ರಬಕವಿ-ಬನಹಟ್ಟಿ: ರಬಕವಿ, ಬನಹಟ್ಟಿ, ತೇರದಾಳ ಹಾಗೂ ಮಹಾಲಿಂಗಪುರ ನಗರ ಮತ್ತು ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನೇಕಾರರ ಸಮುದಾಯ ಹೆಚ್ಚಾಗಿದೆ. ಇಲ್ಲಿಯವರೆಗೆ ಯಾವುದೆ ಪಕ್ಷ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಆದ್ದರಿಂದ ಈ ಬಾರಿ ಕ್ಷೇತ್ರದಲ್ಲಿ ನೇಕಾರರ ವ್ಯಕ್ತಿಗೆ ಟಿಕೆಟ್ ನೀಡಿದ್ದೇ ಆದರೆ ಕ್ಷೇತ್ರದಲ್ಲಿ ಗೆಲವು ನಿಶ್ಚಿತವಾಗಿದ್ದು, ನಾವು ಬಿಜೆಪಿ ಪಕ್ಷದ ಬಂಡುಕೋರರಲ್ಲ, ನಾವು ಭಾರತೀಯ ಜನತಾ ಪಕ್ಷದಲ್ಲಿದ್ದೇವೆ. ಟಿಕೆಟ್ ಕೊಡುವಂತೆ ವಿನಂತಿಸಿಕೊಳ್ಳುತ್ತಿದ್ದೇವೆ ಎಂದು ಬಾಗಲಕೋಟೆ ಬಿಜೆಪಿ ಪಕ್ಷದ ಉಪಾಧ್ಯಕ್ಷ ರಾಜೇಂದ್ರ ಅಂಬಲಿ ಭಾನುವಾರ ಹೇಳಿದ್ದಾರೆ.
ಸ್ಥಳೀಯ ಬಂಗಾರೆವ್ವ ತಟ್ಟಿಮನಿ ಸಭಾ ಭವನದಲ್ಲಿ ನಡೆದ ನೇಕಾರರ ಸಭೆಯಲ್ಲಿ ಮಾತನಾಡಿ, 2018 ರಲ್ಲಿ ಶಾಸಕ ಸಿದ್ದು ಸವದಿ ಈ ಬಾರಿ ನಮ್ಮನ್ನು ಆಯ್ಕೆ ಮಾಡಿ ಮುಂದಿನ ಚುನಾವಣೆಯಲ್ಲಿ ಸ್ಥಳೀಯ ನೇಕಾರರಿಗೆ ಅವಕಾಶ ಮಾಡಿ ತಮ್ಮ ಋಣ ತಿರೀಸುತ್ತೇನೆ ಎಂದು ಸಾವಿರಾರು ಜನರ ಮಾತು ಕೊಟ್ಟಿದ್ದಾರೆ. ಅದರಂತೆ ಶಾಸಕರು ನೇಕಾರರ ಟಿಕೇಟನ್ನು ನೇಕಾರರಿಗೆ ಕೊಡಿಸಿ ನೇಕಾರರನ್ನು ಆರಿಸಿ ತಂದು ತಮ್ಮ ಮಾತಿನಂತೆ ನಡೆಯಬೇಕಾಗಿದೆ ಎಂದರು.
ನಾಲ್ಕು ದಶಕಗಳಿಂದ ನೇಕಾರರು ಎಲ್ಲ ರೀತಿಯಿಂದಲೂ ವಂಚಿತರಾಗಿದ್ದಾರೆ. ಆದ್ದರಿಂದ ನೇಕಾರರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೇಕಾರ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ನಾವು ಪಕ್ಷದ ವರಿಷ್ಠರಲ್ಲಿ ವಿನಂತಿಸಿಕೊಳ್ಳುತ್ತಿದ್ಧೇವೆ. ಇಲ್ಲಿಯ ಬಹುತೇಕ ನೇಕಾರರು ಬಿಜೆಪಿ ಪಕ್ಷದ ಪರವಾಗಿದ್ದಾರೆ. ಆದ್ದರಿಂದ ಪಕ್ಷದ ವರಿಷ್ಠರು ಅರ್ಹ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಬಸವರಾಜ ಗಿಡದಾನಪ್ಪಗೋಳ ಮಾತನಾಡಿ, ನೇಕಾರರು ಪಕ್ಷ ಬೇಧ ಮರೆತು ಒಗ್ಗಟ್ಟಾಗಬೇಕಾಗಿದೆ. ನೇಕಾರರ ಒಳ ಪಂಗಡದವರೆಲ್ಲರೂ ಒಂದಾಗಬೇಕಿದೆ ಎಂದರು.
ಸಭೆಯಲ್ಲಿ ಬ್ರಿಜ್ಮಮೋಹನ ಡಾಗಾ ಮಾತನಾಡಿ, ನೇಕಾರರ ಪರವಾಗ ಟಿಕೇಟ್ ಕೇಳಿರುವುದಕ್ಕೆ ನಮ್ಮನ್ನು ಬಂಡುಕೋರರಂತೆ ನೋಡುತ್ತಿರುವುದು ಸರಿಯಲ್ಲ. ನಾವು ನೇಕಾರರ ಪರವಾಗಿ ಟಿಕೆಟ್ ಕೇಳುತ್ತಿದ್ದೇವೆ. ಒಂದು ವೇಳೆ ನೇಕಾರರಿಗೆ ಟಿಕೇಟ್ ಸಿಗದೇ, ಬಿಜೆಪಿ ಪಕ್ಷದ ಪರವಾಗಿ ಯಾರಿಗೆ ಟಿಕೆಟ್ ಸಿಕ್ಕರೂ ಅವರ ಪರವಾಗಿ ಕೆಲಸ ಮಾಡಿ ಬಿಜೆಪಿ ಗೆಲ್ಲಿಸುತ್ತೇವೆ. ಕ್ಷೇತ್ರದಲ್ಲಿ ಅಂದಾಜು ಒಂದು ಲಕ್ಷಕ್ಕಿಂತ ಹೆಚ್ಚು ನೇಕಾರರು ಇದ್ದಾರೆ. ನೇಕಾರಿಕೆ ವೃತ್ತಿಯನ್ನು ಅವಲಂಬಿಸಿದ ಇನ್ನೀತರ ಸಮಾಜದವರು ಇಲ್ಲಿದ್ದಾರೆ. ಆದ್ದರಿಂದ ನೇಕಾರ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದರು.
ಸಭೆಯಲ್ಲಿ ಬಾಗಲಕೋಟೆ ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಸೋಮನಾಥ ಗೊಂಬಿ, ಶಶಿಕಾಂತ ಹುನ್ನೂರ, ಶಂಕ್ರಯ್ಯ ಕಾಡದೇವರ ಮಾತನಾಡಿದರು.
ಅರವಿಂದ ಹೊರಟ್ಟಿ, ಕುಮಾರ ಕದಮ, ಶಿವಯ್ಯ ಬಂತನೂರಮಠ, ಈರಪ್ಪ ಮಡಿವಾಳರ, ರಮೇಶ ನರಗುಂದ, ಕಿರಣ ಕೊಣ್ಣೂರ, ಪ್ರವೀಣ ಕೋಲಾರ, ಮಹಾದೇವ ಕದಮ ಸೇರಿದಂತೆ ಅನೇಕ ನೇಕಾರ ಮುಖಂಡರು ಸಭೆಯಲ್ಲಿ ಇದ್ದರು.