Advertisement
ಕೇರಳದ ಮಲೆನಾಡು ಪ್ರದೇಶ ವಯನಾಡು ಜಿಲ್ಲೆಯ ಚೂರಲ್‌ಮಲ ಹಾಗೂ ಮುಂಡಕ್ಕೈ ಗ್ರಾಮಗಳನ್ನು ನಾಮಾವಶೇಷ ಮಾಡಿದ ಭೀಕರ ಭೂಕುಸಿತ ದುರಂತಕ್ಕೆ ಇದೀಗ 45 ದಿನ. ಮೊನ್ನೆ ಜುಲೈ 29ರ ಕರಾಳರಾತ್ರಿ ಅಲ್ಲಿಗೆ ಅಪ್ಪಳಿಸಿದ್ದು ಕಂಡುಕೇಳರಿಯದ ಪ್ರಳಯ. ಪುಂಜರಿಮಲ ಬೆಟ್ಟ ಪ್ರದೇಶದಲ್ಲಿ ಹತ್ತು ದಿನಗಳ ಎಡೆಬಿಡದ ಮಳೆಯ ಫಲವಾಗಿ ವೆಳ್ಳರಿಪಾರ ಕಾಡಿನ ಒಂದು ಭಾಗವೇ ಕುಸಿದು, ಅರುಣಪುಳ ಹೊಳೆಯಲ್ಲಿ ಮರ, ಬಂಡೆ, ಕೆಸರು ಕೊಚ್ಚಿಕೊಂಡು ಬಂದು ಮೊದಲಿಗೆ ಮುಂಡಕ್ಕೈ, ಬಳಿಕ ಚೂರಲ್‌ಮಲ ಊರನ್ನೇ ಆಪೋಶನ ತೆಗೆದುಕೊಂಡಿತು. ಈವರೆಗೆ ಲೆಕ್ಕಕ್ಕೆ ಸಿಕ್ಕಿದ್ದು 350 ಸಾವು. ನಾಪತ್ತೆಯಾದವರ ಅಧಿಕೃತ ಸಂಖ್ಯೆ 70ರ ಆಸುಪಾಸು. ಚಹಾ ತೋಟದಲ್ಲಿ ಕೆಲಸ ಮಾಡುತ್ತಾ ಅಲ್ಲೇ ನೆಲೆಸಿದ್ದ, ಲೆಕ್ಕಕ್ಕೆ ಸಿಗದ ಉತ್ತರ ಭಾರತೀಯರ ಸಂಖ್ಯೆ ಅದೆಷ್ಟೋ. ಯಾರಿಗೂ ಗೊತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು 5000ಕ್ಕೂ ಹೆಚ್ಚು ಜನ. ಇದೆಲ್ಲ ಆಗಿ ಆರು ವಾರಗಳು ಕಳೆದರೂ ಆ ಊರುಗಳಿನ್ನೂ ಬದುಕು ಮೊಳೆತಿಲ್ಲ. ಸದ್ಯಕ್ಕೆ ಆ ಯಾವ ಲಕ್ಷಣವೂ ಕಾಣುತ್ತಿಲ್ಲ. ಊರಿಗೆ ಊರೇ ಕಳಾಹೀನ. ಭಗ್ನಗೊಂಡ 100ಕ್ಕೂ ಹೆಚ್ಚು ಮನೆ, ಹತ್ತಾರು ಅಂಗಡಿಗಳು, ಎರಡು ಶಾಲೆ, ಅನೇಕ ಸರ್ಕಾರಿ ಕಚೇರಿಗಳು, ನೂರಾರು ವಾಹನಗಳ ಅವಶೇಷಗಳು, ಬೆಟ್ಟದಿಂದ ಉರುಳಿಬಂದ ಹೆಬ್ಬಂಡೆಗಳು, ಅವುಗಳಿಗೆ ಸಿಲುಕಿ ಕೊಚ್ಚಿ ಬಂದ ಸಹಸ್ರಾರು ಮರಗಳು, ನೋಡಿಕೊಳ್ಳುವವರಿಲ್ಲದೆ ಅನಾಥವಾಗಿ ನಿಂತ ಚಹಾ ತೋಟಗಳಷ್ಟೇ ಈಗ ಆ ಊರುಗಳ ಅಸ್ತಿತ್ವ.
