Advertisement

Wayanad ಭೂಕುಸಿತ: ಕೊಚ್ಚಿ ಹೋಗಿದ್ದ ಹಸುಗಳಲ್ಲಿ 9 ಹಸುಗಳು ವಾಪಸ್!

08:13 PM Aug 11, 2024 | Team Udayavani |

ಚಾಮರಾಜನಗರ: ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ನಡೆದ ಭೂಕುಸಿತದಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಸುಗಳ ಪೈಕಿ 9 ಹಸುಗಳು ವಾಪಸ್ ಬಂದಿವೆ.

Advertisement

ಜು.29ರ ಮಧ್ಯರಾತ್ರಿಯ ಬಳಿಕ ಚೂರಲ್ಮಲಾದಲ್ಲಿ ನಡೆದ ಭೂಕುಸಿತ ಪ್ರವಾಹದಲ್ಲಿ ಚಾಮರಾಜನಗರ ಜಿಲ್ಲೆ ಮೂಲದ ವಿನೋದ್ ಮತ್ತು ಜಯಶ್ರೀ ಅವರ ಕುಟುಂಬದ 20 ಹಸುಗಳು ಕೊಚ್ಚಿಕೊಂಡು ಹೋಗಿದ್ದವು. ಇದೇ ಹಸುಗಳು ಜೋರಾಗಿ ಕೂಗಿಕೊಂಡ ಕಾರಣ ಮನೆಯಲ್ಲಿದ್ದವರಿಗೆ ಎಚ್ಚರವಾಗಿ, ಹೊರಗೆಬಂದು ಪ್ರವಾಹದಿಂದ ಪಾರಾಗಿದ್ದರು. ಆ ಸಂದರ್ಭದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಹಗ್ಗವನ್ನು ಬಿಚ್ಚಿ ಹಾಕಿದ್ದರು. ಆ ರಾತ್ರಿಯ ಕತ್ತಲಿನಲ್ಲಿ ಆ ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಎತ್ತ ಹೋದವು ಎಂಬುದು ತಿಳಿದಿರಲಿಲ್ಲ.
ಇವರೆಲ್ಲ ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿದ್ದಾರೆ. ವಿನೋದ್ ಅವರು ಮೇಪ್ಪಾಡಿಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ವಿನೋದ್ ಕುಟುಂಬ ಗುಂಡ್ಲುಪೇಟೆಯಲ್ಲಿ, ಜಯಶ್ರೀ ಅವರ ಕುಟುಂಬ ಚಾ.ನಗರದಲ್ಲಿದೆ.

ಅಚ್ಚರಿ ಎಂಬಂತೆ ಶನಿವಾರ, ವಿನೋದ್ ಅವರ ಮನೆಯ ಪ್ರದೇಶದ ಹತ್ತಿರವಿರುವ ಟೀ ಎಸ್ಟೇಟ್‌ನಲ್ಲಿ ಮ್ಯಾನೇಜರ್ ಬಂಗಲೆ ಬಳಿ ವಿನೋದ್ ಹಾಗೂ ಜಯಶ್ರೀ ಅವರ 9 ಹಸುಗಳು ಕಾಣಿಸಿಕೊಂಡಿವೆ! ಅಲ್ಲಿ ಹುಲ್ಲು ಮೇಯುತ್ತಾ ನಿಂತಿದ್ದವು. ವಿಷಯ ತಿಳಿದು ವಿನೋದ್ ಸ್ಥಳಕ್ಕೆ ಹೋಗಿ ನೋಡಿ ತಮ್ಮ ಹಸುಗಳು ಎಂದು ಖಚಿತಪಡಿಸಿದ್ದಾರೆ. ಉಳಿದ ಹಸುಗಳು ಎಲ್ಲಿವೆ ಎಂಬುದು ಗೊತ್ತಾಗಿಲ್ಲ. ಅವುಗಳೂ ಮರಳಿ ಬರಬಹುದು ಎಂಬ ಆಶಾವಾದ ಕುಟುಂಬದಲ್ಲಿದೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ವಿನೋದ್, ನಮ್ಮನ್ನು ರಕ್ಷಿಸಿದ ಹಸುಗಳು ಕೊಚ್ಚಿಕೊಂಡು ಹೋದ ಘಟನೆಯಿಂದ ಮನೆಯವರೆಲ್ಲ ಬಹಳ ನೊಂದುಕೊಂಡಿದ್ದೆವು. ಈಗ ಹಸುಗಳು ಎಸ್ಟೇಟಿನಲ್ಲಿ ಸಿಕ್ಕಿರುವುದು ನಮಗೆ ಬಹಳ ಸಂತೋಷ ತಂದಿದೆ. ಕಾಳಜಿ ಕೇಂದ್ರದಿಂದ ತೆರಳಿ ಅವುಗಳಿಗೆ ಬಾಳೆ ಹಣ್ಣು ತಿನ್ನಿಸಿಬಂದೆ. ಬಂಗಲೆ ಪಕ್ಕದಲ್ಲೇ ಅವುಗಳ ಆಶ್ರಯ ಪಡೆದಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next