Advertisement

ಮಾಜಿ ತಂಡದ ವಿರುದ್ಧ ಗುಡುಗಿದ ವಾಟ್ಸನ್‌

12:36 PM Apr 22, 2018 | |

ಪುಣೆ: ಶೇನ್‌ ವಾಟ್ಸನ್‌ ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ತಾನಾಡಿದ ಮಾಜಿ ತಂಡದ ವಿರುದ್ಧ ಶತಕ ಬಾರಿಸಿ ಸುದ್ದಿಯಾಗಿದ್ದಾರೆ. ಶುಕ್ರವಾರ ರಾತ್ರಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 106 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿರುವುದು ಈಗ ಇತಿಹಾಸ.

Advertisement

ಇದು ಐಪಿಎಲ್‌ನಲ್ಲಿ ಶೇನ್‌ ವಾಟ್ಸನ್‌ ಬಾರಿಸಿದ 3ನೇ ಶತಕ. ಅವರ ಹಿಂದಿನೊಂದು ಶತಕ ರಾಜಸ್ಥಾನ್‌ ಪರ ಆಡುವಾಗ ಚೆನ್ನೈ ವಿರುದ್ಧ ದಾಖಲಾಗಿತ್ತು. ಶುಕ್ರವಾರದ್ದು ಉಲ್ಟಾ ಸಾಧನೆ. ಹೀಗೆ, ಐಪಿಎಲ್‌ನಲ್ಲಿ ಒಂದು ತಂಡದ ಪರ ಹಾಗೂ ವಿರುದ್ಧ ಶತಕ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆ ವಾಟ್ಸನ್‌ ಅವರದಾಗಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಚೆನ್ನೈ 5 ವಿಕೆಟಿಗೆ 204 ರನ್‌ ಬಾರಿಸಿ ಸವಾಲೊಡ್ಡಿದರೆ, ರಾಜಸ್ಥಾನ್‌ 18.3 ಓವರ್‌ಗಳಲ್ಲಿ 140 ರನ್ನಿಗೆ ಆಲೌಟ್‌ ಆಯಿತು. 106 ರನ್‌ ಬಾರಿಸಿದ ವಾಟ್ಸನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ರಾಜಸ್ಥಾನ್‌ ಪರ 45 ರನ್‌ ಮಾಡಿದ ಬೆನ್‌ ಸ್ಟೋಕ್ಸ್‌ ಅವರದೇ ಹೆಚ್ಚಿನ ಗಳಿಕೆ. ದೀಪಕ್‌ ಚಹರ್‌, ಶಾದೂìಲ್‌ ಠಾಕೂರ್‌, ಡ್ವೇನ್‌ ಬ್ರಾವೊ ಮತ್ತು ಕಣ್‌ì ಶರ್ಮ ತಲಾ 2 ವಿಕೆಟ್‌ ಕಿತ್ತು ರಾಜಸ್ಥಾನ್‌ ಸರದಿಗೆ ಕಂಟಕವಾಗಿ ಪರಿಣಮಿಸಿದರು.

ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಶೇನ್‌ ವಾಟ್ಸನ್‌, “ರಾಜಸ್ಥಾನ್‌ ವಿರುದ್ಧ ಆಡುವಾಗ ನನಗೆ ಹೆಚ್ಚಿನ ಸ್ಫೂರ್ತಿ ಲಭಿಸಿತು. ಈಗಿನ ಚೆನ್ನೈ ಫ್ರಾಂಚೈಸಿ ನನ್ನ ಮೇಲಿರಿಸಿದ ಪ್ರೀತಿಯನ್ನು ಈ ಇನ್ನಿಂಗ್ಸ್‌ ಮೂಲಕ ಸಾದರಪಡಿಸಿದ್ದೇನೆ. ನಾನಿನ್ನೂ ಆಟದ ಕೆಲವು ಸಂಗತಿಗಳತ್ತ ಹೆಚ್ಚಿನ ಗಮನ ನೀಡುತ್ತಲೇ ಇದ್ದೇನೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಕ್ಕೆ ಖುಷಿಯಾಗುತ್ತಿದೆ…’ ಎಂದರು.

ಎರಡು ದಿನ, ಎರಡು ಶತಕ…
ಶೇನ್‌ ವಾಟ್ಸನ್‌ ಶತಕದೊಂದಿಗೆ 2018ನೇ ಐಪಿಎಲ್‌ ಪಂದ್ಯಾವಳಿ ಸತತ 2ನೇ ದಿನ 2 ಶತಕಗಳನ್ನು ಕಂಡಂತಾಯಿತು. ಹಿಂದಿನ ದಿನವಷ್ಟೇ ಪಂಜಾಬ್‌ ಆರಂಭಕಾರ ಕ್ರಿಸ್‌ ಗೇಲ್‌ ಹೈದರಾಬಾದ್‌ ವಿರುದ್ಧ ಸೆಂಚುರಿ ಬಾರಿಸಿ ಮೆರೆದಿದ್ದರು. ಈ ಕುರಿತು ಸಂತಸ ವ್ಯಕ್ತಪಡಿಸಿದ ವಾಟ್ಸನ್‌, “ಕ್ರಿಸ್‌ ಗೇಲ್‌ ಟಿ20 ಕ್ರಿಕೆಟಿನ ಮಹಾನ್‌ ಬ್ಯಾಟ್ಸ್‌ಮನ್‌. ಆದ್ದರಿಂದಲೇ ಅವರಿಗೆ ಅಷ್ಟೊಂದು ಸಂಖ್ಯೆಯ ಶತಕ ಬಾರಿಸಲು ಸಾಧ್ಯವಾಯಿತು. ನಿಜಕ್ಕೂ ಅವರು ಯುನಿವರ್ಸ್‌ ಬಾಸ್‌. ಕ್ರಿಕೆಟ್‌ ವಿಶ್ವದಾದ್ಯಂತ ಅವರು ತಮ್ಮ ಸ್ಫೋಟಕ ಹೊಡೆತಗಳನ್ನು ಬಾರಿಸುತ್ತಲೇ ಇದ್ದಾರೆ…’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next