ವಯನಾಡಿನಿಂದ ದಕ್ಷಿಣಕ್ಕೆ 25 ಕಿಮೀ ದೂರದಲ್ಲಿದೆ ಮೇಪ್ಪಾಡಿ. ಅಲ್ಲಿಂದ ಚೂರಲ್‌ಮಲಕ್ಕೆ 8 ಕಿ.ಮೀ. ಇನ್ನೂ 5 ಕಿ.ಮೀ. ಮುಂದಕ್ಕೆ ಮುಂಡಕ್ಕೈ. ಊರು ಅಲ್ಲಿಗೆ ಕೊನೆ. ಅದರಿಂದಾಚೆ ಒಂದಷ್ಟು ಚಹಾ ತೋಟ. ಇನ್ನೂ ಆಚೆ ಕಾಡು, ಬೆಟ್ಟ. ಇದೀಗ ನಾಮಾವಶೇಷಗೊಂಡ ಈ ಎರಡು ಹಳ್ಳಿಗಳಲ್ಲಿ ಯಾರೂ ಇಲ್ಲ. ಅಲ್ಲಿನ ಚಹಾ ತೋಟಗಳೂ ಬಿಕೋ ಬಿಕೋ. ಚೂರಲ್‌ಮಲ ಗ್ರಾಮದ ಪ್ರವೇಶದಲ್ಲೇ ಪೊಲೀಸ್, ಕಂದಾಯ ಇಲಾಖೆ ಇತ್ಯಾದಿ ಸರ್ಕಾರಿ ಅಧಿಕಾರಿಗಳ ದಂಡು ಕಾವಲು ಕಾಯುತ್ತಿದೆ. ನಿರ್ವಸಿತರಾದವರು ಅಕ್ಕಪಕ್ಕದೂರಿನ ಕಟ್ಟಡಗಳಲ್ಲಿ ಬಾಡಿಗೆಗೆ ಇದ್ದಾರೆ. ಆಗಾಗ್ಗೆ ಬಂದು ಅಳಿದುಳಿದ ವಸ್ತುಗಳಿಗೆ ಶೋಧ ನಡೆಸುತ್ತಾರೆ. ಹೊಸ ಬದುಕು ಹೇಗೋ ಇನ್ನೂ ಗೊತ್ತಿಲ್ಲ. ದುರಂತ ವೀಕ್ಷಣೆಗೆ ಭೇಟಿ ಮಾಡುವ ನೆಪದಲ್ಲಿ ಬರುವ ಕೆಲವರು ಪಳೆಯುಳಿಕೆ ಕಟ್ಟಡಗಳಿಂದ ಸಿಕ್ಕಿದ್ದನ್ನು ಕದ್ದೊಯ್ಯುವುದೂ ಉಂಟಂತೆ. ಹಾಗಾಗಿ, ಚೂರಲ್‌ಮಲ ಊರ ಹೆಬ್ಬಾಗಿಲಲ್ಲೇ ಚೆಕ್ ಪೋಸ್ಟ್ ಹಾಕಲಾಗಿದೆ. ಅಲ್ಲಿ ಪೊಲೀಸರ ಹದ್ದಿನ ಕಣ್ಣಿನ ಕಾವಲಿದೆ. ಕೇರಳ ಪೊಲೀಸರು ಸ್ವಲ್ಪ ಬಿಗಿಯೇ. ಚೆಕ್‌ಪೋಸ್ಟಿಗೂ 200 ಮೀ. ಹಿಂದೆ ಕಂದಾಯ ಇಲಾಖೆ ಅಧಿಕಾರಿಗಳು ಏನು-ಎತ್ತ ವಿಚಾರಿಸಿಯೇ ಚೂರಲ್‌ಮಲ ಪ್ರವೇಶಿಸಲು ಪಾಸ್ ನೀಡುತ್ತಾರೆ. ಈಗ ಎರಡು ದಿನಗಳಿಂದ ಅದೂ ಇಲ್ಲ. ಚೂರಲ್‌ಮಲ ಅಥವಾ ಮುಂಡಕ್ಕೈ ನಿವಾಸಿಗಳಿಗೂ ಪಾಸ್ ಇದ್ದರಷ್ಟೇ ಪ್ರವೇಶ. ರಜೆ ದಿನ ಹೊರಗಿನಿಂದ ಬರುವ ಜನಜಾತ್ರೆ ನೆರೆಯುತ್ತದೆ ಎಂಬ ಕಾರಣಕ್ಕೆ ಈ ಕ್ರಮವಂತೆ. ಶನಿವಾರ ಬಂದಿದ್ದ ಸ್ಥಳೀಯ ಮಾತೃಭೂಮಿ, ಮನೋರಮಾ ಮಾಧ್ಯಮ ತಂಡಗಳನ್ನೇ ನಿರ್ದಾಕ್ಷಿಣ್ಯವಾಗಿ ವಾಪಸ್ ಕಳಿಸಿದ್ದಾರಂತೆ. ನಾನು ಇದಕ್ಕಾಗಿಯೇ ಬೆಂಗಳೂರಿನಿಂದ ಬಂದಿದ್ದೇನೆ ಎಂದರೂ ಕಂದಾಯ ಅಧಿಕಾರಿಗಳು ಪಾಸ್ ನೀಡಲು ಸುತರಾಂ ಒಪ್ಪಲಿಲ್ಲ. ಚೆಕ್‌ಪೋಸ್ಟ್ ದಾಟಲು ಪೊಲೀಸರು ಬಿಡಲಿಲ್ಲ. ಗುರುತಿನ ಚೀಟಿ ತೋರಿಸಿದರೂ “ಪಾಸ್ ಕೊಂಡು ವಾ…” ಎಂದು ಹಿಂದಕ್ಕಟ್ಟಿದರು. ಕಡೆಗೆ ಅದು ಹೇಗೋ ಗಿಟ್ಟಿಸಿಕೊಂಡೆ. ಸಾಧ್ಯವಿದ್ದಷ್ಟು ಕಡೆ ಸುತ್ತಾಡಿದೆ.
Related Articles
Advertisement
ಆ ಎರಡೂ ಊರಿಗೆ ನುಸುಳಿ ಬೀಭತ್ಸದ ದರ್ಶನ ಪಡೆದೆ. ಎದುರಿಗೆ ಸಿಕ್ಕ ಬೆರಳೆಣಿಕೆಯ ಜನರನ್ನು ಮಾತನಾಡಿಸಿದೆ. ಯಾರಿಗೂ ಹೇಳಿಕೊಳ್ಳುವ ಮನಸ್ಸಾಗಲಿ, ಉತ್ಸಾಹವಾಗಲಿ ಇರಲಿಲ್ಲ. ಬಹುಶಃ ಈಗಾಗಲೇ ನೂರಾರು ಸಂದರ್ಶನಗಳು ಆಗಿ ಹೋಗಿ ರೇಜಿಗೆ ಹುಟ್ಟಿರಬಹುದು ಅವರಿಗೆ. ಆದರೂ ಬಿಡದೆ ಒಂಚೂರು ಪ್ರತಿಸ್ಪಂದನೆ ತೋರಿದವರನ್ನು ಮಾತನಾಡಿಸಿದೆ. ಕಾರ್ಯನಿಮಿತ್ತ ಪರವೂರ ನಿವಾಸಿಯಾಗಿರುವ ಜೆನೀಶ್ ಎಂಬ ಯುವಕನೊಬ್ಬ ತನ್ನ ಮನೆಯಿದ್ದ ಜಾಗವೆಂಬ ಶೂನ್ಯದತ್ತ ದೃಷ್ಟಿ ನೆಟ್ಟಿದ್ದ. ಹುಟ್ಟಿ ಬೆಳೆದ ಊರು ನಾಮಾವಶೇಷ ಆದ ಮೇಲೆ ಮೊದಲ ಬಾರಿಗೆ ಅವನಲ್ಲಿಗೆ ಬಂದಿದ್ದ. ನೋವು ಮಡುಗಟ್ಟಿದ್ದ ಅವನ ಕಣ್ಣುಗಳು ಕೆಂಪಡರಿದ್ದವು. ವೇದನೆ ಮರೆಯಲು ಮದ್ಯ ಸೇವಿಸಿದ್ದೇನೆ ಎಂದಾತನೇ ನಿವೇದಿಸಿಕೊಂಡ. ಮೊದಲ ಮಹಡಿವರೆಗೂ ತುಂಬಿದ್ದ ಹೂಳನ್ನು ಈಗಷ್ಟೇ ಜೆಸಿಬಿ ಬಳಸಿ ತೆಗೆಸಿ ಏನು ಉಳಿದಿದೆ ಎಂದು ಹುಡುಕಾಡುತ್ತಿದ್ದ ಬೆಂಗಳೂರು ನಿವಾಸಿ ಶಾಹೀನ್ ಎರಡೇ ಎರಡು ಮಾತನಾಡಿ ಸುಮ್ಮನಾದ. ಉಳಿದವರ ಸೇವೆಗೆಂದು ತ್ರಿಶ್ಶೂರಿಂದ ಬಂದ ನಿವೃತ್ತ ಬ್ಯಾಂಕ್ ಉದ್ಯೋಗಿ ಜೋಸೆಫಿನ್ ಮಾತ್ರ ಮಾತಾಡುತ್ತಲೇ ಇದ್ದರು. ಅವರಿಗೆ ಕಳೆದ 18 ದಿನಗಳಲ್ಲಿ ಕಂಡದ್ದೆಲ್ಲವನ್ನೂ ಹೇಳಿಕೊಳ್ಳುವಾಸೆ. ನನಗೆ ಬಂದವರ ಕತೆ ಬೇಕಿರಲಿಲ್ಲ. ಅಲ್ಲಿನವರನ್ನು ಹುಡುಕುತ್ತಿದ್ದೆ. ಆ ಸಮಯ ನನ್ನೊಳಗೆ ಪತ್ರಿಕಾ ಧರ್ಮ-ಅಧರ್ಮಗಳ ಜಿಜ್ಞಾಸೆ ನಡೆದುದು ಸುಳ್ಳಲ್ಲ. ದುರಂತ ಪ್ರವಾಸ ಮಾಡಿ, ಫೋಟೋ-ವಿಡಿಯೋ ಸೆರೆಹಿಡಿದು ಹೊತ್ತಿದ ಮನೆಯಲ್ಲಿ ಗಳ ಹಿರಿದೆನಾ ಎಂದೂ ಅನಿಸಿದ್ದುಂಟು. ಇದು ನನ್ನ ವೃತ್ತಿಯ ಅನಿವಾರ್ಯತೆ ಹೌದಲ್ಲ ಎಂದು ಸುಮ್ಮನಾಗಿ ಮುಂದುವರಿದೆ.
