Advertisement

Wayanad – ಹಸುರು ಸುಂದರಿ

02:59 PM Dec 05, 2023 | Team Udayavani |

ವಯನಾಡು ಎನ್ನುವ ಹಸುರು ಸುಂದರಿಯ ಮೇಲಿನ “ಕ್ರಶ್‌” ನಿನ್ನೆ-ಮೊನ್ನೆಯದಲ್ಲ. ಐದಾರು ವರ್ಷಗಳ ಹಿಂದಿನದ್ದು. ಕುಂತಾಗ, ನಿಂತಾಗ ಪ್ರತಿಕ್ಷಣವೂ ಆಕೆಯದ್ದೆ ಜಪ. ಅವಳನ್ನು ಕಣ್ತುಂಬಿಕೊಳ್ಳಬೇಕು ಅನ್ನುವ ಮನದಾಸೆಯಂತೆ ಹೊರಟು ಅವಳೂರಿಗೆ ತಲುಪಿ ಅಲ್ಲಿ ಆಕೆ ಸಿಕ್ಕಾಗ ಕ್ರಶ್‌ ತೆರೆಗೆ ಸರಿದು ಮೂಡಿದ್ದು ನವಿರಾದ ಪ್ರೇಮ. ಆಕೆಯ ಸೌಂದರ್ಯದ ಖನಿಗೆ, ತೋರಿದ ಅಕ್ಕರೆಗೆ, ಅಪ್ಪಿಕೊಂಡು ಕೇಳಿದ ಪ್ರೇಮ ನಿವೇದನಕ್ಕೆ ನಾವು ಕರಗಿ ನಾಚಿ ನೀರಾದೆವು..!

Advertisement

ಈಗ ಬರೆಯುತ್ತಿರುವುದು “ವಯನಾಡು’ ಎಂಬ ಸುಂದರಿಯ ಕುರಿತಾದ ಪ್ರೇಮ ಪತ್ರ. ಆಕೆಯ ಮಡಿಲಿನಲ್ಲಿ ಎರಡು ದಿನಗಳ ಕಾಲ ತಲೆಯಿಟ್ಟು ಆಲಿಸಿದ ಹಸುರು ಲೋಕದ ಪ್ರೇಮ ಕಥೆಗಳು. ಆಕೆ ತೋರಿಸಿದ ಹಸುರು ನೆಲೆಗಳ ನೆನಪುಗಳನ್ನು ಮತ್ತೆ-ಮತ್ತೆ ಮೆಲುಕು ಹಾಕುವುದೇ ಮನಸ್ಸಿಗೆ ಮುದ. ಅಂದ ಹಾಗೆ, ಗೆಳೆಯರ ಜತೆಗೂಡಿ ಹೊರಟ ಪ್ರಯಾಣದಲ್ಲಿ ವಯನಾಡು ಎಂಬ ಹಸುರು ಸಿರಿಯ ಅದ್ಭುತ ಲೋಕದ ಹಲವು ಅನುಭವಗಳು ನಮ್ಮ ಪ್ರವಾಸವನ್ನು ಸ್ಮರಣೀಯಗೊಳಿಸಿತು.

ನಮ್ಮ ನಾಲ್ವರ ತಂಡ ಮಂಗಳವಾರ ಮಧ್ಯಾಹ್ನ ಪುತ್ತೂರಿನಿಂದ ಹೊರಟು ಮಡಿಕೇರಿ -ವಿರಾಜಪೇಟೆ -ಪೊನ್ನಂಪೇಟೆ ಮಾರ್ಗವಾಗಿ ಕುಟ್ಟದ ಮೂಲಕ ವಯನಾಡು ಪ್ರವೇಶಿದಾಗ ಗಡಿಯಾರದ ಮುಳ್ಳು ರಾತ್ರಿಯ ಸಿಗ್ನಲ್‌ ತೋರಿಸಿತ್ತು. ಗದ್ದೆಯ ಮಡಿಲಿನಲ್ಲಿದ್ದ ಹೋಂ ಸ್ಟೇ ಒಂದರಲ್ಲಿ ಉಳಿದುಕೊಂಡು ತೆರಳಬೇಕಾದ ಸ್ಥಳಗಳನ್ನು ಪಟ್ಟಿ ಮಾಡಿಕೊಂಡು ಮರುದಿನ ಮುಂಜಾನೆ ಪ್ರಯಾಣ ಶುರುವಿಟ್ಟುಕೊಂಡೆವು.

ವಯನಾಡಿನ ತಿರುವು-ಮುರುವಿನ ರಸ್ತೆಯ ಇಕ್ಕಲೆಗಳಲ್ಲಿ ಕಾಫಿ-ಚಹಾ ತೋಟದ ಸುಗಂಧವನ್ನು ಆಸ್ವಾದಿಸುತ್ತಾ ಸಾಗಿದ್ದು ವಯನಾಡು 900 ಕಂಡಿ ಅರಣ್ಯದ ತುದಿಯಲ್ಲಿರುವ ಗ್ಲಾಸ್‌ ಬ್ರಿಡ್ಜ್‌ಗೆ.

