Advertisement

ಮಹಾತ್ಮ ತೋರಿದ ದಾರಿಯಲ್ಲಿ…

10:14 AM Oct 02, 2019 | mahesh |

ಮಹಾತ್ಮ ಗಾಂಧಿ ಜನಿಸಿ 150 ವರ್ಷ ಪೂರ್ಣವಾಗಿದೆ. ಅವರು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಆಸ್ಥೆಯಗಳು ಪ್ರಸ್ತುತ ದಿನಮಾನಗಳಿಗೂ ಅನ್ವಯವಾಗುತ್ತವೆ. ಈ ಬಾರಿಯ ಗಾಂಧಿ ಜಯಂತಿ ಹಿಂದಿನ ವರ್ಷಗಳ ಆಚರಣೆಗಳಿಗಿಂತ ಭಿನ್ನವಾಗಿದೆ ಎಂದರೆ ತಪ್ಪಾಗಲಾರದು. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಗಾಂಧಿ ಚಿಂತನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ ಎನ್ನುವುದು ಭಾರತೀಯರಾಗಿರುವ ನಮಗೆಲ್ಲ ಹೆಮ್ಮೆಯ ವಿಚಾರವೇ ಸರಿ.

Advertisement

ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ವಿಶ್ವಸಂಸ್ಥೆಯ ತಾರಸಿಯಲ್ಲಿ ಮಹಾತ್ಮ ಗಾಂಧಿ ಹೆಸರಿನಲ್ಲಿರುವ ಸೌರ ಫ‌ಲಕಗಳ ಉದ್ಘಾಟನೆ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ್ದರು. ಅಮೆರಿಕದ ಪ್ರಮುಖ ನಾಯಕರಾಗಿದ್ದ ಮಾರ್ಟಿನ್‌ ಲೂಥರ್‌ ಕಿಂಗ್‌ ಜ್ಯೂನಿಯರ್‌, ಜೇಮ್ಸ್‌ ಲಾಸನ್‌, ಜೇಮ್ಸ್‌ ಬೇವೆಲ್‌, ದಕ್ಷಿಣ ಆಫ್ರಿಕದ ಸ್ವಾತಂತ್ರ್ಯ ಹೋರಾಟದ ರೂವಾರಿ ಡಾ| ನೆಲ್ಸನ್‌ ಮಂಡೇಲ ಹೀಗೆ ಹಲವಾರು ಮಂದಿ ವಿದೇಶಿ ನಾಯಕರಿಗೆ ನಮ್ಮ ಮಹಾತ್ಮ ಸ್ವಾತಂತ್ರ್ಯ, ಸರಳ ಜೀವನ, ಸಾತ್ವಿಕತೆಯಲ್ಲಿ ಆದರ್ಶರಾಗಿದ್ದವರು. ತಮ್ಮ ಜೀವಿತದ ಉದ್ದಕ್ಕೂ ಶುಚಿತ್ವಕ್ಕೆ ಆದ್ಯತೆ ನೀಡಿದ್ದವರು ಮಹಾತ್ಮ ಗಾಂಧಿ. ಅದಕ್ಕೆ ಅನುಸರಣೀಯವಾಗಿ ಸ್ವತ್ಛ ಭಾರತ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಾಗಿದೆ, ಪ್ರತಿಯೊಂದು ಹಳ್ಳಿಗಳ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಅವುಗಳ ಸಮಗ್ರ ಅಭಿವೃದ್ಧಿಯೇ ಗಾಂಧೀಜಿಯವರ ಆದರ್ಶ ಭಾರತದ ಕಲ್ಪನೆಯಾಗಿತ್ತು. ಅದರಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಈಗ ಜಾರಿ ಮಾಡಲಾಗಿದೆ. ಇಂಥ ಕೆಲವೊಂದು ನಿರ್ಧಾರಗಳು ದೇಶದ ಮೊದಲ ಸರಕಾರದ ಅವಧಿಯಿಂದಲೂ ಜಾರಿಯಾಗಿದ್ದರೂ, ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಆಗಿಲ್ಲ.ಇದೊಂದು ಕಹಿ ಸತ್ಯವೇ ಸರಿ. ವಿಶ್ವದ ಇತರ ರಾಷ್ಟ್ರಗಳು ನಮ್ಮ ಬಾಪು ಹಾಕಿಕೊಟ್ಟ ಮಾರ್ಗ ಅನುಸರಿಸಿ, ಪ್ರಪಂಚದ ಅಗ್ರೇಸರ ರಾಷ್ಟ್ರಗಳ ಸಾಲಿನಲ್ಲಿ ಮಿಂಚಬಲ್ಲವು ಎಂದಾದರೆ ಅವರು ಜನಿಸಿದ ನಾಡಿನಲ್ಲಿ ಏಕೆ ಸಾಧ್ಯವಿಲ್ಲ? ಈ ನಿಟ್ಟಿನಲ್ಲಿ ಪ್ರತಿ ವರ್ಷ ಅ.2ರಂದು ಸುತ್ತಮುತ್ತಲಿನ ಸ್ಥಳಗಳನ್ನು ಶುಚಿಯಾಗಿ ಇರಿಸುವ ಬಗ್ಗೆ ಘೋಷಣೆ ಮಾಡಿದರೆ ಸಾಲದು. ಅವು ನಿತ್ಯಾನುಷ್ಠಾನಗೊಳ್ಳಬೇಕು. ದೀನ-ದಲಿತರ ಉದ್ಧಾರ ಮಹಾತ್ಮ ಕೈಗೊಂಡಿದ್ದ ಪ್ರಮುಖ ಸಾಮಾಜಿಕ ಸುಧಾರಣೆಗಳಲ್ಲಿ ಒಂದು. ಅದಕ್ಕೆ ಪೂರಕವಾಗಿ ಸ್ವಾತಂತ್ರ್ಯ ನಂತರದ ಸರಕಾರಗಳು ತತ್ಸಂಬಂಧಿ ಕಾನೂನುಗಳನ್ನು ಜಾರಿಗೊಳಿಸಿವೆಯಾದರೂ, ಅಸ್ಪೃಶ್ಯತೆಯಂಥ ಕೀಳು ಆಚರಣೆಗಳು ಅಲ್ಲೊಂದು ಇಲ್ಲೊಂದು ಕಣ್ಣಿಗೆ ರಾಚಿದಂತೆ ವರದಿಯಾಗುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ, ಜನರ ಮನಸ್ಸಿನಲ್ಲಿಯ ಭಾವನೆಗಳಲ್ಲಿ ಪರಿವರ್ತನೆ ಉಂಟಾಗಿದ್ದರೂ, ಇನ್ನೂ ಸಂಪೂರ್ಣ ಬದಲಾವಣೆ ಆಗಿಲ್ಲ ಎನ್ನುವುದು ಸತ್ಯ.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಗಾಂಧೀಜಿಯವರ ಜನ್ಮದಿನದ ಪ್ರಧಾನ ಅಂಶಗಳು ಭಾಷಣ, ಕರಪತ್ರಕ್ಕೆ ಮಾತ್ರಕ್ಕೆ ಸೀಮಿತವಾಗಿರದೆ, ಅದು ದೈನಂದಿನ ಜೀವನದಲ್ಲಿಯೂ ಅಳವಡಿಕೆಯಾದರೆ ಅದುವೇ ನಾವು ಬಾಪುಗೆ ಸಲ್ಲಿಸುವ ಮಹತ್ವದ ಗೌರವವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next