ಮೇಪ್ಪಾಡಿಯಿಂದ ಚೂರಲ್‌ಮಲ ಹಾದಿಯುದ್ದಕ್ಕೂ ರೆಸಾರ್ಟ್, ಹೋಮ್‌ಸ್ಟೇಗಳಿವೆ. ಎತ್ತರದ ಜಿಪ್‌ಲೈನ್, ಜೋಕಾಲಿ, ಗಾಜಿನ ಸೇತುವೆ ಇತ್ಯಾದಿ ವಾಣಿಜ್ಯಿಕ ಸಾಹಸಗಳೂ ಇವೆ. ಸೂಚಿಪಾರಾ ಜಲಪಾತ ಇಲ್ಲಿನ ಮತ್ತೊಂದು ಆಕರ್ಷಣೆ. ಹಾಗಾಗಿ, ಸಾವಿರಾರು ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದುದು ಸಾಮಾನ್ಯ. ಚಹಾ ತೋಟಗಳನ್ನು ಹೊರತುಪಡಿಸಿದರೆ ಪ್ರವಾಸೋದ್ಯಮವೇ ಇಲ್ಲಿನವರಿಗೆ ಆರ್ಥಿಕ ಶಕ್ತಿ. ಕಳೆದ ಆರು ವಾರಗಳಿಂದ ಅವೆಲ್ಲವೂ ಸ್ತಬ್ಧವಾಗಿದೆ. ಇದರೊಂದಿಗೆ ಇಡೀ ಪ್ರದೇಶ ದಿಗ್ಭ್ರಾಂತವಾಗಿ ಕೂತಿದೆ. ಸದ್ಯಕ್ಕೆ ಅವಘಡದ ಭೀಕರತೆಯನ್ನು ವೀಕ್ಷಿಸಲು ಬರುವ “ದುರಂತ ಪ್ರವಾಸಿಗರೇ” ಅಲ್ಲಿನ ಆರ್ಥಿಕತೆಗೆ ಅಲ್ಪ ಚೈತನ್ಯ. ಆದರೀಗ ಎರಡು ದಿನಗಳಿಂದ ಅದಕ್ಕೆಲ್ಲ ಕಡಿವಾಣ ಹಾಕಲಾಗಿದೆ. ಇನ್ನು ಐದಾರು ತಿಂಗಳಲ್ಲಾದರೂ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೆ ಸಾಕೆನ್ನುತ್ತಾರೆ ಸ್ಥಳೀಯರು. ಇವಿಷ್ಟು ಕಂಡು, ಕೇಳಿ, ದುರಂತದೂರಿನಲ್ಲಿ ಮೂರ್ನಾಲ್ಕು ತಾಸು ಕಳೆದು, ಅಲ್ಲಿಂದ ಹೊರಡುವಾಗ ಸ್ಮೃತಿಪಟಲದಲ್ಲಿ ಪ್ರಮುಖವಾಗಿ ಅಚ್ಚೊತ್ತಿದ್ದು ಎರಡು ದೃಶ್ಯ… ಒಂದು, ಯಜಮಾನ ಬರುವನೆಂದು ಮನೆಯ ಅವಶೇಷದ ಮೇಲೆ ಕಾದು ಕುಳಿತ ನಿಷ್ಠಾವಂತ ನಾಯಿ ಮತ್ತು “ನೀನು ನನ್ನ ಯಜಮಾನನನ್ನು ಕಂಡೆಯಾ?” ಎಂದು ಅಲ್ಲಿಗೆ ಹೋದವರನ್ನೆಲ್ಲ ಪ್ರಶ್ನಿಸುತ್ತಿದೆಯೋನೋ ಎಂಬಂತೆ ಭಾಸವಾಗುತ್ತಿದ್ದ ಅದರ ದೃಷ್ಟಿ. ಇನ್ನೊಂದು, ಮುಂಡಕ್ಕೈ ಗ್ರಾಮದ ಮಗ್ಗುಲಲ್ಲಿ ಅನಾಹುತಕ್ಕೆ ಸಾಕ್ಷಿಯಾಗಿ ನಿಂತ ಹೆಬ್ಬಂಡೆ ಮತ್ತು ಅದರ ಪಕ್ಕದಲ್ಲಿ ಕುಬ್ಜವಾಗಿ ಕಾಣುವ ಎರಡು ಮಾರುತಿ ಕಾರುಗಳು. ಪ್ರಕೃತಿ ಮುಂದೆ ಹುಲುಮಾನವ ಎಷ್ಟಿದ್ದರೂ ಅಷ್ಟೆ!