ಇದು ದಕ್ಷಿಣ ಭಾರತದ ಮೊದಲ ಗಾಜಿನ ಸೇತುವೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಪ್ರವೇಶ ದ್ವಾರ ಇರುವ ಕಲ್ಲಾಡಿಯಿಂದ ಏಳು ಕಿ.ಮೀ. ದೂರದ ಬೆಟ್ಟ ಏರಿದರೆ ಗಾಜಿನ ಸೇತುವೆ ಸಿಗುತ್ತದೆ. ಅರಣ್ಯದಲ್ಲಿ ಆಫ್‌ ರೋಡ್‌ ಜೀಪ್‌ ಸಫಾರಿ ಮೂಲಕ ತೆರಳಬೇಕು. ಈ ರಸ್ತೆಯಲ್ಲಿನ ಸಂಚಾರವೆಂದರೆ ಅದು ದೇವರಿಗೆ ಪ್ರೀತಿ. ಅಷ್ಟರ ಮಟ್ಟಿಗೆ ಕಡಿದಾದ ರಸ್ತೆಯಿದು. ಸುರಕ್ಷಿತವಾಗಿ ದಡ ಸೇರಿಸುವ ಜೀಪು ಚಾಲಕರಿಗಂತೂ ಕೃತಜ್ಞತೆ ಹೇಳಿದಷ್ಟು ಕಮ್ಮಿ ಅನ್ನಬಹುದು.

Advertisement

ಜೀಪ್‌ ಸಫಾರಿಗೆ 1,200 ಬಾಡಿಗೆ. 6 ಸದಸ್ಯರು ಒಂದು ಬಾರಿಗೆ ಸಂಚರಿಸಬಹುದು. ಅಂದರೆ ಒಬ್ಬನಿಗೆ 200 ರೂ. ತಗಲುತ್ತದೆ. ಜೀಪು ಒಂದು ತಾಸು ನಮಗಾಗಿ ಕಾದು ಪುನಃ ನಮ್ಮನ್ನು ವಾಪಾಸು ಕರೆದುಕೊಂಡು ಪ್ರವೇಶ ದ್ವಾರಕ್ಕೆ ತಲುಪಿಸುತ್ತದೆ. ಈ ರಸ್ತೆಯಲ್ಲಿ 4 ಕಿ.ಮೀ.ನಲ್ಲಿ ಒಂದು ಸಣ್ಣ ಗಾತ್ರದ ಗಾಜಿನ ಬ್ರಿಡ್ಜ್‌ ಇದೆ. ಇನ್ನೊಂದು ಏಳು ಕಿ.ಮೀ. ದೂರದಲ್ಲಿ ದೊಡ್ಡ ಗಾತ್ರದ ಬ್ರಿಡ್ಜ್‌. ನಾವು ಏಳು ಕಿ.ಮೀ. ಕ್ರಮಿಸಿ ಅಲ್ಲಿ 250 ರೂ. ಪ್ರವೇಶ ಶುಲ್ಕ ಪಾವತಿಸಿ ಗಾಜಿನ ಸೇತುವೆ ಪ್ರವೇಶಿಸಿದೆವು. ಒಂದು ತಾಸಿನ ಕಾಲ ಗಾಜಿನ ಸೇತುವೆ, ಟ್ರೀ ಹೌಸ್‌, ತೂಗು ಮಂಚದಲ್ಲಿ ಕುಳಿತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಿದೆವು.

ಗಾಜಿನ ಸೇತುವೆಯಿಂದ ನಿಂತು ನೋಡಿದರೆ ಪಶ್ಚಿಮ ಘಟ್ಟದ ಬೆಟ್ಟ ಕೈಯೊಳಗಿದೆ ಅನ್ನುವ ಹಾಗೆ ಕಣ್ಮನ ಸೆಳೆಯುತ್ತದೆ. ಪ್ರವೇಶ ದ್ವಾರದಿಂದ 4 ಕಿ.ಮೀ. ದೂರದಲ್ಲಿರುವ ಪ್ರವಾಸಿ ಸ್ಥಳದಲ್ಲಿ ಬೋಟಿಂಗ್‌, ಚಿಲ್ಡ್ರನ್ಸ್ ಪಾರ್ಕ್‌, ಟ್ಯಾìಂಪೆಲೈನ್‌, ಸ್ಕೈವಾಕ್‌, ರೈಫಲ್‌ ಶೂಟಿಂಗ್‌, ಬಿಲ್ಲುಗಾರಿಕೆ, ಗುಹೆ ಹತ್ತಾರು ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಕಡಿದಾದ ರಸ್ತೆಯ ಸಂಚಾರವಾದುದರಿಂದ ನಮ್ಮ ದೇಹವು ದಣಿದಿತ್ತು. ಬೆಟ್ಟ ಇಳಿದು ಕಲ್ಲಾಡಿಯಲ್ಲಿ ತುಸು ಹೊತ್ತು ವಿರಮಿಸಿ ಮತ್ತೆ ಪ್ರಯಾಣ ಸಾಗಿದ್ದು ಕಲ್ಲೆಟ್ಟಾದಿಂದ 21 ಕಿ.ಮೀ.ದೂರದಲ್ಲಿರುವ ವಯನಾಡಿನ ಆಕರ್ಷಣೆಗಳಲ್ಲೊಂದಾದ ಬಾಣಾಸುರ ಅಣೆಕಟ್ಟಿನತ್ತ.

