ಮುಂಬಯಿ : ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ ಶಿವ ಸೇನೆ, ಬಿಜೆಪಿ ವಿರುದ್ಧದ ತನ್ನ ಧೋರಣೆಯನ್ನು ಕಠಿನಗೊಳಿಸುತ್ತಿರುವಂತೆ ಕಂಡು ಬರುತ್ತಿದೆ.
‘ಮಹಾರಾಷ್ಟ್ರದಲ್ಲಿ ನಾವು ಬಿಜೆಪಿಗೆ ಯಾವತ್ತೂ ಬಿಗ್ ಬ್ರದರ್; ಆದುದರಿಂದ ಇಲ್ಲಿ ನಾವೇ ಬಲಿಷ್ಠರು; ನಮ್ಮ ಮಾತನ್ನು ಬಿಜೆಪಿ ಕೇಳಬೇಕಾಗುತ್ತದೆ; ಸೀಟು ಹಂಚಿಕೆ ಕುರಿತಾದ ಪ್ರಸ್ತಾವವನ್ನು ಸ್ವೀಕರಿಸಿ ತೆಪ್ಪಗೆ ಕುಳಿತುಕೊಳ್ಳುವವರು ನಾವಲ್ಲ’ ಎಂದು ಶಿವಸೇನೆ ಬಿಜೆಪಿಗೆ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸಮಾನ ಸಂಖ್ಯೆಯ ಸೀಟುಗಳಲ್ಲಿ ಜತೆಗೂಡಿ ಹೋರಾಡುತ್ತವೆಯೇ ಎಂದು ಕೇಳಲಾದ ಪ್ರಶ್ನೆಗೆ, ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ, ಸಂಜಯ್ ರಾವತ್ ಅವರು, “ನಾವು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಬಿಗ್ ಬ್ರದರ್ ಆಗಿದ್ದೇವೆ ಮತ್ತು ನಮ್ಮ ಸ್ಥಾನಮಾನವನ್ನು ನಾವು ಹಾಗೆಯೇ ಮುಂದುವರಿಸಿಕೊಂಡು ಹೋಗಲಿದ್ದೇವೆ; ಬಿಜೆಪಿ ನೀಡುವ ಸೀಟು ಹಂಚಿಕೆ ಸೂತ್ರವನ್ನು ಒಪ್ಪಿಕೊಂಡು ತೆಪ್ಪಗೆ ಕೂರುವವರು ನಾವಲ್ಲ’ ಎಂದು ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ ಸರಕಾರ ಈಚೆಗೆ ಸದನದಲ್ಲಿ ಪಾಸು ಮಾಡಿಕೊಂಡಿರುವ ಮೇಲ್ವರ್ಗದ ಬಡವರ ಶೇ.10ರ ಮೀಸಲಾತಿಯನ್ನು ಟೀಕಿಸಿದ ರಾವತ್, 8 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯ ಇರುವ ಮೇಲ್ಜಾತಿಯವರನ್ನು ಬಡವರೆಂದು ಸರಕಾರ ಪರಿಗಣಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವುದಾದರೆ 8 ಲಕ್ಷ ರೂ. ವರೆಗಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ರಾವತ್ ಅವರು ಇಂದು ಸೋಮವಾರ ಠಾಕರೆ ಅವರ ಬಾಂದ್ರಾದಲ್ಲಿನ ಮಾತೋಶ್ರೀ ನಿವಾಸದಲ್ಲಿ ಉದ್ಧವ್ ಠಾಕ್ರೆ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಭೆಯಲ್ಲಿ ರಫೇಲ್, ಮಹಾರಾಷ್ಟ್ರದಲ್ಲಿನ ಬರ ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು. ಮುಂಬರುವ ಸಂಸತ್ ಅಧಿವೇಶನದಲ್ಲಿ ಶಿವಸೇನೆಯು ರಫೇಲ್ ವಿಷಯವನ್ನು ಎತ್ತುವುದಾಗಿ ರಾವತ್ ಹೇಳಿದರು.