ನನ್ನೂರು ತ್ರಿಶ್ಶೂರು. ನನಗಿಬ್ಬರು ಹೆಣ್ಣುಮಕ್ಕಳು. ಇಬ್ಬರೂ ಮದುವೆಯಾಗಿ ವಿದೇಶದಲ್ಲಿದ್ದಾರೆ. ಚೂರಲ್‌ಮಲ ದುರಂತ ನೋಡಿ ಕನಲಿ ಹೋದೆ. ಉಳಿದವರಿಗಾಗಿ ಏನಾದರೂ ಸೇವೆ ಮಾಡಲು ಇಲ್ಲಿಗೆ ಬಂದಿದ್ದೇನೆ. 18 ದಿನಗಳಿಂದ ಇಲ್ಲಿದ್ದೇನೆ. ನಿತ್ಯ ಇಲ್ಲಿಗೆ 20-25 ಹಸುಗಳು ಬರುತ್ತವೆ. ಅವುಗಳ ಮಾಲಿಕರೇ ಇಲ್ಲ. ನಾನು ಸಾಧ್ಯವಾದಷ್ಟು ಅವುಗಳ ಚಾಕರಿ ಮಾಡುತ್ತೇನೆ. ಅಳಿದುಳಿದ ವಸ್ತುಗಳನ್ನು ಹೆಕ್ಕಲು ಇಲ್ಲಿನ ಜನ ಬರುತ್ತಿರುತ್ತಾರೆ. ಅವರಿಗೆ ಆಹಾರ ಇತ್ಯಾದಿ ಕೈಲಾದ ನೆರವು ನೀಡುತ್ತೇನೆ. ನನ್ನ ಉಳಿದ ಬದುಕು ಇಲ್ಲಿನವರಿಗೆ ಮೀಸಲು.
– ಜೋಸೆಫಿನ್, ತ್ರಿಶ್ಶೂರಿನ ನಿವೃತ್ತ ಬ್ಯಾಂಕ್ ಉದ್ಯೋಗಿ ಅಪ್ಪ-ಅಮ್ಮ ಉಳಿದರು,ಹುಟ್ಟಿದ ಮನೆ ನಿರ್ನಾಮ
ನಾನು ಹುಟ್ಟಿ ಬೆಳೆದ ಊರಿದು. ದುರಂತ ಸಂಭವಿಸಿದ ದಿನ ಬೇರೆ ಕಡೆ ಇದ್ದೆ. ನನ್ನ ಮನೆಯಲ್ಲಿದ್ದ ಅಪ್ಪ-ಅಮ್ಮ ಅಣ್ಣನ ಮನೆಗೆ ಹೋಗಿದ್ದ ಕಾರಣ ಬದುಕುಳಿದರು. 45 ದಿನಗಳಲ್ಲಿ ಮೊದಲ ಬಾರಿ ಇಲ್ಲಿಗೆ ಬಂದಿದ್ದೇನೆ. ನಮ್ಮ ಮನೆ ಇದ್ದ ಜಾಗ ಸಪಾಟಾಗಿದೆ. ಇಲ್ಲಿನ ಪರಿಸ್ಥಿತಿ ನೋಡಿ ದಿಗ್ಭ್ರಾಂತನಾಗಿದ್ದೇನೆ.
