ಚೆನ್ನೈ: ಮಾಲಿವುಡ್‌ನಲ್ಲಿ(Mollywood) ಸಂಚಲನ ಸೃಷ್ಟಿಸಿರುವ ಹೇಮಾ ಸಮಿತಿ ವರದಿ(Hema Committee report) ಬಗ್ಗೆ ಸೂಪರ್ ಸ್ಟಾರ್ ನಟರೊಬ್ಬರು ತನಗೇನು ಗೊತ್ತಿಲ್ಲ ಎನ್ನುವ ಪ್ರತಿಕ್ರಿಯೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಹೇಮಾ ಸಮಿತಿ ವರದಿ ಸಲ್ಲಿಕೆ ಬಳಿಕ ಮಾಲಿವುಡ್‌ನಲ್ಲಿ ಖ್ಯಾತ ಕಲಾವಿದರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ನಿರ್ದೇಶಕ ರಂಜಿತ್(Director Ranjith), ನಟ ಜಯಸೂರ್ಯ (Actor Jayasurya), ಮುಕೇಶ್(Actor Mukesh) ಸೇರಿದಂತೆ ಹಲವರ ವಿರುದ್ಧ ಅನುಚಿತ ವರ್ತನೆ ಹಾಗೂ ಕಿರುಕುಳದ ಆರೋಪ ಕೇಳಿ ಬಂದಿದೆ.
ಈ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಮಾಲಿವುಡ್ ಸಿನಿರಂಗದ ಹಿರಿಯ ನಟರಾದ ಮೋಹನ್ ಲಾಲ್(Mohanlal) ಹಾಗೂ ಮಮ್ಮುಟ್ಟಿ(Mammootty) “ಹೇಮಾ ಸಮಿತಿಯ ವರದಿಯಲ್ಲಿ ಹೇಳಲಾದ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ” ಎಂದು ಹೇಳುವ ಮೂಲಕ ಮೌನ ಮುರಿದಿದ್ದಾರೆ.
ಮಾಲಿವುಡ್‌ನಲ್ಲಿ ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ಇತರೆ ಚಿತ್ರರಂಗದಲ್ಲೂ ಇದೇ ರೀತಿಯ ಸಮಿತಿಯನ್ನು ರಚಿಸಬೇಕೆನ್ನುವ ಕೂಗು ಕೇಳಿ ಬರುತ್ತಿದೆ.
ಈ ನಡುವೆ ಸೂಪರ್ ಸ್ಟಾರ್ ರಜಿನಿಕಾಂತ್ (Superstar Rajinikanth) ಹೇಮಾ ಸಮಿತಿ ವರದಿ ಬಗ್ಗೆ ಹೇಳಿರುವ ಮಾತೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೇಮಾ ಸಮಿತಿ ವರದಿ ಹಾಗೂ ಸಿನಿಮಾರಂಗದಲ್ಲಿನ ಕಿರುಕುಳ ಪ್ರಕರಣದ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, “ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಕ್ಷಮಿಸಿ” ಎಂದು ಹೇಳಿ ಮುಂದೆ ಸಾಗಿದ್ದಾರೆ.
ಈ ಬಗೆಗಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ರಜಿನಿಕಾಂತ್ ರಂತಹ ಹಿರಿಯ ನಟ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ ಎಂದು ನೆಟ್ಟಿಗರು ಮಾತನಾಡಿದ್ದಾರೆ.
ಲೈಂಗಿಕ ಕಿರುಕುಳ ಆರೋಪದ ಮೇಲೆ ನಟ ಜಯಸೂರ್ಯ,ನಿರ್ದೇಶಕ ರಂಜಿತ್ ಅವರ ಮೇಲೆ ಈಗಾಗಲೇ ದೂರು ದಾಖಲಾಗಿದೆ. ಈ ಆರೋಪಗಳು ಸುಳ್ಳು ಇದರ ವಿರುದ್ಧ ನಾನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಜಯಸೂರ್ಯ ಹೇಳಿದ್ದಾರೆ.