ಪ್ರವೇಶ ದ್ವಾರದಲ್ಲಿ ಶುಲ್ಕ ಪಾವತಿಸಿ ಒಳ ಪ್ರವೇಶಿದರೆ ಜಲರಾಶಿಯ ಅಪೂರ್ವ ದೃಶ್ಯ ಕಾಣ ಸಿಗುತ್ತದೆ. ಕಬಿನಿ ಉಪನದಿಯ ಮೇಲೆ ಕಟ್ಟಿದ ಈ ಅಣೆಕಟ್ಟು ಭಾರತದ ಅತೀ ದೊಡ್ಡ ಹಾಗೂ ಏಷ್ಯಾದ ಎರಡನೇ ಅತಿದೊಡ್ಡ ಮಣ್ಣಿನ ಅಣೆಕಟ್ಟು ಎಂಬ ಹೆಗ್ಗಳಿಕೆ ಹೊಂದಿದೆ. ಇದು 38.5 ಮೀ. ಎತ್ತರ, 685.0 ಮೀ. ಉದ್ದವಿದೆ. ಕಕ್ಕಯಂ ಜಲವಿದ್ಯುತ್‌‍ಗೆ ಪೂರಕವಾಗಿ ಇದನ್ನು ನಿರ್ಮಿಸಲಾಗಿದೆ ಅನ್ನುತ್ತಿದೆ ಇತಿಹಾಸ. ಬಾಣಾಸುರ ದಡದಲ್ಲಿ ನಿಂತು ನೋಡಿದರೆ ಕಾಣುವ ಬಾಣಾಸುರ ಬೆಟ್ಟ ವಯನಾಡಿನ ಅತೀ ಎತ್ತರದ ಬೆಟ್ಟ. ಅಣೆಕಟ್ಟಿನ ಹಿನ್ನೀರಿನಲ್ಲಿ ಬೋಟಿಂಗ್‌, ಮಕ್ಕಳ ಆಟೋಟಕ್ಕೆ ಪೂರಕವಾದ ಹಲವು ಚಟುವಟಿಕೆಗಳಿವೆ. ಸುಂದರ, ಅತಿ ಸುಂದರ ವರ್ಣನೆಗೆ ಏನೆಲ್ಲಾ ಪದಗಳಿವೆಯೋ ಅವೆಲ್ಲವನ್ನೂ ಇಲ್ಲಿಗೆ ಪ್ರಯೋಗಿಸಬಹುದು.

ಬಾಣಸೂರು ಡ್ಯಾಂನಿಂದ ಹೊರಟು ನಿಂತಾಗ ಇನ್ನೂ ಒಂದು ದಿವಸ ಇಲ್ಲೇ ಇರುವುದೋ ಅಥವಾ ಊರಿಗೆ ಹೊರಡುವುದೋ ಅನ್ನುವ ಬಗ್ಗೆ ನಮ್ಮೊಳಗೆ ಚರ್ಚೆ ಆರಂಭವಾಯಿತು. ಅಂತಿಮವಾಗಿ ಒಲ್ಲದ ಮನಸ್ಸಿನಿಂದ ಊರಿನತ್ತ ಹೊರಟೆವು. ಕುಟ್ಟದಿಂದ ಅಮ್ಮತ್ತಿ ಮಾರ್ಗವಾಗಿ ಮಡಿಕೇರಿ ಮೂಲಕ ಸುಳ್ಯಕ್ಕೆ ತಲುಪುವಾಗ ಸಮಯ ರಾತ್ರಿ 9.30 ಕಳೆದಿತ್ತು.

ನಾನು ಸೀದಾ ಮನೆಗೆ ಮರಳಿದರೆ, ಉಳಿದ ಮೂವರು ಸುಳ್ಯದಲ್ಲಿ ನಿಂತು ಮರುದಿನ ಊರಿನತ್ತ ಪ್ರಯಾಣ ಬೆಳೆಸಿದರು. ವಯನಾಡಿನ ಒಂದು ಮೈನಸ್‌ ಹೇಳಿ ಎಂದು ಯಾರಾದರೂ ಕೇಳಿದರೆ, ಅದು ಆಹಾರದ ವ್ಯವಸ್ಥೆ. ಸಸ್ಯಹಾರಿಗಳ ಪಾಲಿಗಂತೂ ಅಲ್ಲಿನ ಫುಡ್‌ ಕಷ್ಟ ಕಷ್ಟ. ಅದು ಬಿಟ್ಟರೆ ಉಳಿದೆಲ್ಲವೂ ವಂಡರ್‌ಪುಲ್‌.

-ನಿಸರ್ಗ

ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next