– ಜೆನೀಶ್, ಚೂರಲ್‌ಮಲ ನಿವಾಸಿ ಲ್ಯಾಪ್ಟಾಪ್, ಕೆಲ ದಾಖಲೆ ಸಿಕ್ಕಿದ್ದಷ್ಟೇ ನಮ್ಮ ಭಾಗ್ಯ
ನಾನು ಬೆಂಗಳೂರಿನಲ್ಲಿ ಎಎನ್‌ಜೆಡ್ ಉದ್ಯೋಗಿ. ಬೆಳ್ಳಂದೂರಲ್ಲಿ ನೆಲೆಸಿದ್ದೇನೆ. ಇಲ್ಲಿ ನನ್ನ ತಂದೆ-ತಾಯಿ, ಸೋದರಿ ಇದ್ದರು. ದುರಂತದ ದಿನ ಅವರು ಮನೆಯ ಮೇಲ್ಮಹಡಿಯಲ್ಲಿದ್ದ ಕಾರಣ ಬದುಕುಳಿದರು. ನೆಲಮಹಡಿ ತುಂಬ ಹೂಳು ತುಂಬಿತ್ತು. ಇವತ್ತಷ್ಟೇ ಜೆಸಿಬಿ ಮೂಲಕ ಕೆಸರು ತೆಗೆಸಿ ಮನೆಗೆ ಹೋದೆ. ಲ್ಯಾಪ್‌ಟಾಪ್, ಕೆಲ ಮುಖ್ಯ ದಾಖಲೆಗಳು ದೊರೆತವು. ಇನ್ನಷ್ಟು ವಸ್ತುಗಳಿಗಾಗಿ ಹುಡುಕುತ್ತಿದ್ದೇನೆ. ಅಳಿದ ಜಾಗದಲ್ಲಿ ಉಳಿದದ್ದಷ್ಟೇ ನಮ್ಮ ಭಾಗ್ಯ.
* ಶಾಹೀನ್, ಚೂರಲ್‌ಮಲ ಮೂಲದ ಬೆಂಗಳೂರು ನಿವಾಸಿ ಸದ್ಯಕ್ಕೆ ಎಲ್ಲ ಸ್ತಬ್ಧವಾಗಿದೆ ಬದುಕು ಮುಂದೆ ಹೇಗೋ
ನಮ್ಮ ಮೂಲ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೇಹಳ್ಳಿ. ನನ್ನ ತಂದೆ ಚಹಾ ತೋಟದ ಕೆಲಸಗಾರರಾಗಿ ಬಂದು 45 ವರ್ಷ ಹಿಂದೆ ಇಲ್ಲಿ ನೆಲೆಸಿದರು. ಅವರು ಕಾಲವಾಗಿ 10 ವರ್ಷ ಆಯಿತು. ನಾನು, ಅಣ್ಣ, ಇಬ್ಬರು ತಮ್ಮಂದಿರು. 2019ರ ಪುತ್ತುಮಲ ಭೂಕುಸಿತಕ್ಕೆ ಸಿಲುಕಿ ಅಣ್ಣ ತೀರಿಕೊಂಡ. ನಾನು ಇಲ್ಲಿ ಜೀಪು ಓಡಿಸುತ್ತೇನೆ. ಇಲ್ಲಿಯವಳನ್ನೇ ಮದುವೆಯಾಗಿ ಇಲ್ಲಿಯೇ ನೆಲೆಸಿದ್ದೇನೆ. ತಮ್ಮಂದಿರು ಊರಲ್ಲಿದ್ದಾರೆ. ಅವರ ಜತೆ ಇದ್ದ ಅಮ್ಮ ತೀರಿ 35 ದಿನಗಳಾದವು. ಇಷ್ಟು ದಿನ ಸಲೀಸಾಗಿದ್ದ ಬದುಕು ಇದೀಗ ಸ್ತಬ್ಧವಾಗಿದೆ. ಮುಂದೇನೆಂದು ತೋಚದಾಗಿದೆ.
– ಗೌರಿಂಗೇಗೌಡ, ಕರ್ನಾಟಕ ಮೂಲದ ಚೂರಲ್‌ಮಲ ನಿವಾಸಿ ಪ್ರತ್ಯಕ್ಷ ವರದಿ: ರವಿಶಂಕರ್ ಕೆ. ಭಟ್