಶೌಚ ಮುಕ್ತ ಮಾಡುವ ಕಾರ್ಯ ಭರದಿಂದ ಸಾಗಿದೆ. ಅಕ್ಟೋಬರ್‌ 2ರ ವೇಳೆಗೆ ಜಿಲ್ಲೆಯ ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ ತಾಲ್ಲೂಕುಗಳನ್ನು ಬಯಲು ಶೌಚಮುಕ್ತ ತಾಲ್ಲೂಕುಗಳಾಗಿ ಘೋಷಿಸಲಾಗುವುದು. ಉಳಿದ ತಾಲ್ಲೂಕುಗಳನ್ನು  ಡಿಸೆಂಬರ್‌ ವೇಳೆಗೆ ಘೋಷಣೆಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮೊದಲು ಶೌಚಾಲಯ ನಿರ್ಮಾಣ ಕಾರ್ಯ ತೀರಾ ನಿಧಾನ ಇತ್ತು. ಇದೀಗ ಚುರುಕುಗೊಂಢಿದೆ. ಕಳೆದ ವರ್ಷ ಕೇವಲ 19,000 ಶೌಚಾಲಯ ಕಟ್ಟಲಾಗಿತ್ತು. ಈ ವರ್ಷ ಮೂರೇ ತಿಂಗಳಲ್ಲಿ 13 ಸಾವಿರ ಶೌಚಾಲಯ ಕಟ್ಟಲಾಗಿದೆ ಎಂದು ಮಾಹಿತಿ ನೀಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಸಹ ಸಾಕಷ್ಟು ಲೋಪದೋಷ ಇದ್ದವು. ಅವನ್ನು ಈಗ ಸರಿಪಡಿಸಲಾಗಿದೆ. ಹಾಲಿ ನಮ್ಮಲ್ಲಿ ಹೆಚ್ಚಿನ ಜನರು ಈ ಯೋಜನೆಯಡಿ ಕೆಲಸ ಪಡೆಯುತ್ತಿದ್ದಾರೆ. 2015-16ರಲ್ಲಿ 40 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು. 2016-17ರಲ್ಲಿ 25 ಲಕ್ಷ
ಮಾನವ ದಿನ ಸೃಜನೆಯಾಗಿತ್ತು. 2017-18ರಲ್ಲಿ ಈಗಾಗಲೇ 10 ಲಕ್ಷ ಮಾನವ ದಿನ ಸೃಜನೆಯಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ಈ ಯೋಜನೆಯಡಿ ಇನ್ನಷ್ಟು ಉದ್ಯೋಗ ಸೃಜನೆಗೆ ಒತ್ತುನೀಡಲಾಗುವುದು ಎಂದು ತಿಳಿಸಿದರು.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 8 ಕ್ರಿಮಿನಲ್‌ ಪ್ರಕರಣ ದಾಖಲಾಗಿವೆ. ಈ ಪೈಕಿ 6 ಜಗಳೂರು, ದಾವಣಗೆರೆ, ಹರಪನಹಳ್ಳಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಎಲ್ಲೂ ಸಹ ಅಧಿಕಾರ ದುರುಪಯೋಗ, ಹಣ ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ. ಮಲ್ಲೇಶ್‌, ಹಿರಿಯ ಉಪಾಧ್ಯಕ್ಷ ಎಂ. ಶಶಿಕುಮಾರ್‌, ಖಜಾಂಚಿ ಐ. ಗುರುಶಾಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next