Advertisement
ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಝಾನ್ಸಿರಾಣಿ, ಪತಿ ಅನಿಲ್ ಕುಮಾರ್ ಘಟನೆಯಲ್ಲಿ ಗಾಯಗೊಂಡಿದ್ದು ಇವರ ಮಗ ನಿಹಾಲ್ (2), ಅತ್ತೆ ಲೀಲಾವತಿ (55) ಭೂಕುಸಿತ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಇವರ ಶವ ಬುಧವಾರ ಪತ್ತೆಯಾಗಿದೆ. ಮೈಸೂರು ಜಿಲ್ಲೆ ತಿ. ನರಸೀಪುರದ ಉಕ್ಕಲಗೆರೆ ಗ್ರಾಮದ ಯುವತಿ ಶ್ರೇಯಾ (19) ಸಾವಿಗೀಡಾಗಿದ್ದು ಇನ್ನೂ 8 ಮಂದಿ ಕಣ್ಮರೆಯಾಗಿದ್ದಾರೆ. ವಯನಾಡಿನ ಮೇಪ್ಪಾಡಿಯಲ್ಲಿ ಶ್ರೇಯಾ ಮೃತದೇಹ ಪತ್ತೆಯಾಗಿದೆ. ಸಂಬಂಧಿಕರ ಮನೆಗೆ ತೆರಳಿದ್ದ ವಿರಾಜಪೇಟೆ ತಾಲೂಕು ಸಿದ್ದಾಪುರ ಗುಯ್ಯ ಸರಕಾರಿ ಶಾಲೆ ವಿದ್ಯಾರ್ಥಿ ರೋಹಿತ್ (9) ಮೃತದೇಹ ಪತ್ತೆಯಾಗಿದೆ.
Related Articles
Advertisement
ಮೃತ ಕನ್ನಡಿಗರುಚಾಮರಾಜನಗರ ಮೂಲದ ಪುಟ್ಟಸಿದ್ದ ಶೆಟ್ಟಿ (62), ರಾಣಿ (55), ಇರಸವಾಡಿ ರಾಜೇಂದ್ರ (55), ರತ್ನಮ್ಮ (45), ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟದ ಝಾನ್ಸಿರಾಣಿ ಮಗ ನಿಹಾಲ್ (2), ಅತ್ತೆ ಲೀಲಾವತಿ (55), ತಿ.ನರಸೀಪುರದ ಉಕ್ಕಲಗೆರೆ ಶ್ರೇಯಾ (19) ಮತ್ತು ವಿರಾಜಪೇಟೆ ತಾಲೂಕು ಗುಯ್ಯ ಶಾಲೆ ವಿದ್ಯಾರ್ಥಿ ರೋಹಿತ್ (9) ವಿದ್ಯಾರ್ಥಿ ಸಾವು
ಮೇಪಾಡಿಯ ಸಂಬಂಧಿಕರ ಮನೆಗೆ ತೆರಳಿದ್ದ ವಿದ್ಯಾರ್ಥಿ ರೋಹಿತ್ ಮೃತದೇಹ ಬುಧವಾರ ಪತ್ತೆಯಾಗಿದೆ. ಗುಯ್ಯ ಶಾಲೆ ಬಳಿ ಬಾಡಿಗೆ ಮನೆಯಲ್ಲಿರುವ ರವಿ ಮತ್ತು ಕವಿತಾ ದಂಪತಿ ಕೂಲಿ ಕಾರ್ಮಿಕರಾಗಿದ್ದು ತಾಯಿ ಕವಿತಾಳೊಂದಿಗೆ ಮೇಪಾಡಿ ಹೋಗಿದ್ದ ರೋಹಿತ್ ಸಂಬಂಧಿಕರ ಮನೆಯಲ್ಲಿದ್ದ. ಸೋಮವಾರ ರಾತ್ರಿ ನಡೆದ ವಯನಾಡು ದುರಂತದಲ್ಲಿ ಬಾಲಕ ಕೂಡ ಮಣ್ಣಿನಡಿ ಕೊಚ್ಚಿಹೋಗಿದ್ದು ಬುಧವಾರ ರಕ್ಷಣ ಕಾರ್ಯಾಚರಣೆ ಮಾಡುತ್ತಿರುವ ತಂಡಕ್ಕೆ ಬಾಲಕನ ಮೃತದೇಹ ದೊರೆತಿದೆ. ಮೃತ ಕನ್ನಡಿಗರಿಗೆ ತಲಾ 5 ಲಕ್ಷ ರೂ.
ಬೆಂಗಳೂರು: ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಕನ್ನಡಿಗರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಕರ್ನಾಟಕ ಸರಕಾರ ಘೋಷಿಸಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ದುರಂತದಲ್ಲಿ ಮೃತಪಟ್ಟವರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೊಂದು ಅತ್ಯಂತ ಘೋರ ದುರಂತ, ಇಲ್ಲಿ ಕನ್ನಡಿಗರು ಪ್ರಾಣ ಕಳೆದುಕೊಂಡದ್ದು ಮತ್ತಷ್ಟು ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಸಂತ್ರಸ್ತರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ರಾಜ್ಯ ಸರಕಾರ ಶಕ್ತಿಮೀರಿ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹೂತು ಹೋಗಿತ್ತು ಅಜ್ಜಿ ಮೃತದೇಹ
ಮಂಡ್ಯ: ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಅಜ್ಜಿ ಹಾಗೂ ಮೊಮ್ಮಗನ ಮೃತದೇಹಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಮೂಲದ ಅಜ್ಜಿ ಲೀಲಾವತಿ (55) ಹಾಗೂ ಮೊಮ್ಮಗ ನಿಹಾಲ್(2.5) ಭೂಕುಸಿತದಲ್ಲಿ ಕೊಚ್ಚಿ ಹೋಗಿದ್ದರು. ನಾಪತ್ತೆಯಾಗಿದ್ದ ಲೀಲಾವತಿ ಮಗ ಅನಿಲ್, ಪತಿ ದೇವರಾಜು, ಸೊಸೆ ಝಾನ್ಸಿರಾಣಿ ಗಾಯಗೊಂಡಿದ್ದರು. ಬುಧವಾರ ಕಾರ್ಯಾಚರಣೆ ವೇಳೆ ಗಿಡಗಂಟಿಗಳ ಮೇಲೆ ನಿಹಾಲ್ ಶವ ಪತ್ತೆಯಾದರೆ, ಮಣ್ಣಿನಲ್ಲಿ ಹೂತಿರುವ ಸ್ಥಿತಿಯಲ್ಲಿ ಲೀಲಾವತಿ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಶವಗಳ ಗುರುತು ಇನ್ನೂ ಪತ್ತೆ ಹಚ್ಚಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ| ಎಚ್.ಎಲ್.ನಾಗರಾಜು ತಿಳಿಸಿದರು. ಮಳೆ ಬರುತ್ತಿದೆ…
ನಾಳೆ ಬರುತ್ತೇನೆ ಎಂದವರು ಬರಲಿಲ್ಲ…
ಮಂಡ್ಯ: ತುಂಬಾ ಮಳೆ ಬರುತ್ತಿದೆ. ನಾಳೆ ಬರುತ್ತೇವೆ ಎಂದವರು ಬರಲಿಲ್ಲ. ವಿ ಧಿಯೇ ಮಳೆಯಾಗಿ ಅವರನ್ನು ಕರೆದುಕೊಂಡು ಹೋಯಿತು ಎಂದು ನಾಪತ್ತೆಯಾಗಿ ಮೃತಪಟ್ಟಿದ್ದಾರೆ ಎನ್ನಲಾದ ಲೀಲಾವತಿ ಅವರ ಪುತ್ರಿ ಮಂಜುಳಾ ಕಣ್ಣೀರು ಹಾಕಿದ್ದಾರೆ. ನಾನು ಬರಲ್ಲ ಮಗ, ಸೊಸೆ ಕಳಿಸುತ್ತೇನೆ’ ಎಂದು ಅಮ್ಮ ಹೇಳಿದರು. ಆಗ ನಾನು ಬರಲಿಲ್ಲ ಎಂದರೆ ಅಲ್ಲೇ ಸಾಯಿ’ ಎಂದಿದ್ದೆ. ಆದರೆ ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲ. ಸೈಕಲ್ ತೆಗೆದುಕೊಡು ಎಂದು ಪಾಪು ಕೇಳಿದ್ದ. ಪಾಪುವಿಗಾಗಿ ಬುಕ್ಸ್ ಎಲ್ಲ ತೆಗೆದು ಇಟ್ಟಿದ್ದೆ. ದೇವರಿಗೆ ಕರುಣೆ ಅನ್ನೋದೆ ಇಲ್ಲ. ಮಲಗಿರುವಾಗ ಗುಡ್ಡ ಕುಸಿದು, ಮಗು ಕೊಚ್ಚಿ ಹೋಗಿದೆ. ನಮ್ಮಮ್ಮನ ಕೈ ಕಾಣುತ್ತಿದೆ. ಮಗು ಮಕಾಡೆ ಮಲಗಿದೆ. ಹೇಗಾದರೂ ಮಾಡಿ ಮೃತದೇಹ ಕರ್ನಾಟಕಕ್ಕೆ ತನ್ನಿ, ಕಡೆ ಬಾರಿ ಮುಖ ನೋಡಿಕೊಳ್ಳುತ್ತೇವೆ ಎಂದು ಗೋಳಾಡಿದರು.